Advertisement

ಜಿಲ್ಲೆಗೆ ಜಗಲಾಸರ.. ರೌಡಿಶೀಟರ್‌ ಗಪ್‌ಚುಪ್‌

08:30 AM Jul 29, 2019 | Suhan S |

ಬಾಗಲಕೋಟೆ: ಯುವ ಐಪಿಎಸ್‌ ಅಧಿಕಾರಿ ಲೋಕೇಶ ಜಗಲಾಸರ ಜಿಲ್ಲೆಗೆ ಬಂದ ಬಳಿಕ ಜಿಲ್ಲಾ ಪೊಲೀಸ್‌ ಇಲಾಖೆ ಕಾರ್ಯಗಳಲ್ಲಿ ಬದಲಾವಣೆಗಳಾಗುತ್ತಿವೆ.

Advertisement

ಕಾನೂನು ಬಾಹಿರ ಚಟುವಟಿಕೆ ನಡೆಸುವವರು, ಕ್ಲಬ್‌ ನಡೆಸುವವರು, ರೌಡಿ ಸೀಟರ್‌ಗಳು ಈಗ ಬಾಲ ಮುದುರಿಕೊಂಡಿದ್ದಾರೆ. ಎಸ್ಪಿ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಕಾನೂನು ಸುವ್ಯವಸ್ಥೆಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ.

ಜಿಲ್ಲಾ ಪೊಲೀಸ್‌ ಇಲಾಖೆಯಲ್ಲಿ ಜನರನ್ನು ತಲುಪಲು ಬ್ಲಾಗ್‌, ವೈಬ್‌ಸೈಟ್, ಫೇಸ್‌ಬುಕ್‌, ಟ್ರೋಲ್ ಫ್ರಿ ನಂಬರ್‌ ಹೀಗೆ ಹಲವು ಸಾಧನ ವ್ಯವಸ್ಥೆಗಳಿವೆ. ಆದರೆ ಈ ಸಾಧನಗಳು ಹಲವು ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದವು. ಲೋಕೇಶ ಅವರು ಬಂದ ಬಳಿಕ ಫೇಸ್‌ಬುಕ್‌ ಮೂಲಕ ಜಿಲ್ಲೆಯ ಜನರಿಗೆ ಮಾಹಿತಿ ಕೊಡುವ ಕೆಲಸ ಜತೆಗೆ ಪೊಲೀಸ್‌ ಬ್ಲಾಗ್‌ ಕೂಡಾ ಆ್ಯಕ್ಟೀವ್‌ ಆಗಿದೆ. ವಂಚಕರಿಂದ, ಕಳ್ಳರಿಂದ, ಮೋಸಗಾರರಿಂದ ಕಾನೂನು ಬಾಹಿರ ಚಟುವಟಿಕೆಗಳಿಂದ ದೂರ ಇರಲು ಇವುಗಳಿಂದ ಜಾಗೃತಿ ಮೂಡಿಸಲಾಗುತ್ತಿದೆ.

ರೌಡಿಗಳಲ್ಲಿ ನಡುಕ: ಲೋಕೇಶ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಜಿಲ್ಲೆಯ ಎಲ್ಲ ಪೊಲೀಸ್‌ ಠಾಣೆ ವ್ಯಾಪ್ತಿಯ ರೌಡಿಶೀಟರ್‌ಗಳ ಪರೇಡ್‌ ಮಾಡಿಸಿ ಜನರಿಗೆ ತೊಂದರೆ ಕೊಡದಂತೆ, ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ. ತಿದ್ದಿಕೊಳ್ಳದ ರೌಡಿ ಸೀಟರ್‌ಗಳ ಮೇಲೆ ನಿರಂತರ ನಿಗಾ ಇಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಬಹುತೇಕ ರೌಡಿಶೀಟರ್‌ಗಳು, ತಾವಾಯ್ತು, ತಮ್ಮ ಕೆಲಸವಾಯ್ತು ಎಂಬಂತಿದ್ದಾರೆ.

ಸದ್ಯ ಜಿಲ್ಲೆಯಲ್ಲಿ ನೌಕರಿ ಕೊಡಿಸುವ ಆಮಿಷವೊಡ್ಡಿ ಹಣ ಪಡೆಯುವ ಪ್ರಕರಣ ಹೆಚ್ಚಾಗಿ ನಡೆಯುತ್ತಿವೆ. ವಿದ್ಯಾವಂತ ಯುವಕರನ್ನು ದಾರಿ ತಪ್ಪಿಸಿ 1ರಿಂದ 2ಲಕ್ಷ ಕೊಟ್ಟರೆ ಸರ್ಕಾರಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಹಣ ಪಡೆದು ವಂಚಿಸಲಾಗುತ್ತಿದೆ. ರೈಲ್ವೆ, ಕಂದಾಯ, ಆರ್‌ಡಿಪಿಆರ್‌, ನೀರಾವರಿ ಹೀಗೆ ಹಲವು ಇಲಾಖೆಗಳ ಹೆಸರೇಳಿ ಕೆಲವರು ವಂಚಿಸುತ್ತಿದ್ದು, ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.

Advertisement

ಮಾವಾ ವಿರುದ್ಧ ಕಾರ್ಯಾಚರಣೆ: ಕ್ಯಾನ್ಸರ್‌ ರೋಗ ಅತಿ ಬೇಗ ತರಿಸುವ ಈ ಮಾವಾ ವಿರುದ್ಧ ಜಿಲ್ಲೆಯಲ್ಲಿ ನಿರಂತರ ಕಾರ್ಯಾಚರಣೆ ನಡೆದಿದೆ. ಅಲ್ಲದೇ ಕೊಟ್ಪಾ ಕಾಯಿದೆ ಕಲಂ 7ರ ಪ್ರಕಾರ ಇದೇ ಮೊದಲ ಬಾರಿಗೆ ಪ್ರಕರಣ ದಾಖಲಿಸುವ ಗಟ್ಟಿ ನಿರ್ಧಾರವೂ ಜಿಲ್ಲೆಯಲ್ಲಾಗಿವೆ. ಹೀಗಾಗಿ ಮಾವಾ ಅಥವಾ ನಿಷೇಧಿತ ವಸ್ತುಗಳ ಮಾರಾಟ ಕೊಂಚ ಹತೋಟಿಗೆ ಬರುತ್ತಿದೆ ಎಂದೇ ಹೇಳಲಾಗಿದೆ.

ಪೊಲೀಸ್‌ ಸಿಬ್ಬಂದಿಗೆ ಪ್ರಶಂಸೆ: ಇಲಾಖೆಯನ್ನು ಜನಸ್ನೇಹಿ ಮಾಡುವ ಜತೆಗೆ ಇರುವ ಸಿಬ್ಬಂದಿ, ಹೊಸ ಹುಮ್ಮಸ್ಸಿನೊಂದಿಗೆ ನಿತ್ಯ ಕೆಲಸ ಮಾಡಲು ಸ್ವತಃ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಅವರೇ ಮುಂದಾಗಿದ್ದಾರೆ. ಪ್ರತಿ ತಿಂಗಳು ಅಪರಾಧ ಪ್ರಕರಣ ಭೇದಿಸುವ, ಅಪರಾಧ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ, ಅಗತ್ಯ ಗುಪ್ತ ಮಾಹಿತಿಯನ್ನು ಹಿರಿಯ ಅಧಿಕಾರಿಗಳಿಗೆ ನೀಡಿ, ಪ್ರಕರಣ ಪತ್ತೆ ಹಚ್ಚಲು ಕಾರಣರಾಗುವ ಪೊಲೀಸ್‌ ಸಿಬ್ಬಂದಿಗೆ ಮಾಸಿಕ ಪ್ರಶಂಸನೀಯ ಪತ್ರ ನೀಡುತ್ತಿದ್ದಾರೆ. ತಾವು ಎಸ್ಪಿಯಾದ ಬಳಿಕ ಮೊದಲ ತಿಂಗಳಲ್ಲಿ ಜಿಲ್ಲೆಯ 11 ಜನ ಪೊಲೀಸ್‌ ಸಿಬ್ಬಂದಿಗೆ ಅಭಿನಂದಿಸಿ, ಬೆನ್ನು ತಟ್ಟಿ ಗೌರವ ಪತ್ರ ನೀಡಿದ್ದು, ಇದರಿಂದ ಪೊಲೀಸ್‌ ಸಿಬ್ಬಂದಿ ಮತ್ತಷ್ಟು ಹುರುಪಿನಿಂದ ಕೆಲಸ ಮಾಡುವಂತಾಗಿದೆ.

ಪೊಲೀಸ್‌ ಇಲಾಖೆ ಇರುವುದೇ ಜನರಿಗಾಗಿ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕಾನೂನು ಬಾಹಿರ ಚಟುವಟಿಕೆ ಎಲ್ಲೇ ನಡೆದರೂ ಜನರು ಇಲಾಖೆ ಗಮನಕ್ಕೆ ತರಬೇಕು. ಈಚೆಗೆ ಕೆಲವರು ನೌಕರಿ ಕೊಡಿಸುತ್ತೇವೆಂದು ವಂಚಿಸುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ವ್ಯಕ್ತಿಗಳಿಗೆ ಹಣ ನೀಡಿ ಜನರು ಮೋಸ ಹೋಗಬಾರದು.• ಲೋಕೇಶ ಜಗಲಾಸರ, ಎಸ್ಪಿ

 

 

•ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next