Advertisement
ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳಾಪಟ್ಟಿ ಪ್ರಕಟ ಹಿನ್ನೆಲೆಯಲ್ಲಿ ಮೈತ್ರಿ ಕುರಿತು ಚರ್ಚಿಸಿದರು. ಸ್ಥಳೀಯವಾಗಿ ಪ್ರಬಲ ಹಾಗೂ ವರ್ಚಸ್ಸು ಹೊಂದಿರುವ ಮುಖಂಡರು ಚುನಾವಣೆಯಲ್ಲಿ ಪಕ್ಷದ ಪರವಾಗಿ ಸ್ಪರ್ಧಿಸುವ ಬಯಕೆ ಹೊಂದಿದ್ದಾರೆ. ಅಲ್ಲಿಯೂ ಮೈತ್ರಿ, ವಾರ್ಡ್ ಹಂಚಿಕೆ ಎಂದರೆ ದೊಡ್ಡ ಕಸರತ್ತು ಮಾಡಬೇಕಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಜತೆಗೆ ತಳಮಟ್ಟದಿಂದ ಪಕ್ಷ ಬಲಪಡಿಸಿ ಲೋಕಸಭೆ ಚುನಾವಣೆಗೆ ಸಜ್ಜುಗೊಳಿಸಲೂ ನೆರವಾಗಲಿದೆ ಎಂಬ ಲೆಕ್ಕಾಚಾರ ಕಾಂಗ್ರೆಸ್ ಪಕ್ಷದ್ದಾಗಿದೆ.
Related Articles
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಕೂಡ ಹಿಂದೇಟು ಹಾಕಿದೆ. ಪಕ್ಷದ ಸರ್ಕಾರ ಅಧಿಕಾರದಲ್ಲಿರುವುದರಿಂದ ಅದರ ಲಾಭ ಪಡೆದು ಏಕಾಂಗಿಯಾಗಿ ಸ್ಪರ್ಧಿಸಿ ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಬಳಸಿಕೊಳ್ಳಬೇಕು. ಚುನಾವಣಾ ನಂತರ ಅಗತ್ಯ ಇರುವ ಕಡೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ಪಕ್ಷದಲ್ಲಿ ಕೇಳಿಬಂದಿದೆ. ಇದಕ್ಕೆ ಪಕ್ಷದ ವರಿಷ್ಠರೂ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ.
Advertisement
ಈ ಕುರಿತಂತೆ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ದೆಹಲಿಯಿಂದ ಹಿಂದಿರುಗುತ್ತಿದ್ದಂತೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಚರ್ಚೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಂಡು ಕಾಂಗ್ರೆಸ್ ನಾಯಕರಿಗೆ ತಮ್ಮ ಪಕ್ಷದ ನಿರ್ಧಾರ ತಿಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಗೌಡರು ಈ ಹಿಂದೇ ಹೇಳಿದ್ದರು ರಾಜ್ಯಾಧಿಕಾರಕ್ಕಾಗಿ ಮಾಡಿಕೊಂಡ ಮೈತ್ರಿಯನ್ನು ಲೋಕಸಭೆ ಚುನಾವಣೆಯಲ್ಲೂ ಮುಂದುವರಿಸುವ ಬಗ್ಗೆ ಜೆಡಿಎಸ್ ಮತ್ತು ಕಾಂಗ್ರೆಸ್ ತೀರ್ಮಾನ ಕೈಗೊಂಡ ಬಳಿಕ ಈ ಮೈತ್ರಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಅನ್ವಯವಾಗುವುದಿಲ್ಲ ಎಂದು ದೇವೇಗೌಡರು ಈ ಹಿಂದೆಯೇ ಹೇಳಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರ ಅಭಿಪ್ರಾಯವೂ ಇದೇ ಆಗಿದೆ. ಹೀಗಾಗಿ ಚುನಾವಣಾ ಪೂರ್ವ ಮೈತ್ರಿಗಿಂತ ಚುನಾವಣೋತ್ತರ ಮೈತ್ರಿ ಬಗ್ಗೆ ಜೆಡಿಎಸ್ ಹೆಚ್ಚು ಆಸಕ್ತಿ ಹೊಂದಿದೆ. ಈ ಹಿಂದೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜೆಡಿಎಸ್ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಿಂತ ಉತ್ತಮ ಸಾಧನೆ ತೋರಿಸಿತ್ತು. ಇದರ ಪರಿಣಾಮ ಬಿಜೆಪಿ ಅಥವಾ ಕಾಂಗ್ರೆಸ್ ಜತೆ ಸೇರಿ ಅನೇಕ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರವನ್ನೂ ಗಳಿಸಲು ಸಾಧ್ಯವಾಗಿತ್ತು. ಇದೀಗ ಸರ್ಕಾರದ ನೇತೃತ್ವವನ್ನು ಜೆಡಿಎಸ್ ವಹಿಸಿಕೊಂಡಿದ್ದು, ಇದರ ಅನುಕೂಲ ಪಡೆದು ತನ್ನ ಶಕ್ತಿ ಹೆಚ್ಚಿಸಿಕೊಂಡರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಾಗ ಒಂದೆರಡು ಹೆಚ್ಚು ಕ್ಷೇತ್ರಗಳನ್ನು ಕೇಳಲು ಸಾಧ್ಯವಾಗುತ್ತದೆ ಎಂಬುದು ಸ್ಥಳೀಯ ನಾಯಕರ ವಾದ ಎಂದು ಹೇಳಲಾಗಿದೆ. ಬಿಜೆಪಿಯಿಂದಲೂ ಸಿದ್ಧತೆ
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸಲು ಬಿಜೆಪಿ ಸಹ ಸಜ್ಜಾಗಿದೆ. ಲೋಕಸಭೆ ಚುನಾವಣೆಗೆ 25 ಸ್ಥಾನ ಗೆಲ್ಲುವಂತೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೀಡಿರುವ ಟಾರ್ಗೆಟ್ ತಲುಪಲು ಇದು ನಮಗೆ “ಟೆಸ್ಟ್’ ಆಗಿದೆ. ಹೀಗಾಗಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ಗಿಂತ ಹೆಚ್ಚು ಸ್ಥಾನ ಗಳಿಸಲು ಪ್ರಯತ್ನಿಸಬೇಕು ಎಂದು ಈಗಾಗಲೇ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರು ಹಾಗೂ ಕಳೆದ ಚುನಾವಣೆಯಲ್ಲಿ ಸೋತವರು, ಮಾಜಿ ಶಾಸಕರ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆಯಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಲು ನಿರ್ದೇಶನ ನೀಡಲು ನಿರ್ಧರಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸುವ ಸಲುವಾಗಿಯೇ ಜಿಲ್ಲಾವಾರು ಉಸ್ತುವಾರಿ ನೇಮಕಕ್ಕೂ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.