Advertisement

ಪದೇಪದೆ ಸೋತರೂ ಗೆಲುವಿನ ಆಸೆ ಇದೆ!

06:00 AM Aug 14, 2018 | |

ತುಂಬಾ ಮುದ್ದಾಗಿದ್ದೆ ನೀನು, ಮಾತಿನಲ್ಲಿಯೂ ಮತ್ತು ಮನಸಿನಲ್ಲಿಯೂ. ನಿನ್ನ ಜೊತೆಯಲ್ಲಿದ್ದಾಗ ವಾಹ್‌, ಸ್ವರ್ಗಕ್ಕೆ ಮೂರೇ ಗೇಣು ಎಂದು ಬೀಗುತ್ತಿದ್ದವ ನಾನು. ನಿನ್ನೊಂದಿಗೆ ಕಳೆದ ಕ್ಷಣಗಳನ್ನು ವಿವರಿಸಬೇಕೆಂದರೂ ಪದಗಳೇ ಸಿಗದಿದ್ದಾಗಲೇ ತಿಳಿದಿದ್ದು, ನಿನ್ನ ಮೇಲಿದ್ದ ಒಲವು ಅನುರಾಗದ ರೂಪ ಪಡೆಯಿತೆಂದು. ಆದರೆ, ಅದೇ ಅನುರಾಗ ಇಂದು ಅಳಿವಿನಂಚಿನಲ್ಲಿದೆ. ಬೇಗ ಬಂದು ಸಹಕರಿಸು, ಅನುರಾಗವನ್ನು ಬದುಕಿಸು.

Advertisement

ಪ್ರೀತಿ ಆರಂಭವಾಗಿದ್ದು ನಿನ್ನಿಂದಲ್ಲವೇ? ಅದು ಕೊನೆಯಾದರೂ ನಿನ್ನಿಂದಲೇ ಆಗಲಿ ಎಂದು ನಾನು ಹೇಳಲಾರೆ. ಯಾಕೆಂದರೆ ತಂಗಾಳಿಯಂತೆ ಬಂದು ನನ್ನಲಿ ಉಸಿರಾಗಿ ಉಳಿದವಳು ನೀನು. ಪದಗಳೇ ಸಿಗದೆ ಮೂಕನಾಗಿ ನಿಂತಿದ್ದ ನನಗೆ, ಅನುರಾಗದ ಅರಿವಾದ ಮೇಲಂತೂ ಏನು ಮಾಡಬೇಕೆಂದು ತೋಚದೆ ಸ್ತಬ್ಧನಾದೆ, ಭಾವನೆಗಳ ಬಲೆಯಲ್ಲಿ ಬಂಧಿಯಾದೆ. ನಿನಗೆ ತಿಳಿದಿಲ್ಲ, ಅನುರಾಗ ತಿಳಿಸಲು ಹಲವಾರು ಬಾರಿ ಪ್ರಯತ್ನಿಸಿ ಸೋತಿದ್ದೇನೆಂದು. ಆದರೆ, ಅಷ್ಟೂ ಬಾರಿ ಸೋತಾಗಲೂ ಮನದಂಚಲ್ಲೆಲ್ಲೋ ಗೆದ್ದೆನೇನೋ ಎಂದೆನಿಸುತ್ತಿತ್ತು. ಕಾರಣ ಇಂದಿಗೂ ತಿಳಿಯುತಿಲ್ಲ.

ನಿನ್ನ ಕಣ್ಣ ನೋಟದ ಸೆಳೆತದ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದಾಗಲೂ ನನಗರಿವಿತ್ತು ಇದು ಅನುರಾಗವೇ ಎಂದು. ನಿನ್ನ ಮುಗ್ಧ ಮಾತಿನ ಮೋಡಿಯಲ್ಲಿ ಮಿಂದೇಳುತ್ತಿದ್ದಾಗಲೂ ನನಗರಿವಿತ್ತು ಇದು ಅನುರಾಗವೇ ಎಂದು. ನಿನ್ನ ಸಾಂಗತ್ಯದ ಸಮೀಪದಲ್ಲಿ ಒದ್ದಾಡುತ್ತಿದ್ದಾಗಲೂ ಅರಿವಿತ್ತು ನನಗೆ ಇದು ಅನುರಾಗವೇ ಎಂದು.ಆದರೆ ನಿನಗೆ ಇದಾವುದೂ ತಿಳಿಯುತ್ತಿಲ್ಲ ಎಂಬುದು ಮಾತ್ರ ನನಗೆ ಅರಿವಿಲ್ಲದೇ ಹೋಯಿತು.

ನಿನ್ನಲ್ಲಿ ಹೇಳಲು ಬಹಳಷ್ಟಿದೆ ಎಂದು ಪ್ರತಿ ಬಾರಿ ಬಳಿ ಬಂದಾಗಲೂ, ನಾನು ಹೇಳದೇ ಉಳಿದಿದ್ದೇ ಹೆಚ್ಚು. ಆದರೆ ಇನ್ನು ಹಾಗಾಗದು. ಮಾತಿನಲ್ಲಿ ಹೇಳಲಾಗದ್ದನ್ನು ಮೌನದಲ್ಲಿಯೇ ಹೇಳುವೆ; ಎಲ್ಲವನ್ನೂ ಅಲ್ಲದಿದ್ದರೂ, ಎಂದೆಂದೂ ನನ್ನ ಜೊತೆಗಿರು ಎಂಬುದನ್ನಾದರೂ.
ಅದೇ ಹೆಜ್ಜೆ ನಾದಗಳೊಡನೆ, ಅದೇ ಮುಗ್ಧ ಮಾತುಗಳೊಡನೆ… 

ಅಭಿಷೇಕ್‌ ಎಂ. ತೀರ್ಥಹಳ್ಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next