Advertisement

ವಕ್ಫ್ ಆಸ್ತಿ ದುರುಪಯೋಗ,ಕಬಳಿಕೆಗೆ ಅವಕಾಶ ಕೊಡಲ್ಲ: ಜಮೀರ್‌ ಅಹಮದ್‌

06:00 AM Aug 05, 2018 | Team Udayavani |

ಬೆಂಗಳೂರು: ವಕ್ಫ್ ಆಸ್ತಿ ದೇವರ ಆಸ್ತಿಯಾಗಿದ್ದು ದುರುಪಯೋಗ ಅಥವಾ ಕಬಳಿಕೆಗೆ ಅವಕಾಶ ಕೊಡುವುದಿಲ್ಲ  ಎಂದು ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್‌ ಅಹಮದ್‌ ತಿಳಿಸಿದ್ದಾರೆ.

Advertisement

ವಿಕಾಸಸೌಧದಲ್ಲಿ ಶನಿವಾರ ವಕ್ಫ್ ಆಸ್ತಿಗಳ ರಕ್ಷಣೆ ಹಾಗೂ ಅಭಿವೃದ್ಧಿ ಕುರಿತು ಮುತವಲ್ಲಿಗಳ ಸಭೆ ನಡೆಸಿದ ಅವರು, ವಕ್ಫ್ ಆಸ್ತಿ ಸರಿಯಾಗಿ ನಿರ್ವಹಣೆ ಮಾಡಿ ಅಗತ್ಯ ಇರುವ ಕಡೆ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಿದರೆ ಸರ್ಕಾರದ ಮುಂದೆ ಅನುದಾನ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.

ವಕ್ಫ್ ಆಸ್ತಿಗಳ ರಕ್ಷಣೆ ವಿಚಾರದಲ್ಲಿ ನಾನು ತುಂಬಾ ಕಠಿಣ ತೀರ್ಮಾನ ಕೈಗೊಳ್ಳುತ್ತೇನೆ.ರಾಜ್ಯದ ಪ್ರತಿ ತಾಲೂಕು ಪ್ರವಾಸ ಕೈಗೊಂಡು ಅಲ್ಲಿರುವ ವಕ್ಫ್ ಆಸ್ತಿಗಳ ಸ್ಥಿತಿಗತಿ ಮಾಹಿತಿ ಪಡೆಯಲಿದ್ದೇನೆ. ಮುತವಲ್ಲಿಗಳ ಉಸ್ತುವಾರಿಯಲ್ಲಿರುವ ವಕ್ಫ್ ಆಸ್ತಿಗಳು ಸರಿಯಾದ ನಿರ್ವಹಣೆ ಹಾಗೂ ಅಭಿವೃದ್ಧಿ ಮಾಡದಿರುವುದು ಕಂಡು ಬಂದರೆ ತಕ್ಷಣ ಉಸ್ತುವಾರಿಗಳ ಬದಲಾವಣೆ ಮಾಡಲಿದ್ದೇನೆ ಎಂದು ತಿಳಿಸಿದರು.

ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಕುರಿತು  ಈಗಾಗಲೇ ಮುತವಲ್ಲಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದ್ದು ಒಂದಿಬ್ಬರು ಮಾತ್ರ ಉತ್ತರ ನೀಡಿದ್ದಾರೆ. ಉಳಿದವರು ಉತ್ತರ ನೀಡಿಲ್ಲ. ಅಂತಹ ಪ್ರಕರಣಗಳು ನ್ಯಾಯಾಲಯಕ್ಕೆ ಹೋಗಲಿವೆ. ಹೀಗಾಗಿ, ಇನ್ನೂ ಹದಿನೈದು ದಿನ ಕಾಲಾಕವಾಶ ನೀಡುತ್ತೇನೆ. ಎಲ್ಲರೂ ಸೂಕ್ತ ಉತ್ತರ ನೀಡಿ ಎಂದು ಸೂಚನೆ ನೀಡಿದರು.

ವಕ್ಫ್ ಆಸ್ತಿ ದುರುಪಯೋಗ ಅಥವಾ ಕಬಳಿಕೆಯಲ್ಲಿ ಎಂತಹ ದೊಡ್ಡ ವ್ಯಕ್ತಿ ಇದ್ದರೂ, ಎಷ್ಟೇ ಪ್ರಭಾವ ಇದ್ದರೂ ನಾನು ಬಿಡುವುದಿಲ್ಲ. ಏಕೆಂದರೆ ಅದು ದೇವರ ಆಸ್ತಿ. ಅದನ್ನು ಮುಂದಿನ ಪೀಳಿಗೆಗೆ ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದರು.

Advertisement

ಮುಸ್ಲಿಂ ಸಮುದಾಯದ ಸ್ಮಶಾನಗಳಿಗೆ ಕಾಂಪೌಂಡ್‌ ಇಲ್ಲದೆ ಒತ್ತುವರಿಯಾಗಿರುವ ಪ್ರಕರಣಗಳ ಬಗ್ಗೆಯೂ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಎಲ್ಲೆಲ್ಲಿ ಕಾಂಪೌಂಡ್‌ ಅಗತ್ಯವಿದೆಯೋ ಅಲ್ಲಿ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಅದರ ಮಾಹಿತಿ ಸಮುದಾಯಕ್ಕೆ ಕೊಡುವ ಹೊಣೆಗಾರಿಕೆ ನಿಮ್ಮ ಮೇಲಿದೆ. ಶಿಕ್ಷಣ, ಆರೋಗ್ಯ, ಸಮುದಾಯ ಭವನ ನಿರ್ಮಾಣಕ್ಕೆ ನಾವು ಹೆಚ್ಚು ಒತ್ತು ನೀಡಬೇಕಿದೆ ಎಂದು ಹೇಳಿದರು.

ರಾಜ್ಯದಲ್ಲಿ ಆಧಾರ್‌ ಕಾರ್ಡ್‌ ಶೇ.96 ರಷ್ಟು ಮುಗಿದಿದೆ. ಶೇ.4 ಮಾತ್ರ ಉಳಿದಿದೆ. ನನ್ನ ಪ್ರಕಾರ  ಇನ್ನೂ ಆಧಾರ್‌ ಕಾರ್ಡ್‌ ಮಾಡಿಸಿಕೊಳ್ಳದೆ ಇರುವವರಲ್ಲಿ ನಮ್ಮ ಸಮುದಾಯದವರೇ ಹೆಚ್ಚು ಎನಿಸುತ್ತದೆ. ಆಧಾರ್‌ ಕಾರ್ಡ್‌, ಪಡಿತರ ಕಾರ್ಡ್‌ ಮಾಡಿಸಿಕೊಳ್ಳಲು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು. ಸರ್ಕಾರದ ಸವಲತ್ತುಗಳನ್ನು ತಲುಪಿಸಲು ಅಧಿಕಾರಿಗಳಷ್ಟೇ ಅಲ್ಲದೆ ಸಮುದಾಯದ ಮುಖಂಡರೂ ಮುಂದಾಗಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next