Advertisement

ವಾರಾಹಿ ಕುಡಿಯುವ ನೀರಿನ ಕಾಮಗಾರಿ ಆಮೆಗತಿ

01:51 AM Sep 15, 2020 | mahesh |

ಕುಂದಾಪುರ: ಹಾಲಾಡಿಯ ಭರತ್ಕಲ್‌ನಿಂದ ಉಡುಪಿ ನಗರಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಯ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಕುಂದಾಪುರ, ಬ್ರಹ್ಮಾವರದ 23 ಗ್ರಾಮಗಳಿಗೆ ಈ ಪೈಪ್‌ಲೈನ್‌ನಿಂದಲೇ ನೀರು ಸರಬರಾಜು ಆಗುವ ಕಾರಣ ಇಲ್ಲಿನ ಜನತೆಯೂ ಕಾಮಗಾರಿ ಶೀಘ್ರ ಮುಗಿಯಲಿ ಎಂದು ಹಾರೈಸುತ್ತಿದ್ದಾರೆ. ಆದರೆ ಕೊರೊನಾ ಲಾಕ್‌ಡೌನ್‌ ಮೊದಲಾದ ನೆಪಗಳನ್ನು ನೀಡಿ ಕಾಮಗಾರಿ ವಿಳಂಬವಾಗುತ್ತಿದ್ದು ಇದೇ ವೇಗದಲ್ಲಿ ಸಾಗಿದರೆ ಇನ್ನೂ 10 ವರ್ಷಗಳಾದರೂ ಕಾಮಗಾರಿ ದಡ ಸೇರದು ಎನ್ನುತ್ತಾರೆ ಸ್ಥಳೀಯರು.

Advertisement

23 ಗ್ರಾಮಗಳಿಗೆ ನೀರು
ಭರತ್ಕಲ್‌ ಮೂಲಕ ಬಜೆಗೆ ನೀರು ಸಾಗಿಸುವಾಗ ಹಾಲಾಡಿ, ಶಂಕರನಾರಾಯಣ, ಕಾಡೂರು, ವಂಡಾರು, ಬಿಲ್ಲಾಡಿ, ಆವರ್ಸೆ, ಹೆಗ್ಗುಂಜೆ, ಚೇರ್ಕಾಡಿ, ಪಜೆಮೊಗ್ರು, ಕುಕ್ಕೆಹಳ್ಳಿ ಗ್ರಾಮ ಪಂಚಾಯತ್‌ಗಳನ್ನು ಹಾದು ಹೋಗಲಿದೆ. ಇಲ್ಲಿ ಕೂಡ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ನೀರೆತ್ತುವ ಭರತ್ಕಲ್‌ನಲ್ಲಿಯೇ ನೀರನ್ನು ಶುದ್ಧೀಕರಿಸಿ ಮಾರ್ಗ ಮಧ್ಯದ ಅಷ್ಟೂ ಪಂಚಾಯತ್‌ಗಳ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಿ ಎನ್ನುವ ಬೇಡಿಕೆಯಿತ್ತು. ಆಗ ವಿಧಾನಸಭೆಯಲ್ಲಿ ಸರಕಾರ ಇದನ್ನು ತಿರಸ್ಕರಿಸಿ, ಬಜೆಯಲ್ಲಿ ಈಗಾಗಲೇ ಶುದ್ಧೀಕರಣ ಘಟಕ ಇದ್ದು, ಭರತ್ಕಲ್‌ನಲ್ಲಿ ಹೊಸದಾಗಿ ಶುದ್ಧೀಕರಣ ಘಟಕ ನಿರ್ಮಿಸಿದರೆ 500 ಎಕರೆ ಭೂ ಪ್ರದೇಶ ಮುಳುಗಡೆಯಾಗಲಿದೆ. ಜತೆಗೆ ನಗರಸಭೆಗೆ ವಾರ್ಷಿಕ 1.2 ಕೋ.ರೂ. ವಿದ್ಯುತ್‌ ಬಿಲ್‌ ಹೆಚ್ಚುವರಿಯಾಗಲಿದೆ. ಮಾರ್ಗ ಮಧ್ಯದ ಪಂಚಾಯತ್‌ಗಳಿಗೆ ಕಚ್ಚಾ ನೀರು ಒದಗಿಸುವಂತೆ ಪೈಪ್‌ಲೈನ್‌ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿತ್ತು. ಆಗ ಸ್ಥಳೀಯರು ಬೇಡಿಕೆಯನ್ನು ವಿಧಾನಪರಿಷತ್‌ ಅರ್ಜಿ ಸಮಿತಿ ಮುಂದೆ ಇರಿಸಿದ್ದರು. ಅಲ್ಲಿ ತೀರ್ಮಾನವಾದಂತೆ ಹಾಲಾಡಿ ಸಮೀಪದ ಭರತ್ಕಲ್‌ನಲ್ಲಿಯೇ 50 ಎಂಎಲ್‌ಡಿ ಸಾಮರ್ಥ್ಯದ ಶುದ್ಧೀಕರಣ ಘಟಕ ಸ್ಥಾಪಿಸಲಾಗುತ್ತದೆ. ಅಲ್ಲಿಂದ ಶುದ್ಧೀಕರಿಸಿದ ನೀರನ್ನು ಪೈಪ್‌ಲೈನ್‌ ಮೂಲಕ ನೇರವಾಗಿ ಮಣಿಪಾಲದ ಜಿ.ಎಲ್‌.ಆರ್‌.ಗೆ ತರಲಾಗುತ್ತದೆ. ಅಲ್ಲಿಂದ ಉಡುಪಿ-ಮಣಿಪಾಲಕ್ಕೆ ನೀರು ವಿತರಣೆ ಮಾಡಲಾಗುತ್ತದೆ. ಪೈಪ್‌ಲೈನ್‌ ಹಾದು ಹೋಗುವ 23 ಗ್ರಾಮಗಳಿಗೂ ಈ ಮೂಲಕ ಶುದ್ಧ ನೀರು ಸಿಗಲಿದೆ. ಅವುಗಳಿಗೆ ಬಲ್ಕ್ ಮೀಟರ್‌ ಅಳವಡಿಕೆ ಯೋಜನೆ ಹೊಂದಲಾಗಿದೆ. ಈಗಾಗಲೇ ಪಂಚಾಯತ್‌ಗಳಿಗೆ ಎಲ್ಲೆಲ್ಲಿ ಪಾಯಿಂಟ್‌ಗಳು ಬೇಕು ಎಂಬ ಮಾಹಿತಿಯನ್ನು ಕೇಳಲಾಗಿದ್ದು ಹಾಲಾಡಿ ಸಹಿತ ವಿವಿಧ ಪಂಚಾಯತ್‌ಗಳು ಬೇಡಿಕೆಯನ್ನು ಕಳುಹಿಸಿವೆ.

ವಿಳಂಬಿತ ಕಾಮಗಾರಿ
ಕರ್ನಾಟಕ ನಗರ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಮೂಲಕ 2018ರ ಮಾ.27ಕ್ಕೆ ಟೆಂಡರ್‌ ಆಗಿದ್ದು 18 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. 38.5 ಕಿ.ಮೀ. ಪೈಕಿ ವಂಡಾರು, ಮಾವಿನಕಟ್ಟೆ ಭಾಗದಲ್ಲಿ ಸುಮಾರು 2 ಕಿ.ಮೀ.ನಷ್ಟು ಪೈಪ್‌ಲೈನ್‌ ಕಾಮಗಾರಿ ನಡೆದಿದೆ. 500 ಮೀ.ಗೆ ಆಗುವಷ್ಟು ಪೈಪ್‌ಗ್ಳನ್ನು ತಂದಿರಿಸಲಾಗಿದೆ.
ಈಗಾಗಲೇ ಶೇ.50ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. 1 ವರ್ಷ ದೊಳಗೆ ಕಾಮಗಾರಿಯನ್ನು ಮುಕ್ತಾಯಗೊಳಿ ಸುವ ನಿಟ್ಟಿನಲ್ಲಿ ಸರ್ವ ರೀತಿಯಲ್ಲಿ ಪ್ರಯತ್ನಗಳು ನಡೆಯಲಿವೆ ಎನ್ನುತ್ತಾರೆ ಇದಕ್ಕೆ ಸಂಬಂಧಿಸಿದವರು.

ಏನಿದು ಯೋಜನೆ?
ಉಡುಪಿ ನಗರಕ್ಕೆ ನೀರುಣಿಸುವ ಸ್ವರ್ಣಾ ನದಿಯ ನೀರು ವರ್ಷದ 8 ತಿಂಗಳು ಮಾತ್ರ ಸಾಲುತ್ತಿದ್ದು, ಉಳಿದ 4 ತಿಂಗಳಿಗೆ ವಾರಾಹಿ ನದಿಯಿಂದ ನೀರು ಒದಗಿಸುವುದು ಯೋಜನೆ. ಇದಕ್ಕಾಗಿ ಅಮೃತ್‌ (ಅಟಲ್‌ ಮಿಶನ್‌ ರೆಜುವನೇಶನ್‌ ಆ್ಯಂಡ್‌ ಅರ್ಬನ್‌ ಟ್ರಾನ್ಸ್‌
ಫಾರ್ಮೇಶನ್‌) ಯೋಜನೆಯಲ್ಲಿ 122.5 ಕೋ.ರೂ. ವೆಚ್ಚದಲ್ಲಿ ಡಿಪಿಆರ್‌ ಮಾಡಲಾಗಿದೆ. ಹಾಲಾಡಿಯ ಭರತ್ಕಲ್‌ನಿಂದ 864 ಎಂಎಂ ಗಾತ್ರದ ಪೈಪಿನಲ್ಲಿ 38.5 ಕಿ.ಮೀ. ದೂರದ ಬಜೆ ಅಣೆಕಟ್ಟಿಗೆ ನೀರು ತಂದು ಅಲ್ಲಿ ಶುದ್ಧೀಕರಿಸಿ ಉಡುಪಿಗೆ ಒದಗಿಸುವುದು ಯೋಜನೆ.

ರಸ್ತೆ ಅವ್ಯವಸ್ಥೆ
ಪೈಪ್‌ಲೈನ್‌ ಕಾಮಗಾರಿ ನಡೆಸುವಾಗ ರಸ್ತೆ ಅಗೆಯಬೇಕಾಗಿ ಬಂದು ಅವ್ಯವಸ್ಥೆ ಆಗುವುದು ಸಹಜ. ಆದರೆ ಇಲ್ಲಿ ನಿಗದಿಗಿಂತ ಹೆಚ್ಚೇ ಅವ್ಯವಸ್ಥೆಯಾಗಿದೆ. ಚೋರಾಡಿ ಮಂದಾರ್ತಿ ರಸ್ತೆ ವಾಹನ ಸಂಚಾರವೇ ಕಷ್ಟ ಎಂಬಂತೆ ಆಗಿದೆ. ಈ ರಸ್ತೆಗೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಅನುದಾನ ಮೀಸಲಿಟ್ಟಿದ್ದು ಟೆಂಡರ್‌ ಆಗಿದೆ. ಆದರೆ ಕಾಮಗಾರಿ ಆರಂಭವಾಗುತ್ತಿದ್ದಂತೆಯೇ ಪೈಪ್‌ಲೈನ್‌ಗಾಗಿ ಅಗೆತ ಆರಂಭವಾಗಿತ್ತು. ಅತ್ತ ಅದೂ ಇಲ್ಲ, ಇತ್ತ ಇದೂ ಇಲ್ಲ, ವಾಹನ ಹೋಗುವಂತೆಯೂ ಇಲ್ಲ ಎಂಬಂತಹ ಸ್ಥಿತಿ ಈಗ ಬಂದಿದೆ.
– ಅಶೋಕ್‌ ಶೆಟ್ಟಿ, ಚೋರಾಡಿ

Advertisement

2 ವರ್ಷದಲ್ಲಿ ಪೂರ್ಣ
ಕೋವಿಡ್‌ ಕಾರಣದಿಂದ ವಿಳಂಬ ವಾಗಿದ್ದು ಕಾರ್ಮಿಕರು ಊರಿಗೆ ತೆರಳಿರುವುದರಿಂದ ಹಿನ್ನಡೆಯಾಗಿತ್ತು. ಕಳೆದ 1 ತಿಂಗಳಿನಿಂದ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. ಯೋಜನೆಗೆ ಬೇಕಿರುವ ಎಲ್ಲ ರೂಪುರೇಷೆಗಳನ್ನು ಹಂತಹಂತವಾಗಿ ಕಾರ್ಯರೂಪಕ್ಕೆ ತರಲಾಗು ತ್ತಿದೆ. 2022 ಮಾರ್ಚ್‌ನಲ್ಲಿ ಯೋಜನೆ ಪೂರ್ಣವಾಗಲಿದ್ದು 2021ರ ಕೊನೆಗೆ ಪೈಪ್‌ಲೈನ್‌ ಕಾಮಗಾರಿ ಮುಗಿಯಲಿದೆ.
– ರಘುಪತಿ ಭಟ್‌, ಶಾಸಕ, ಉಡುಪಿ

ಲಕ್ಷ್ಮೀಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next