ದಾವಣಗೆರೆ: ರಾಜ್ಯಾದ್ಯಂತ ವಕ್ಫ್ ಸಮಸ್ಯೆ ಪರಿಹಾರಕ್ಕೆ ನಮ್ಮ ಭೂಮಿ ನಮ್ಮ ಹಕ್ಕು ಎಂಬ ಹಕ್ಕೊತ್ತಾಯದೊಂದಿಗೆ ಶುಕ್ರವಾರ (ನ.22) ಜಿಲ್ಲಾ ಬಿಜೆಪಿ ಮುಖಂಡರು, ಕಾರ್ಯಕರ್ತರು ಮಹಾನಗರ ಪಾಲಿಕೆ ಎದುರು ಜನಜಾಗೃತಿ ಆಂದೋಲನ ನಡೆಸಿದರು.
ವಕ್ಫ್ ಅಸ್ತಿ ಸಂಬಂಧ ಇಡೀ ರಾಜ್ಯದಲ್ಲಿ ಸಮಸ್ಯೆ ಎದುರಾಗಿದೆ. ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತ ಸಮುದಾಯದ ತುಷ್ಟೀಕರಣ ನೀತಿಯ ಫಲವಾಗಿ ಸಾವಿರಾರು ಸಂಖ್ಯೆಯ ರೈತರು, ಮಠಾಧೀಶರು, ಸ್ವಾಮೀಜಿ, ನಾಗರಿಕರು ಇದು ನಮ್ಮ ಭೂಮಿ ಎಂದು ಬೀದಿಗಿಳಿದು ಹೋರಾಟ ಮಾಡಬೇಕಾದ ವಾತಾವರಣ ಸೃಷ್ಟಿಸಿದೆ. ಹಿಂದೂ ಸಮಾಜದ ಆಸ್ತಿಗಳನ್ನು ಲ್ಯಾಂಡ್ ಜಿಹಾದ್ ಮೂಲಕ ಕಬಳಿಸುವ ಹುನ್ನಾರ ನಡೆಸಿರುವ ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿ ದಿನ ಒಂದಿಲ್ಲೊಂದು ಹಗರಣ, ಭ್ರಷ್ಟಾಚಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಈಗ ವಕ್ಫ್ ಕಾಯ್ದೆ ಮುಂದಿಟ್ಟು ರಾತ್ರೋರಾತ್ರಿ ಆಸ್ತಿಗಳನ್ನು ವಕ್ಫ್ ಮಂಡಳಿ ಆಸ್ತಿಯನ್ನಾಗಿ ಮಾಡುತ್ತಿದೆ. ನೋಟಿಸ್ ರದ್ದು ಪಡಿಸುವುದಾಗಿ ಸರ್ಕಾರ ಹೇಳುತ್ತಿದೆ. ನೋಟಿಸ್ ರದ್ದುಗೊಳಿಸುವ ಜೊತೆಗೆ ಪಹಣಿ ಕಾಲಂ 11 ರಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದನ್ನೂ ತೆಗೆದು ಹಾಕುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಈಗ ಸಾಂಕೇತಿಕವಾಗಿ ಹೋರಾಟ ನಡೆಸಲಾ ಗುತ್ತಿದೆ. ಸರ್ಕಾರ ವಕ್ಫ್ ಸಮಸ್ಯೆಗೆ ಶಾಶ್ವತವಾದ ಪರಿಹಾರ ಕೊಡದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮಾಜಿ ಸಚಿವರಾದ ರೇಣುಕಾಚಾರ್ಯ, ಎಸ್.ಎ. ರವೀಂದ್ರನಾಥ್, ಮಾಜಿ ಶಾಸಕರಾದ ಪ್ರೊ. ಎನ್. ಲಿಂಗಣ್ಣ, ಎಂ. ಬಸವರಾಜ್ ನಾಯ್ಕ, ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಗಾಯಿತ್ರಿ ಸಿದ್ದೇಶ್ವರ, ಎನ್. ರಾಜಶೇಖರ ನಾಗಪ್ಪ, ಮಾಡಾಳ್ ಮಲ್ಲಿಕಾರ್ಜುನ್, ಪಿ.ಸಿ. ಶ್ರೀನಿವಾಸ್ ಭಟ್, ಲೋಕಿಕೆರೆ ನಾಗರಾಜ್, ಬಿ.ಜಿ.ಅಜಯ್ ಕುಮಾರ್, ಸಿ.ಅನಿಲ್ ಕುಮಾರ್ ನಾಯಕ್, ಎಚ್.ಪಿ.ವಿಶ್ವಾಸ್, ಕೊಟ್ರೇಶ್, ಎಚ್.ಬಿ.ನವೀನ್ ಕುಮಾರ್, ಎಚ್.ಸಿ. ಜಯಮ್ಮ, ಭಾಗ್ಯ ಪಿಸಾಳೆ, ಕೆ.ಬಿ. ಶಂಕರನಾರಾಯಣ, ಚಂದ್ರಶೇಖರ್ ಪೂಜಾರ್, ಗೌತಮ್ ಜೈನ್ ಇತರರು ಇದ್ದರು.