ಮೆಲ್ಬರ್ನ್: ಆಸ್ಟ್ರೇಲಿಯದ ಹಿರಿಯ ಓಪನರ್ ಡೇವಿಡ್ ವಾರ್ನರ್ ಆ್ಯಶಸ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಭಾರತದೆದುರಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡುವುದು ಖಾತ್ರಿಯಾಗಿಲ್ಲ.
36 ವರ್ಷದ ಎಡಗೈ ಆರಂಭಿಕ ನಾಗಿರುವ ಡೇವಿಡ್ ವಾರ್ನರ್ ಕಳೆದ ಭಾರತ ಪ್ರವಾಸದ ವೇಳೆ ಗಾಯಾಳಾಗಿ ಟೆಸ್ಟ್ ಸರಣಿಯಿಂದ ಅರ್ಧದಲ್ಲೇ ಬೇರ್ಪಟ್ಟಿದ್ದರು. 3 ಇನ್ನಿಂಗ್ಸ್‌ಗಳಲ್ಲಿ ಗಳಿಸಿದ್ದು 26 ರನ್ ಮಾತ್ರ. ಹೀಗಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಇವರು ಮುಂದುವರಿಯುವ ಬಗ್ಗೆ ಅಥವಾ ಇವರನ್ನು ಈ ಸುದೀರ್ಘ ಮಾದರಿಯಲ್ಲಿ ಆಡಿಸುವ ಬಗ್ಗೆ ಅನುಮಾನಗಳಿದ್ದವು.
103 ಟೆಸ್ಟ್ ಪಂದ್ಯಗಳನ್ನಾಡಿರುವ ಡೇವಿಡ್ ವಾರ್ನರ್ 8,158 ರನ್ ಬಾರಿಸಿದ್ದಾರೆ. ಇದರಲ್ಲಿ 25 ಶತಕಗಳು ಸೇರಿವೆ.
ಆಸೀಸ್ ತಂಡದಲ್ಲಿರುವ ಮತ್ತಿಬ್ಬರು ಆರಂಭಿಕರೆಂದರೆ ಮಾರ್ಕಸ್ ಹ್ಯಾರಿಸ್ ಮತ್ತು ಮ್ಯಾಟ್ ರೆನ್‌ಶಾ. ಮಿಚೆಲ್ ಮಾರ್ಷ್ 2019ರ ಬಳಿಕ ಟೆಸ್ಟ್ ತಂಡಕ್ಕೆ ಕರೆ ಪಡೆದಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಈಗಿನ ಆ್ಯಶಸ್ ತಂಡದ ಗಾತ್ರವನ್ನು 15ಕ್ಕೆ ಇಳಿಸುವುದು ಆಸ್ಟ್ರೇಲಿಯದ ಯೋಜನೆ. ಈ ತಂಡ ಮೇ 28ಕ್ಕೆ ಪ್ರಕಟಗೊಳ್ಳಲಿದ್ದು, ಆಗ ಇಬ್ಬರು ಸ್ಥಾನ ಕಳೆದುಕೊಳ್ಳಲಿದ್ದಾರೆ. ಈ ಪಂದ್ಯ ಜೂ. 7ರಂದು, ಅಂದರೆ ಆ್ಯಶಸ್‌ಗಿಂತ ಮೊದಲೇ ಲಂಡನ್‌ನ ಓವಲ್ ಮೈದಾನದಲ್ಲಿ ಆರಂಭವಾಗಲಿದೆ.
ಇಂಗ್ಲೆಂಡ್ ಆತಿಥ್ಯದ 5 ಪಂದ್ಯ ಗಳ ಆ್ಯಶಸ್ ಸರಣಿ ಜೂ. 16ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಲಿದೆ.
ಆಸ್ಟ್ರೇಲಿಯ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಬುಶೇನ್, ನಥನ್ ಲಿಯಾನ್, ಮಿಚೆಲ್ ಮಾರ್ಷ್, ಟಾಡ್ ಮರ್ಫಿ, ಮ್ಯಾಟ್ ರೆನ್‌ಶಾ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್ ಮತ್ತು ಡೇವಿಡ್ ವಾರ್ನರ್.