Advertisement
“ಗದೆ ಎಂದಕೂಡಲೇ ಬಾಲ್ಯದ ನೆನಪುಗಳು ನುಗ್ಗಿ ಬರುತ್ತವೆ. ಜಾತ್ರೆಯಲ್ಲಿ ಪ್ರತಿದಿನ ಯಕ್ಷಗಾನ ನಡೆಯುತ್ತಿದ್ದ ಕಾಲ ಅದು. ಜಾತ್ರೆಯ ಹದಿನೈದು ದಿನಗಳಲ್ಲಿ ಯಕ್ಷಗಾನವೇ ಪ್ರಮುಖ ಆಕರ್ಷಣೆ. ಗದಾಯುದ್ಧ, ದುರೊಧನಾವಸಾನ, ಕೃಷ್ಣಸಂಧಾನ, ಶರಸೇತುಬಂಧ, ಕಂಸವಧೆ ಮುಂತಾದ ಪ್ರಸಂಗಗಳಲ್ಲಿ “ಗದೆ’ಗಳಿಗೇ ಹೆಚ್ಚು ಮಹತ್ವ. ಸಾಮಾನ್ಯವಾಗಿ ಗದೆಯಿಲ್ಲದೇ ಹೋದ ಪ್ರಸಂಗಗಳೇ ಕಡಿಮೆ. ಇಂತಹ ಯಕ್ಷಗಾನಗಳನ್ನು ನೋಡಿ ರಸಾನಂದ ಹೊಂದಿದ ದಿನಗಳೆಷ್ಟೋ! ನೆನೆದರೆ ಇವತ್ತಿಗೂ ಮನಸ್ಸು ಖುಷಿಯಿಂದ ಕುಣಿದಾಡುತ್ತದೆ. ಅಂದಿನ ಯಕ್ಷಗಾನದ ಒಂದು ಪ್ರಸಂಗ ಹೀಗಿದೆ. ಪ್ರಸಂಗ ಏನೆಂದಿರಾ? ಅದೇ ಗದಾಯುದ್ಧ. ಆವತ್ತಿನ ಪ್ರಸಿದ್ಧ ಜೋಡಿ ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಲವಳ್ಳಿ ವೆಂಕಟೇಶ ರಾವ್ ಪಾತ್ರಧಾರಿಗಳು. ಚಿಟ್ಟಾಣಿಯವರ ದುರೊಧನ, ಜಲವಳ್ಳಿಯವರ ಭೀಮ. ಈ ಜೋಡಿಗೆ ಮಾರು ಹೋಗದವರಾರು? ಚಿಟ್ಟಾಣಿ ಖಳ ಪಾತ್ರದಲ್ಲಿ ವೇದಿಕೆಗೆ ಬಂದರು. ದುರ್ಯೋಧನನನ್ನು ಅಟ್ಟಿಸಿಕೊಂಡು ಬಂದ ಭೀಮ. ಚಿಟ್ಟಾಣಿ ರಂಗ ಪ್ರವೇಶ ಮಾಡುತ್ತಿದ್ದ ಹಾಗೆ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು! ಕೇಕೆ ಹಾಕಿದರು! ಸಿಳ್ಳು ಹೊಡೆದರು! ಚಿಕ್ಕವಳಾದ ನನಗೆ ದುರ್ಯೋಧನ ಕೆಟ್ಟವನಾದರೂ ಯಾಕೆ ಅವನಿಗಿಷ್ಟೊಂದು ಚಪ್ಪಾಳೆ? ಎಂದು ಅರ್ಥವಾಗಲಿಲ್ಲ. ಆದರೆ, ಆ ಚಿಕ್ಕ ವಯಸ್ಸಿನಲ್ಲಿ ಕೂಡ ಅವರ ಕುಣಿತದ ಮೋಹಕ ಭಂಗಿಗೆ ಮಾರುಹೋಗಿಬಿಟ್ಟೆ. ಅವರು ಗದೆ ಬೀಸುವ ಪರಿ, ಊರುಭಂಗ, ಮುಕುಟಭಂಗದ ಅಪಮಾನವನ್ನು ನಟಿಸಿದ ಪರಿ… ವೈಶಂಪಾಯನ ಸರೋವರದಲ್ಲಡಗಿದಾಗ ಭೀಮ ಕರೆಯುತ್ತಾನೆ: “ಎಲಾ, ಎಲಾ ಛೀ, ಥೂ ನೃಪ ಕುಲ ಕುನ್ನಿ… ಕಳುವಿನ ಜೂಜಾಡುವ ಬಾರೈ’ ಎಂದಾಗ ಅವರು ಹಲ್ಲು ಮಸೆದ ರೀತಿ- ಎಲ್ಲವೂ, ಎಲ್ಲವೂ “ಗದಾಯುದ್ಧ’ವನ್ನು ಪ್ರೀತಿಸುವಂತೆ ಮಾಡಿತ್ತು.
ಗದೆ ಗದೆಯಂ ಘಟ್ಟಿಸೆ ಪುಟ್ಟಿದ ಕೆಂಡದ ಕಿರಿಯವೇಣು³ಂ ದೆಸೆಯುಂ
ಪುದಿಯೆ ಪದಧೂಳಿ ಗಗನದೊ
ಳೊದವೆ ಸುರರ್ ಬೆದರು ಕಾದಿದರ್ ಕಡುಗಲಿಗಳ್
-ಗದೆಗೆ ಗದೆ ಅಪ್ಪಳಿಸಲಾಗಿ ಹುಟ್ಟಿದ ಕೆಂಡದ ಕಿಡಿಗಳು ಎಂಟೂ ದಿಕ್ಕುಗಳನ್ನು ತುಂಬಿ, ಅವರ ಕಾಲಿನಿಂದೆದ್ದ ಧೂಳು ಆಕಾಶಕ್ಕೇರಲಾಗಿ ದೇವತೆಗಳು ಬೆದರುವಂತೆ ಆ ಧೀರರು ಕಾದಿದರು.
ಮೈಯೆಲ್ಲ ಕಣ್ಣಾಗುವಂತೆ ಮಾಡುತ್ತಿತ್ತು ಆ ಕ್ಷಣಗಳು.
ಗದಾಪರ್ವದ- ಯಕ್ಷಗಾನದ ಆ ಸಾಲುಗಳಿನ್ನೂ ನನ್ನ ಕಿವಿಗಳಲ್ಲಿದೆ: ಸರಳ ಭೋಜನ ಕರಗಿನುರಿಗೆ ದೂತದಿ ಗೆದ್ದ
ಪರಿಗೆ ವಸನವ ಸೆಲೆದುರಿತಕ್ಕೆ ವನಕೆಮ್ಮ
ತೆರಳಿಸಿದ ದೋಷಕೆ ಗದಾಘಾತವಿದು ನೋಡು ದುರುಳ…
ಇದು ಕೇವಲ ದುರ್ಯೋಧನನಿಗೆ ಭೀಮ ಹೇಳುತ್ತಿರುವ ಮಾತು ಮಾತ್ರವಲ್ಲ ಎಲ್ಲ ಕಾಲದಲ್ಲೂ ಇರುವ ಧೂರ್ತರಿಗೂ ಕೂಡ. ಖೇದದ ಸಂಗತಿಯೆಂದರೆ ಇಂತಹ ರಸಾನಂದಕ್ಕೂ ವೈಭವಕ್ಕೂ ಕಾರಣವಾದ “ಗದೆ’ ಇಂದು ಎಂತೆಂಥ ಪ್ರಸಂಗಗಳಿಗೆ ಸಿಕ್ಕಿಹಾಕಿಕೊಂಡಿದೆ! ನಿಯತಕಾಲಿಕಗಳನ್ನೇ ನೋಡಿ, “ಆಸ್ತಿಗಾಗಿ ಅಣ್ಣತಮ್ಮಂದಿರ ನಡುವೆ ಗದಾಯುದ್ಧ, ತಮ್ಮನನ್ನು ಕೊಂದ ಅಣ್ಣ’ ಅಂತಲೋ; “ಎರಡು ಪಕ್ಷಗಳ ನಡುವೆ ಗದಾಯುದ್ಧ, “ಗೆಲುವಿನ ಮಾಲೆ ಯಾರಿಗೆ?’
Related Articles
Advertisement
ರನ್ನನ ಗದಾಯುದ್ಧದ ಈ ಪದ್ಯವನ್ನು ಗಮನಿಸಿ….ನಿರರ್ಥನಿರಹಂಕಾರಂ
ನಿರಾಯುಧಂ ದೀನವದನನದಿಂದಳಿದರಂ
ಕರುಣಿಸಿ ಕಳಿಪಿದರಿರೆಯದೆ
ಪರಾಜ್ಮುಖಸ್ಥಿತರನಿಲ್ಲಿ ಕಡುಮುಳಿದಾಳಳ್
-ನಿರುಪಯುಕ್ತರೂ, ಅಹಂಕಾರವಿಲ್ಲದವರೂ, ಆಯುಧಹೀನರೂ ದೀನರಾದವರೂ, ಬೆನ್ನು ತಿರುಗಿಸಿ ನಿಂತವರೂ ಆದ ಶತ್ರುಗಳನ್ನು ಕಂಡು ಕ್ಷುದ್ರರಾದ ಭಟರು ನೋಯಿಸದೆ ಕರುಣೆಯಿಂದ ಕಳುಹಿಸಿಕೊಟ್ಟರು ಇನ್ನೂ ಒಂದು ವಿಷಯ ಮರೆತಿದ್ದೆ. ಈಚೆಗೆ ಕೆಲವು ರಾಜಕಾರಣಿಗಳಿಗೆ ಬೆಳ್ಳಿಯ ಗದೆ, ಚಿನ್ನದ ಕತ್ತಿ ಮುಂತಾದವನ್ನು ನೀಡಿ ಗೌರವಿಸಲಾಗುತ್ತಿದೆ. ರಾಜಕೀಯವೂ ರಂಣರಂಗವಾಗಿದೆ ಎನ್ನುವುದನ್ನು ಇದು ಚಿತ್ರಿಸುತ್ತದೆಯಾ? ಪತ್ರಿಕೆಯವರು ಇತ್ತೀಚೆಗೆ ಒಂದು ರಿವ್ಯೂ ಹಾಕಿದ್ದರು! ಟಿ.ವಿ.ಗಳಲ್ಲಿ ಬರುತ್ತಿರುವ ಪೌರಾಣಿಕ ಧಾರಾವಾಹಿಗಳನ್ನು ನೋಡಿ ಮಕ್ಕಳು ಗನ್ನಿನ ಬದಲಾಗಿ “ಗದೆ’ಯನ್ನು ಆಟಿಕೆಯಾಗಿ ಬಳಸಲು ಇಷ್ಟಪಡುತ್ತಿದ್ದಾರಂತೆ! ಗದೆಯ ಮಾರಾಟ ಇದರಿಂದ ಜಾಸ್ತಿಯಾಗಿದೆಯಂತೆ. ಸಂಧ್ಯಾ ಹೆಗಡೆ