Advertisement

ವಾರಾಹಿ ನೀರಾವರಿ ಯೋಜನೆ ವೇಗ ಆಮೆಗತಿ

12:49 AM Aug 06, 2023 | Team Udayavani |

ಉಡುಪಿ: ವಾರಾಹಿ ನೀರಾವರಿ ಯೋಜನೆಯ ಗಾತ್ರ ವರ್ಷದಿಂದ ವರ್ಷಕ್ಕೆ ಹಿಗ್ಗುತ್ತ ಹೋಗುತ್ತಿದ್ದು, ಇದುವರೆಗಿನ ಸರಕಾರ ಗಳು ಯೋಜನೆಯಲ್ಲಿನ ರಕ್ಷಿತಾರಣ್ಯ/ಡೀಮ್ಡ್ ಫಾರೆಸ್ಟ್‌ ಸಮಸ್ಯೆಯನ್ನು ಇತ್ಯರ್ಥಪಡಿಸಲು ಹೆಚ್ಚಿನ ಆಸಕ್ತಿ ವಹಿಸದ ಕಾರಣ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ.

Advertisement

ರಕ್ಷಿತಾರಣ್ಯ/ಡೀಮ್ಡ್ ಫಾರೆಸ್ಟ್‌ ಪ್ರದೇಶದಲ್ಲಿ ಕಾಮಗಾರಿ ನಡೆಸಲು ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಿರುವ ಪ್ರಸ್ತಾವನೆ ಕೂಡ ಅರಣ್ಯ ಇಲಾಖೆಯ ಕೇಂದ್ರ ಕಚೇರಿಯಲ್ಲೇ ಉಳಿದುಕೊಂಡಿದೆ.

ವಾರಾಹಿ ಮುಖ್ಯ ಕಾಲುವೆ, ಎರಡು ಉಪಕಾಲುವೆಯಲ್ಲಿ 12.74 ಕಿ.ಮೀ. ದೂರದ ಕಾಮಗಾರಿ ಡೀಮ್ಡ್ ಫಾರೆಸ್ಟ್‌/ ರಕ್ಷಿತಾರಣ್ಯದ ಕಾರಣದಿಂದ ಬಾಕಿಯಾಗಿದೆ. ಸರಕಾರ ಮಧ್ಯಪ್ರವೇಶಿಸಿ ಅರಣ್ಯ, ಕಂದಾಯ ಹಾಗೂ ನೀರಾವರಿ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕಿದೆ. ಈಗಾಗಲೇ ಯೋಜನೆಯ ಗಾತ್ರ 9 ಕೋ.ರೂ.ಗಳಿಂದ 1302 ಕೋ.ರೂ.ಗಳಿಗೆ ದಾಟಿದೆ.

ಯೋಜನೆಯಡಿ ಈವರೆಗೆ 6,110 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ಸೃಷ್ಟಿಸಲಾಗಿದೆ. ಆವಶ್ಯವಿರುವ 2,388 ಎಕ್ರೆ ಜಮೀನಿನಲ್ಲಿ 1,745 ಎಕ್ರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ವಾರಾಹಿ ಏತನೀರಾವರಿ ಯೋಜನೆಯಡಿ ಜಾಕ್‌ವೆಲ್‌, ಪಂಪ್‌ಹೌಸ್‌, ಡೆಲಿವರಿ ಛೇಂಬರ್‌, ಸಬ್‌ಸ್ಟೇಷನ್‌ ಮತ್ತು ವಿದ್ಯುತ್‌ ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. 9.63 ಮುಖ್ಯ ಕಾಲುವೆಯಲ್ಲಿ 2.22 ಕಿ.ಮೀ. ಪೂರ್ಣಗೊಂಡಿದ್ದು 7.41 ಬಾಕಿಯಿದೆ. 10.50 ಕಿ.ಮೀ ದೂರದ ಉಪ ಕಾಲುವೆ -1ರಲ್ಲಿ 6.82 ಕಿ.ಮೀ. ಪೂರ್ಣಗೊಂಡಿದ್ದು 3.68 ಕಿ.ಮೀ ಬಾಕಿಯಿದೆ. 6.64 ಕಿ.ಮೀ. ದೂರದ ಉಪಕಾಲುವೆ-2ರಲ್ಲಿ 4.99 ಕಿ.ಮೀ. ಪೂರ್ಣಗೊಂಡಿದ್ದು 1.65 ಕಾಮಗಾರಿ ಬಾಕಿಯಿದೆ. ರಕ್ಷಿತಾರಣ್ಯ/ ಡೀಮ್ಡ್ ಪ್ರದೇಶದ ವ್ಯಾಪ್ತಿಯಲ್ಲಿ ಭೂಮಿ ಕುರಿತು ಅರಣ್ಯ ಇಲಾಖೆಗೆ ಪ್ರಸ್ತಾವನೆ ಹೋಗಿದೆ. ಅಲ್ಲಿಂದ ಅನುಮತಿ ಇನ್ನೂ ಬಂದಿಲ್ಲ.

ಏತ ನೀರಾವರಿ
ವಾರಾಹಿ ಯೋಜನೆಯಡಿ ಐದು ಏತ ನೀರಾವರಿ ಯೋಜನೆಗಳು ಬರುತ್ತವೆ. ಅದರಲ್ಲಿ 3 ಪೂರ್ಣಗೊಂಡಿದ್ದು ಎರಡು ಟೆಂಡರ್‌ ಅನುಮೋದನೆ ಹಂತದಲ್ಲಿದೆ. 1,730 ಹೆಕ್ಟೇರ್‌ ಪ್ರದೇಶಕ್ಕೆ ನೀರು ಪೂರೈಸುವ ಸೌಪರ್ಣಿಕ ನೀರಾವರಿ ಯೋಜನೆ 64.65 ಕೋ.ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ. 1,350 ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುವ ಸೌಕೂರು ಏತ ನೀರಾವರಿ ಯೋಜನೆ 73.71 ಕೋ.ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ. 1,500 ಹೆಕ್ಟೇರ್‌ ಪ್ರದೇಶಕ್ಕೆ ನೀರು ಪೂರೈಸುವ ಎಣ್ಣೆಹೊಳೆ ಏತ ನೀರಾವರಿ ಯೋಜನೆ 108 ಕೋ.ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ. 1,200 ಹೆಕ್ಟೇರ್‌ ಪ್ರದೇಶಕ್ಕೆ ನೀರು ಒದಗಿಸುವ ಸಿದ್ದಾಪುರ ಏತ ನೀರಾವರಿ ಯೋಜನೆಗೆ 190 ಕೋ.ರೂ. ಅಂದಾಜುಪಟ್ಟಿ ಹಾಗೂ 1,100 ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುವ ಸ್ವರ್ಣಾ ಏತ ನೀರಾವರಿ ಯೋಜನೆಗೆ 188 ಕೋ.ರೂ. ಅಂದಾಜುಪಟ್ಟಿ ಸಿದ್ಧಪಡಿಸಿ, ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಎರಡು ಏತ ನೀರಾವರಿ ಯೋಜನೆ ಸದ್ಯ ಟೆಂಡರ್‌ ಅನುಮೋದನೆ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ.

Advertisement

15,702 ಹೆಕ್ಟೇರ್‌ನಲ್ಲಿ 120 ಕಿ.ಮೀ. ವಾರಾಹಿ ಅಚ್ಚುಕಟ್ಟು
ಬಲದಂಡೆ ಸಾಮಾನ್ಯ ನಾಲೆ ಒಟ್ಟು 42.73 ಕಿ.ಮೀ. ಉದ್ದವಿದ್ದು 1,992 ಹೆಕ್ಟೇರ್‌ ಪ್ರದೇಶ ಒಳಗೊಳ್ಳಲಿದೆ. ಎಡದಂಡೆ ನಾಲೆ 44.35 ಕಿ.ಮೀ. ಉದ್ದವಿದ್ದು 10,987 ಹೆಕ್ಟೇರ್‌ ಹಾಗೂ ಏತ ನೀರಾವರಿ ಕಾಲುವೆ 33 ಕಿ.ಮೀ. 2,723 ಹೆಕ್ಟೇರ್‌ ಪ್ರದೇಶವನ್ನು ಒಳಗೊಳ್ಳಲಿದೆ. ಒಟ್ಟಾರೆಯಾಗಿ 120 ಕಿ.ಮೀ. ನಾಲೆ/ ಕಾಲುವೆಯು 15,702 ಹೆಕ್ಟೇರ್‌ ಪ್ರದೇಶವನ್ನು ಒಳಗೊಳ್ಳಲಿದೆ.

ವಾರಾಹಿ ಬಲದಂಡೆ ಸಾಮಾನ್ಯ ನಾಲೆಯ 18.72 ಕಿ.ಮೀ ಉದ್ದದ ಕಾಲುವೆ ನಿರ್ಮಾಣ ಈಗಾಗಲೇ ಪೂರ್ಣಗೊಂಡಿದೆ. ಆದರೆ 24.05 ಕಿ.ಮೀ. ಉದ್ದದ ಕಾಲುವೆ ನಿರ್ಮಾಣ ಕಾಮಗಾರಿ ಇನ್ನು ಆರಂಭವಾಗಿಲ್ಲ. ವಾರಾಹಿ ಎಡದಂಡೆಯ 43.45 ಕಿ.ಮೀಃ ಉದ್ದದ ಕಾಲುವೆ ಹಾಗೂ 147 ಕಿ.ಮೀ ಇದ್ದದ ವಿತರಣ ನಾಲೆಯಲ್ಲಿ 20.35 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. 52.95 ಕಿ.ಮೀ. ಕಾಮಗಾರಿಗೆ ಅಂದಾಜು ಪಟ್ಟಿ ತಯಾರಿಕ ಹಂತದಲ್ಲಿ ಬಾಕಿಯಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ವಾರಾಹಿ ಯೋಜನೆ ಸಂಬಂಧ ಸಮಗ್ರ ಮಾಹಿತಿ ಎಂಜಿನಿಯರ್‌ಗಳ ಮೂಲಕ ಪಡೆಯಲಾಗಿದೆ. ರಕ್ಷಿತಾರಣ್ಯ/ಡೀಮ್ಡ್ ಫಾರೆಸ್ಟ್‌ಗಳಲ್ಲಿ ಕಾಮಗಾರಿ ನಡೆಸಲು ಅನುಮತಿ ಕೋರಿ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಆದಷ್ಟು ಬೇಗ ಅನುಮತಿ ಪಡೆಯಲು ಪ್ರಯತ್ನಿಸಲಾಗುವುದು.
– ಡಾ| ವಿದ್ಯಾ ಕುಮಾರಿ, ಜಿಲ್ಲಾಧಿಕಾರಿ, ಉಡುಪಿ

 ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next