ಬೆಂಗಳೂರು: ವಿಜಯಪುರ ಜಿಲ್ಲೆ ತಿಕೋಟ ತಾಲೂಕು ಹೊನವಾಡ ಗ್ರಾಮದ 11 ಎಕರೆ ಮಾತ್ರ ವಕ್ಫ್ ಮಂಡಳಿಗೆ ಸೇರಿದ್ದೇ ಹೊರತು 1,200 ಎಕರೆಯೂ ವಕ್ಫ್ ಮಂಡಳಿಗೆ ಸೇರಿಲ್ಲ. ಅದು ರೈತರದ್ದೇ ಜಮೀನು. ಅಧಿಸೂಚನೆಯಲ್ಲಿ ತಪ್ಪಾಗಿ ನಮೂದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದರು.
ತೀವ್ರ ವಿವಾದದ ಸ್ವರೂಪ ಪಡೆದುಕೊಳ್ಳುವ ಈ ವಿಚಾರ ಸಂಬಂಧ ಶನಿವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಜಿಲ್ಲೆಯಲ್ಲಿ 1974, 1978 ಹಾಗೂ 2016ರಲ್ಲಿ ವಕ್ಫ್ ಆಸ್ತಿಗಳ ಅಧಿಸೂಚನೆ ಹೊರಬಿದ್ದಿವೆ. ಅಸಲಿಗೆ ವಕ್ಫ್ ಆಸ್ತಿ ಇರುವುದು ಮಹಾಲ ಬಾಗಾಯತ ಗ್ರಾಮದಲ್ಲಿ. ಆದರೆ 1974ರಲ್ಲಿ ಅಧಿಸೂಚನೆ ಹೊರಡಿಸಿದಾಗ ಮಹಾಲ ಬಾಗಾಯತದ ಜತೆಗೆ ಆವರಣದಲ್ಲಿ ಹೊನವಾಡ ಎಂದೂ ನಮೂದಿಸಿರುವುದು ಇಷ್ಟೆಲ್ಲ ಗೊಂದಲಕ್ಕೆ ಕಾರಣವಾಗಿದೆ ಎಂದರು.
ಅ. 19ರಂದು ಈ ವಿಚಾರ ಗೊತ್ತಾದ ಕೂಡಲೇ ಜಿಲ್ಲಾಧಿಕಾರಿ, ತಹಶೀಲ್ದಾರ್ ಎಲ್ಲರನ್ನೂ ಕರೆದು ಸಭೆ ನಡೆಸಿ, ಸೂಕ್ತ ನಿರ್ದೇಶನ ಕೊಡಲಾಗಿದೆ. ಈ ವಿಚಾರದಲ್ಲಿ ಬಿಜೆಪಿ ನಾಯಕರಾದ ತೇಜಸ್ವಿ ಸೂರ್ಯ ಅವರಾಗಲೀ, ಬಸನಗೌಡ ಪಾಟೀಲ್ ಯತ್ನಾಳರಾಗಲೀ ರಾಜ ಕೀಯ ಮಾಡಬೇಕಿಲ್ಲ. ರೈತರ ಒಂದಿಂಚೂ ವಕ್ಫ್ ಆಸ್ತಿ ಆಗಲು ಬಿಡುವುದಿಲ್ಲ. ರೈತರು ಆತಂಕಪಡುವ ಅಗತ್ಯವಿಲ್ಲ. ಈ ಸಂಬಂಧ ಇನ್ನೊಮ್ಮೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸ್ಪಷ್ಟ ಸೂಚನೆ ಕೊಡಲಾಗುತ್ತದೆ ಎಂದು ಅಭಯ ನೀಡಿದರು.
ವಕ್ಫ್ ನೋಟಿಸ್ ವಿರುದ್ಧ, ರೈತರ ಪರ ಹೋರಾ ಟಕ್ಕೆ ಸಿದ್ಧ: ಬಿವೈವಿ
ಬೆಂಗಳೂರು: ವಕ್ಫ್ ಕಾಯಿದೆ ವಿಚಾರದಲ್ಲಿ ಬಿಜೆಪಿ ನಿಲುವು ಅತ್ಯಂತ ಸ್ಪಷ್ಟವಾಗಿದೆ. ವಕ್ಫ್ ಕಾಯಿದೆ ನೆಪದಲ್ಲಿ ರೈತರು ಬೀದಿಪಾಲಾಗಬಾರದು. ರೈತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಬಿಜೆಪಿ ಯಾವ ಹಂತಕ್ಕೆ ಹೋಗಲೂ ಸಿದ್ಧವಿದೆ. ನಾವು ಹೋರಾಟಕ್ಕೂ ಇಳಿಯುತ್ತೇವೆ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯ ಆಗಲು ನಾವು ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ವಕ್ಫ್ ಕಾಯಿದೆ ಹೆಸರಿನಲ್ಲಿ ರೈತರ ಜಮೀನನ್ನು ಹೊಡೆದುಕೊಳ್ಳುವ ಹುನ್ನಾರ ನಡೆಯುತ್ತಿದೆ. ವಿಜಯಪುರದಲ್ಲಿ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡಿ ದ್ದಾರೆ. ರೈತರು ಹಲವಾರು ದಶಕಗಳಿಂದ ಕೃಷಿ ಮಾಡುತ್ತಿದ್ದ ಜಮೀನು ಕೂಡ ವಕ್ಫ್ ಆಸ್ತಿ ಎಂದು ಅಧಿಕಾರಿಗಳ ಮೂಲಕ ನೋಟಿಸ್ ನೀಡುತ್ತಿ¨ªಾರೆ. ಅಲ್ಪಸಂಖ್ಯಾಕರನ್ನು ಸದಾ ತುಷ್ಟೀಕರಣ ಮಾಡುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಬೆಂಬಲ ವಕ್ಫ್ ಬೋರ್ಡ್ ಪರ ಇರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದರು.