Advertisement

ಯುದ್ಧ ಭೂಮಿಯಲ್ಲಿ ಅರಳಿದ ಪ್ರೀತಿ

04:45 PM Feb 09, 2018 | Team Udayavani |

“ಮನಸ್ಸಲ್ಲಿರೋದನ್ನು ಯಾವತ್ತೂ ಹೆಚ್ಚು ದಿನ ಮುಚ್ಚಿಡಬಾರದು, ಹೇಳಿಬಿಡಬೇಕು. ಆ ನಂತರ ನಮಗೆ ಹೇಳಬೇಕೆನಿಸಿದರೂ ಕಾಲ ಮಿಂಚಿ ಹೋಗಿರುತ್ತದೆ …’ ಮಗನನ್ನು ಕಳಕೊಂಡ ದುಃಖದ ಸನ್ನಿವೇಶವೊಂದರಲ್ಲಿ ತಂದೆಯೊಬ್ಬರು ಹೀಗೆ ಹೇಳುತ್ತಾರೆ. ಆದರೆ, ಅವರೆದುರು ನಿಂತ ಯುವ ಜೋಡಿ ಅದನ್ನು ತಮ್ಮ ಪ್ರೀತಿಗೆ ಕನೆಕ್ಟ್ ಮಾಡಿಕೊಳ್ಳುತ್ತದೆ. ಇಬ್ಬರ ಮನಸ್ಸಲ್ಲಿ ಪ್ರೀತಿ ಇದೆ. ಒಬ್ಬರನ್ನೊಬ್ಬರು ಇಷ್ಟಪಡುತ್ತಿದ್ದಾರೆ. ಆದರೆ, ಹೇಳಿಕೊಳ್ಳಲು ಸಂಕೋಚ.

Advertisement

ನಿಶ್ಚಿತಾರ್ಥ ಆಗಿರುವ ಹುಡುಗಿಯಾಗಿ ತಾನು ಹೇಗೆ ತನ್ನ ಪ್ರೀತಿಯನ್ನು ತೋಡಿಕೊಳ್ಳುವುದು ಎಂಬ ಸಂಕೋಚ ಆಕೆಗಾದರೆ, ನಾಳೆ ಮತ್ತೂಬ್ಬರನ್ನು ಮದುವೆಯಾಗಲು ಅಣಿಯಾಗಿರುವ ಹುಡುಗಿಗೆ ತನ್ನ ಪ್ರೀತಿಯ ಬಗ್ಗೆ ತಿಳಿಸಿದರೆ ಅವಳು ತನ್ನನ್ನು ಕೆಟ್ಟದಾಗಿ ನೋಡಿದರೆ ಎಂಬ ಭಯ ಆತನದು. ಈ ಭಯದಲ್ಲೇ ಇಬ್ಬರ ಪ್ರೀತಿ ಚಿಪ್ಪಿನೊಳಗಿರುವ ಮುತ್ತಿನಂತಿರುತ್ತದೆ. ಈ ಗ್ಯಾಪಲ್ಲಿ ಹುಡುಗಿಯ ಮದುವೆ ಸಂಭ್ರಮ ಗರಿಗೆದರುತ್ತದೆ.

ಮನಸ್ಸಲ್ಲಿ ಪ್ರೀತಿಸಿದ ಹುಡುಗ, ಕೈಯಲ್ಲಿ ಮನೆಯವರು ಇಷ್ಟಪಟ್ಟ ಹುಡುಗ ತೊಡಿಸಿದ ಉಂಗುರ … ಒಲ್ಲದ ಮದುವೆನಾ, ಇಷ್ಟಪಟ್ಟ ಹುಡುಗನಾ … ಮುಂದೇನಾಗುತ್ತದೆ ಎಂಬ ಕುತೂಹಲವಿದ್ದರೆ ನೀವು “ಪ್ರೇಮ ಬರಹ’ ನೋಡಿ. ಮಗಳನ್ನು ಲಾಂಚ್‌ ಮಾಡಲು ಅರ್ಜುನ್‌ ಸರ್ಜಾ ಅವರು ಒಂದು ಲವ್‌ಸ್ಟೋರಿಯನ್ನು ತೆಗೆದುಕೊಂಡಿದ್ದಾರೆ. ಆದರೆ, ಈ ಲವ್‌ಸ್ಟೋರಿಗೆ ಅವರು ಕೊಟ್ಟ ಹಿನ್ನೆಲೆ ಕಾರ್ಗಿಲ್‌ ಯುದ್ಧದು.

ಹಾಗೆ ನೋಡಿದರೆ ಅರ್ಜುನ್‌ ಸರ್ಜಾ ಅವರ ಉದ್ದೇಶ ಚೆನ್ನಾಗಿದೆ. ಒಂದು ಕಡೆ ಲವ್‌ಸ್ಟೋರಿಯನ್ನು ಕಟ್ಟಿಕೊಡಬೇಕು, ಜೊತೆಗೆ ಸೀರಿಯಸ್‌ ಆಗಿರುವ, ಈ ದೇಶಕ್ಕೆ ಸಂಬಂಧಿಸಿದ ಅಂಶವನ್ನೂ ಹೇಳಬೇಕೆಂಬ ಉದ್ದೇಶದಿಂದ ಲವ್‌ಸ್ಟೋರಿಗೆ ಕಾರ್ಗಿಲ್‌ ಯುದ್ಧದ ಹಿನ್ನೆಲೆ ಕೊಟ್ಟಿದ್ದಾರೆ. ದೇಶದ ಸೈನಿಕರು ಪಡುವ ಕಷ್ಟ, ದೇಶ ಚೆನ್ನಾಗಿರಬೇಕೆಂಬ ಕಾರಣಕ್ಕೆ ಅವರು ತಮ್ಮ ಜೀವ ಒತ್ತೆ ಇಟ್ಟು ಹೋರಾಡುವ ಪರಿಯನ್ನು ಇಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಅರ್ಜುನ್‌ ಸರ್ಜಾ.

ಯುದ್ಧದ ಸನ್ನಿವೇಶವನ್ನು ಇನ್ನೂ ರೋಚಕವಾಗಿ ಕಟ್ಟಿಕೊಡುವ ಅವಕಾಶ ಅವರಿಗಿತ್ತು. ಆದರೆ, ಸ್ಟಾಕ್‌ ಶಾಟ್‌ ಹಾಗೂ ಕ್ಲೋಸಪ್‌ನಲ್ಲೇ ಯುದ್ಧ ಮುಗಿದು ಹೋಗುತ್ತದೆ. ಬೆಂಗಳೂರಿನಿಂದ ಕಾರ್ಗಿಲ್‌ ಯುದ್ಧದ ಕವರೇಜ್‌ಗೆ ಎರಡು ವಾಹಿನಿಗಳ ವರದಿಗಾರರು ಕಾರ್ಗಿಲ್‌ಗೆ ತೆರಳುವ ಮೂಲಕ ಸಿನಿಮಾದ ಕಥೆ ತೆರೆದುಕೊಳ್ಳುತ್ತದೆ. ಆರಂಭದಲ್ಲಿ ಹಾವು-ಮುಂಗುಸಿ ತರಹ ಇರುವ ಆ ಇಬ್ಬರು ಅಲ್ಲಿನ ಸನ್ನಿವೇಶದಲ್ಲಿ ಹೇಗೆ ಪರಸ್ಪರ ಹತ್ತಿರವಾಗುತ್ತಾರೆ, ಒಬ್ಬರನ್ನೊಬ್ಬರು ಇಷ್ಟಪಡಲಾರಂಭಿಸುತ್ತಾರೆಂಬುದು ಚಿತ್ರದ ಒನ್‌ಲೈನ್‌. 

Advertisement

ಚಿತ್ರದಲ್ಲಿ ಲವ್‌ಸ್ಟೋರಿಯ ಜೊತೆಗೆ ಕುಟುಂಬವೊಂದರ ಕಥೆ, ಆ ಕುಟುಂಬದ ಹಿರಿಯ ತಲೆ, ಅವರ ಕನಸು, ಜೊತೆಗೆ ತಂದೆ-ತಾಯಂದಿರನ್ನು ವೃದ್ಧಾಶ್ರಮಕ್ಕೆ ಬಿಡುತ್ತಿರುವ ಮಂದಿ … ಈ ಅಂಶಗಳು ಕೂಡಾ ಬಂದು ಹೋಗುತ್ತವೆ. ಅರ್ಜುನ್‌ ಸರ್ಜಾ ಅವರು “ಪ್ರೇಮ ಬರಹ’ವನ್ನು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಆಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಅದರ ಪರಿಣಾಮವಾಗಿ ಫೈಟ್‌, ಕಾಮಿಡಿಗಳು ಇವೆ. ಹಾಗೆ ನೋಡಿದರೆ ಈ ದೃಶ್ಯಗಳನ್ನು ಕತ್ತರಿಸುವ ಅಥವಾ ಟ್ರಿಮ್‌ ಮಾಡುವ ಅವಕಾಶ ನಿರ್ದೇಶಕರಿಗಿತ್ತು.

ಲವ್‌ಸ್ಟೋರಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತೋರಿಸಬಹುದಿತ್ತು. ಪ್ರೀತಿಯನ್ನು ಮನಸ್ಸಿನಲ್ಲಿಟ್ಟುಕೊಂಡ ಪ್ರೇಮಿಗಳ ತೊಳಲಾಟ, ಏನೋ ಹೇಳಬೇಕೆಂದು ಹೋದಾಗ ಇನ್ನೇನೋ ಸನ್ನಿವೇಶಗಳು ಎದುರಾಗೋದೆಲ್ಲವೂ ಸಾಮಾನ್ಯವಾಗಿವೆ. ಆದರೆ, ಚಿತ್ರದ ಕ್ಲೈಮ್ಯಾಕ್ಸ್‌ ವೇಳೆ ಬರುವ ಟ್ವಿಸ್ಟ್‌ ಮಾತ್ರ ಸಿನಿಮಾದ ಪ್ಲಸ್‌ ಪಾಯಿಂಟ್‌. ಏನೋ ಆಗುತ್ತದೆ ಎಂದು ಭಾವಿಸಿಕೊಂಡಿದ್ದ ಪ್ರೇಕ್ಷಕರಿಗೆ ಅಲ್ಲಿ ಬೇರೆಯದ್ದೇ ಟ್ವಿಸ್ಟ್‌ ಸಿಗುತ್ತದೆ. 

“ಪ್ರೇಮ ಬರಹ’ ಮೂಲಕ ನಾಯಕಿಯಾಗಿ ಎಂಟ್ರಿಕೊಟ್ಟಿರುವ ಐಶ್ವರ್ಯಾ ಸರ್ಜಾ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾ ನೋಡಿದವರಿಗೆ ಇದು ಅವರ ಅವರ ಮೊದಲ ಸಿನಿಮಾ ಎನಿಸುವುದಿಲ್ಲ. ಆ ಮಟ್ಟಿಗೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರೇಮಿಯಾಗಿ, ಬೋಲ್ಡ್‌ ಹುಡುಗಿಯಾಗಿ, ಫ್ಯಾಮಿಲಿ ಗರ್ಲ್ ಆಗಿ ಅವರು ಇಷ್ಟವಾಗುತ್ತಾರೆ. ನೃತ್ಯದಲ್ಲೂ ಅವರು ಇಷ್ಟವಾಗುತ್ತಾರೆ. ನಾಯಕ ಚಂದನ್‌ ಪಾತ್ರಕ್ಕೆ ಜೀವ ತುಂಬಲು ಪ್ರಯತ್ನಿಸಿದ್ದಾರೆ.

ಉಳಿದಂತೆ ಕೆ. ವಿಶ್ವನಾಥ್‌, ಸುಹಾಸಿನಿ, ಸಾಧು ಕೋಕಿಲ, ರಂಗಾಯಣ ರಘು, ಪ್ರಕಾಶ್‌ ರೈ ಸೇರಿದಂತೆ ಅನೇಕರು ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಹಿಸಿದ್ದಾರೆ. ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ “ಪ್ರೇಮ ಬರಹ’ ಹಾಡನ್ನು ಸೊಗಸಾಗಿ ಚಿತ್ರೀಕರಿಸಲಾಗಿದೆ. “ಹನುಮಾನ್‌’ ಹಾಡಿನಲ್ಲಿ ದರ್ಶನ್‌, ಚಿರಂಜೀವಿ, ಧ್ರುವ, ಅರ್ಜುನ್‌ ಸರ್ಜಾ ಕಾಣಿಸಿಕೊಂಡಿದ್ದಾರೆ. 

ಚಿತ್ರ: ಪ್ರೇಮ ಬರಹ 
ನಿರ್ಮಾಣ – ನಿರ್ದೇಶನ: ಅರ್ಜುನ್‌ ಸರ್ಜಾ
ತಾರಾಗಣ: ಚಂದನ್‌, ಐಶ್ವರ್ಯಾ ಸರ್ಜಾ, ಕೆ.ವಿಶ್ವನಾಥ್‌, ಸುಹಾಸಿನಿ, ಸಾಧು ಕೋಕಿಲ, ರಂಗಾಯಣ ರಘು, ಪ್ರಕಾಶ್‌ ರೈ ಮುಂತಾದವರು

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next