ಇಸ್ಲಾಮಾಬಾದ್: ಜಮ್ಮು ಕಾಶ್ಮೀರದ 370ನೇ ವಿಧಿ ರದ್ದುಗೊಳಿಸಿದ ನಂತರದಿಂದ ಪ್ರತಿ ದಿನವೂ ಭಾರತದ ವಿರುದ್ಧ ವಾಗ್ಧಾಳಿ ನಡೆಸುತ್ತಿರುವ ಪಾಕಿಸ್ಥಾನ ಒಂದು ದಿನ ಯುದ್ಧಕ್ಕೆ ಸಿದ್ಧವಿದ್ದೇವೆ ಎಂದರೆ ಮತ್ತೂಂದು ದಿನ ಯುದ್ಧವೊಂದೇ ನಮ್ಮ ಆಯ್ಕೆಯಲ್ಲ ಎಂಬ ಗೊಂದಲದ ಹೇಳಿಕೆ ನೀಡುತ್ತಿದೆ.
ಶುಕ್ರವಾರವಷ್ಟೇ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಸಂಪಾದಕೀಯ ಲೇಖನ ಬರೆದಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಯುದ್ಧದ ಕರಿನೆರಳು ಬೀರುತ್ತಿದೆ ಎಂದಿದ್ದರು. ಆದರೆ ಅದರ ಮರುದಿನ ಅಂದರೆ ಶನಿವಾರ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ, ಕಾಶ್ಮೀರ ಸಮಸ್ಯೆ ಬಗೆಹರಿಸಲು ಯುದ್ಧದಿಂದ ಸಾಧ್ಯವಿಲ್ಲ ಎಂದಿದ್ದಾರೆ.
ಬಿಬಿಸಿ ಉರ್ದುಗೆ ನೀಡಿದ ಸಂದರ್ಶನದಲ್ಲಿ, ಪಾಕಿಸ್ಥಾನವು ಎಂದಿಗೂ ಕಠೊರ ನೀತಿ ಅನುಸರಿಸಿಲ್ಲ. ಶಾಂತಿ ಕಾಪಾಡಿಕೊಳ್ಳುವುದಕ್ಕೆ ಆದ್ಯತೆ ನೀಡಿದ್ದೇವೆ ಎಂದು ತೇಪೆ ಹಚ್ಚುವ ಯತ್ನ ನಡೆಸಿದ್ದಾರೆ.
ಅಫ್ಘಾನಿಸ್ತಾನ ಹೋರಾಡಿದರೆ ಸಿಗುತ್ತೆ ಪಿಒಕೆ!: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಭಾರತ ಹೋರಾಟ ನಡೆಸಿ, ಅಮೆರಿಕ ತನ್ನ ಸೇನೆಯನ್ನು ಹಿಂಪಡೆಯಲು ಭಾರತ ಅವಕಾಶ ಮಾಡಿಕೊಟ್ಟರೆ, ಆಗ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯಲು ಅಮೆರಿಕವು ಭಾರತಕ್ಕೆ ನೆರವಾಗಲಿದೆ ಎಂದು ಬಿಜೆಪಿ ರಾಜ್ಯ ಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಅಫ^ನ್‌ನಲ್ಲಿ ಸೇನೆ ಹಿಂಪಡೆಯುವ ನಿಟ್ಟಿನಲ್ಲಿ ಮಹತ್ವದ ಪ್ರಗತಿಯಾಗಿದ್ದು, ಮಾತುಕತೆ ಅಂತಿಮ ಹಂತ ತಲುಪಿದೆ ಎಂದು ಇತ್ತೀಚೆಗೆ ತಾಲಿಬಾನ್ ಹಾಗೂ ಅಮೆರಿಕ ಹೇಳಿದ ಹಿನ್ನೆಲೆಯಲ್ಲಿ ಸ್ವಾಮಿ ಈ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, 7 ಸಾವಿರ ಮೈಲು ದೂರದಲ್ಲಿರುವ ಅಮೆರಿಕವೊಂದೇ ಅಫ್ಘಾನಿಸ್ತಾನದಲ್ಲಿ ಹೋರಾಟ ನಡೆಸುತ್ತಿದೆ. ಅಫ್ಘಾನಿಸ್ತಾನದ ನೆರೆ ದೇಶಗಳೂ ಹೋರಾಟ ನಡೆಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಹೇಳಿದ್ದರು.
ಕಾಶ್ಮೀರದ ಬಹುತೇಕ ಕಡೆ ನಿರ್ಬಂಧ ಸಡಿಲಿಕೆ: ಶುಕ್ರವಾರ ಪ್ರಾರ್ಥನೆಯ ದಿನ ಕಾಶ್ಮೀರದ ಹಲವೆಡೆ ನಿರ್ಬಂಧ ತೀವ್ರಗೊಳಿಸಲಾಗಿತ್ತಾದರೂ, ಶನಿವಾರ ಬಹುತೇಕ ಕಡೆ ನಿರ್ಬಂಧ ಸಡಿಲಿಸಲಾಗಿದೆ. ರಸ್ತೆಗಳ ಬ್ಯಾರಿಕೇಡ್‌ಗಳನ್ನು ತೆಗೆಯಲಾಗಿದ್ದು, ಸರಾಗ ಜನಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಪಾಕ್: ಸಾಮಾಜಿಕ ಮಾಧ್ಯಮದಲ್ಲಿ ಪಾಕಿಸ್ಥಾನವು ಕಾಶ್ಮೀರದ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ. ಈ ಮೂಲಕ ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದು ಮಹಾರಾಷ್ಟ್ರದ ಸೈಬರ್ ಪೊಲೀಸ್ ವಿಭಾಗದ ಐಜಿಪಿ ಬ್ರಿಜೇಶ್ ಸಿಂಗ್ ಹೇಳಿದ್ದಾರೆ. ಭಾರತೀಯ ಹೆಸರನ್ನು ಹೊಂದಿರುವ ಖಾತೆಗಳಿಂದ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಸುಳ್ಳು ವಿಡಿಯೋಗಳು, ಮೆಸೇಜ್‌ಗಳು ಮತ್ತು ಚಿತ್ರಗಳನ್ನೂ ಪಾಕ್ ಹರಿಬಿಡುತ್ತಿದೆ ಎಂದು ಅವರು ಹೇಳಿದ್ದಾರೆ.