Advertisement

Waqf Property: ವಿಜಯಪುರದ ರೈತರಿಗೆ ಕೊಟ್ಟಿರುವ ನೋಟಿಸ್‌ ವಾಪಸ್‌ಗೆ ಕ್ರಮ: ಸಚಿವ ಪಾಟೀಲ್

06:59 PM Oct 28, 2024 | Esha Prasanna |

ಬೆಂಗಳೂರು: ವಿಜಯಪುರದ ರೈತರಿಗೆ ‌ವಕ್ಫ್ ಬೋರ್ಡ್ ನೀಡಿರುವ ನೋಟಿಸ್‌ನಿಂದಾಗಿ ವಿಪಕ್ಷ ಬಿಜೆಪಿ-ಜೆಡಿಎಸ್‌ನಿಂದ ಟೀಕೆಗೆ ಗುರಿಯಾಗುವ ಜೊತೆಗೆ ಭಾರೀ ಮುಜುಗರಕ್ಕೆ ಒಳಗಾಗಿರುವ ರಾಜ್ಯ ಕಾಂಗ್ರೆಸ್‌ ಸರಕಾರವು ರೈತರಿಗೆ ನೀಡಿರುವ ನೋಟಿಸ್‌ ವಾಪಸ್ ಪಡೆಯಲು ಸೂಚಿಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

Advertisement

ವಿಜಯಪುರ ಜಿಲ್ಲೆಯ ರೈತರ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ಗುರುತಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ ಪಾಟೀಲ್ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನೋಟಿಸ್ ಹಿಂಪಡೆಯಲಾಗುವುದು ಅಲ್ಲದೆ ತಪ್ಪಿನ ಬಗ್ಗೆ ವಿಚಾರಿಸಲಾಗುತ್ತಿದೆ ಎಂದು ಹೇಳಿದರು.

ರೈತರ ಜಮೀನು ಕಬಳಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಬಿಜೆಪಿಯವರು ಅನಾವಶ್ಯಕವಾಗಿ ರಾಜಕೀಯ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಮಾಡೋದು ಸೂಕ್ತ ಅಲ್ಲ. ರೈತರಿಗೆ ನೋಟಿಸ್‌ ಹೋಗಿದ್ದರೆ ಅದನ್ನು ವಾಪಸ್ ಪಡೆಯುತ್ತೇವೆ ಎಂದು ಎಂ.ಬಿ ಪಾಟೀಲ್ ಈಗಾಗಲೇ ಹೇಳಿದ್ದಾರೆ. ಅಲ್ಲಿನ ತಹಶೀಲ್ದಾರ್ ತಪ್ಪು ಮಾಡಿದ್ದಾರೆ. ಹೀಗಾಗಿ ನೋಟಿಸ್‌ ವಾಪಸ್ ಪಡೆಯೋ ಕೆಲಸ ಮಾಡ್ತೀವಿ. ರಾಜಕೀಯವಾಗಿ ಆರೋಪ ಮಾಡೋದು ಸರಿಯಲ್ಲ ಎಂದರು.

ತಪ್ಪು‌ ಮಾಡಿರೋದು ತಹಶೀಲ್ದಾರ್, ಜಮೀರ್ ಏಕೆ ರಾಜೀನಾಮೆ ಕೊಡಬೇಕು?
ಇದೇ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ರಾಜಿನಾಮೆಗೆ ಬಿಜೆಪಿ ಪಟ್ಟು ಹಿಡಿದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಜಮೀರ್ ಯಾಕೆ ರಾಜೀನಾಮೆ ಕೊಡಬೇಕು? ತಹಶೀಲ್ದಾರ್ ತಪ್ಪು‌ ಮಾಡಿರೋದು. ತಹಶೀಲ್ದಾರ್ ನೋಟಿಸ್‌ ಕೊಟ್ಟಿದ್ರೆ ಅದನ್ನು ಜಿಲ್ಲಾಧಿಕಾರಿ ನೋಡ್ತಾರೆ. ಅದಕ್ಕೂ ಮೇಲೆ ಸರ್ಕಾರ ಇದೆ. ಹೀಗಿರುವಾಗ ಜಮೀರ್ ಯಾಕೆ ರಾಜೀನಾಮೆ ನೀಡಬೇಕು? ಎಂ.ಬಿ ‌ಪಾಟೀಲ್ ಎಲ್ಲಾ ಗೊಂದಲಗಳ ನಿವಾರಿಸುತ್ತಿದ್ದಾರೆ. ಈಗ ಯಾವುದೇ ಗೊಂದಲ‌ ಇಲ್ಲ. ರೈತರ ಭೂಮಿಯನ್ನು ವಕ್ಫ್ ಆಸ್ತಿಯಾಗಿ ಪರಿವರ್ತಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ. ತಪ್ಪಿದಲ್ಲಿ ಅದನ್ನು ಸರಿಪಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಈಗ ಆಗಿರುವ ತಪ್ಪನ್ನು ಗಮನಿಸಿ, ನೀಡಿರುವ ನೋಟಿಸ್‌ಗಳ ಹಿಂಪಡೆಯಲಾಗುವುದು. ಯಾವ ಕಾರಣಕ್ಕೆ ತಪ್ಪಾಗಿದೆ ಎಂಬ ಬಗ್ಗೆ ವಿಚಾರಣೆ ನಡೆಸಿ ನಂತರ ನಿರ್ಧರಿಸಲಾಗುವುದು. ಜಿಲ್ಲಾಧಿಕಾರಿಗಳು ಈ ಬಗ್ಗೆ ವಿಚಾರಣೆ ನಡೆಸಲಿದ್ದು, ನೀಡಿರುವ ನೋಟಿಸ್ ಹಿಂಪಡೆಯಲು ಕ್ರಮ ಕೈಗೊಳ್ಳಲು ಒಂದೆರಡು ದಿನ ಬೇಕು. ರೈತರ ಭೂಮಿ ವಕ್ಫ್ ಆಸ್ತಿಯಾಗಿ ಪರಿವರ್ತಿಸಲಾಗುತ್ತಿದೆ ಎಂಬ ಆರೋಪ ಸರಿಯಲ್ಲ. ಸರ್ಕಾರಕ್ಕೆ ಅಂತಹ ಉದ್ದೇಶವಿಲ್ಲ ಎಂದು  ಹೇಳಿದರು.

Advertisement

ವಕ್ಫ್ ಬೋರ್ಡ್ ಇಂಡೀಕರಣ ನಿಲ್ಲಿಸಿ: ಯತ್ನಾಳ್‌
ವಕ್ಫ್ ಮಂಡಳಿ ರೈತರಿಗೆ ನೀಡಿರುವ ನೋಟಿಸ್‌ ವಾಪಸ್ ಪಡೆಯುತ್ತೇವೆ ಎಂದ ಕಾನೂನು ಸಚಿವ ಎಚ್.ಕೆ.ಪಾಟೀಲ್‌ ಹೇಳಿಕೆಗೆ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ ನಮ್ಮ ಹೋರಾಟ ಪ್ರಾರಂಭ ಆಗುವ ಮುಂಚೆಯೇ ರಾಜ್ಯ ಸರ್ಕಾರ ಶರಣಾಗಿದೆ. ಆದರೆ, ನೋಟಿಸ್‌  ವಾಪಸ್ ಪಡೆಯುವುದರೊಂದಿಗೆ ಪಹಣಿಯಲ್ಲಿ ವಕ್ಫ್ ಬೋರ್ಡ್ ಇಂಡೀಕರಣ ತೆಗೆದು ಹಾಕಬೇಕು. ಇವೆಲ್ಲ ಪ್ರಕ್ರಿಯೆಯ ನ. 3ರೊಳಗೆ ಮುಗಿಸಿದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಆಗುವುದು ನಿಶ್ಚಿತ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next