Advertisement

22 ಲೋಕಸಭಾ ಸ್ಥಾನ ಗೆಲ್ಲುವುದೇ ಅನಂತ್‌ಗೆ ಸಲ್ಲಿಸೋ ಶ್ರದ್ಧಾಂಜಲಿ

04:48 PM Nov 24, 2018 | |

ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯದ ಮಧ್ಯೆ ಕೊಂಡಿಯಂತಿದ್ದ ಅನಂತ್‌ ಕುಮಾರ್‌ ಅವರ ನಿಧನದಿಂದ ನಾವು ಬಡವರು ಹಾಗೂ ತಬ್ಬಲಿಗಳಾಗಿದ್ದೇವೆ. ಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ 22 ಸ್ಥಾನಗಳನ್ನು ಗೆಲ್ಲುವುದೇ ಅವರ ಕನಸಾಗಿತ್ತು. ಅದನ್ನು ನನಸು ಮಾಡುವುದೇ ನಾವು ಅವರಿಗೆ ಸಲ್ಲಿಸುವ ನೈಜ ಶ್ರದ್ಧಾಂಜಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

 ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ “ಅದಮ್ಯ ಚೇತನಕ್ಕೆ ಅನಂತ ನಮನ’ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದ ಉದ್ದಗಲಕ್ಕೂ ಜನಪರ ಹೋರಾಟಗಳನ್ನು ನಾನು ಮಾಡಿದ್ದೇನೆ. ಆದರೆ, ಅದರ ರೂಪುರೇಷೆಗಳನ್ನು ರೂಪಿಸಿದ್ದು ಅನಂತ್‌ ಕುಮಾರ್‌ ಅವರು. ಇಬ್ಬರೂ ಸೇರಿ ನಾನಾ ಕೆಲಸಗಳನ್ನು ಮಾಡಿದ್ದೇವೆ. ಪಕ್ಷ ಕಟ್ಟುವುದಕ್ಕಾಗಿ ಅವರು ಸಲ್ಲಿಸಿದ ಸೇವೆ ಅಪಾರವಾಗಿದೆ. ಬಿಜೆಪಿ ಈ ಮಟ್ಟಕ್ಕೇರಲು ಅವರ ಕೊಡುಗೆ ಹಾಗೂ ಶ್ರಮವನ್ನೆಂದೂ ಮರೆಯಲು ಸಾಧ್ಯವಿಲ್ಲ ಎಂದರು.

 ಪಕ್ಷ ಸಂಘಟನೆ ಸಂಬಂಧ ಅವರೊಂದಿಗೆ ಸೇರಿ ಹಲವು ಸಭೆಗಳನ್ನು ಮಾಡಿದ್ದೇನೆ. ಅವರೆಂದೂ ಬೇಸರಗೊಂಡವರಲ್ಲ, ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರು. ನಿರಂತರವಾಗಿ ಕ್ರಿಯಾಶೀಲರಾಗಿರುತ್ತಿದ್ದರು. ದೇಶದ ಪ್ರತಿಯೊಂದು ರಾಜ್ಯದ ಮುಖ್ಯಮಂತ್ರಿ, ಪಕ್ಷಗಳ ಮುಖಂಡರೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಸ್ಮರಿಸಿದರು.

ಇದೇ 29ಕ್ಕೆ ಬೆಂಗಳೂರಿನಲ್ಲಿ ಅನಂತ್‌ ಕುಮಾರ್‌ ಅವರ ಸ್ಮರಣಾರ್ಥ ಬೃಹತ್‌ ಸಭೆಯನ್ನು ಕರೆಯಲಾಗಿದೆ. ಇದರಲ್ಲಿ ಪಕ್ಷದ ಮುಖಂಡರು, ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

 ಶಾಸಕ ಕೆ.ಎಸ್‌. ಈಶ್ವರಪ್ಪ ಮಾತನಾಡಿ, ಅನಂತ್‌ ಕೇಂದ್ರದಲ್ಲಿ ಮೂಲೆಗೆ ತಳ್ಳಲಾದ ಖಾತೆಯನ್ನು ನೀಡಿದರೂ ಅದನ್ನೂ ಸಮರ್ಥವಾಗಿ ನಿಭಾಯಿಸುವ ಮೂಲಕ ಸಂಸದೀಯ ಸ್ಥಾನಕ್ಕೇರಿದರು. ನರೇಂದ್ರ ಮೋದಿ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಇದು ಅವರಲ್ಲಿನ ಕ್ರೀಯಾಶೀಲತೆ, ನಾಯಕತ್ವ ಗುಣಕ್ಕೆ ಹಿಡಿದ ಕನ್ನಡಿಯಾಗಿದೆ. ಪ್ರತಿಯೊಂದು ಸಮುದಾಯದವರ ಪರ ಚಿಂತಿಸುತ್ತಿದ್ದ ಇವರು ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಪ್ರಯತ್ನಶೀಲರಾಗಿದ್ದರು. “ನಾನು ಕ್ಷತ್ರಿಯ ಬ್ರಾಹ್ಮಣ’ ಎಂದೇ ತಮಾಷೆಯಿಂದ ಹೇಳಿಕೊಳ್ಳುತ್ತಿದ್ದರು ಎಂದು ತಿಳಿಸಿದರು.
 
 ಆರ್‌ಎಸ್‌ಎಸ್‌ ದಕ್ಷಿಣ ಪ್ರಾಂತ್ಯ ಸಹ ಕಾರ್ಯನಿರ್ವಾಹಕ ಪಟ್ಟಾಭಿರಾಮ್‌ ಮಾತನಾಡಿ, ಮರಣಾನಂತರ ವ್ಯಕ್ತಿಯೊಂದಿಗೆ ಯಾವುದೇ ವೈರತ್ವ, ರಾಗ ದ್ವೇಷಗಳಿರುವುದಿಲ್ಲ. ಇದು ಭಾರತೀಯ ಸಂಸ್ಕೃತಿಯ ಶ್ರೇಷ್ಠತೆ. ಅನಂತ್‌ ಕುಮಾರ್‌ ಬದುಕಿದ್ದಾಗ ವೈಚಾರಿಕ ಭಿನ್ನತೆಯ ಬಗ್ಗೆ ಹಲವು ಸಲ ವಾಗ್ವಾದವಾಗಿದೆ. ಆದರೆ, ಎಲ್ಲರೂ ಒಪ್ಪುವ ಗುಣ ಅವರಲ್ಲಿತ್ತು. ಸಮರ್ಥ ಲೀಡರ್‌ ಆಗಿದ್ದರು ಎಂದರು. 

Advertisement

 ಮಾಜಿ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಮಾತನಾಡಿ, ಪಕ್ಷದ ಪಾಲಿಗೆ ಒಳ್ಳೆಯ ದಿನಗಳು ಇಲ್ಲದೇ ಇದ್ದರೂ ಸವಾಲಾಗಿ ಸ್ವೀಕರಿಸಿ, ಅನಂತ್‌ ಕುಮಾರ್‌ ಪಕ್ಷವನ್ನು ಸಂಘಟಿಸಿದ್ದರು. ಕೆಂಪು ಬಸ್‌ ಹಿಡಿದು ಓಡಾಡುವ ಮೂಲಕ ಪಕ್ಷವನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿಸಿದರು. ಎಂಎಲ್‌ಸಿ ಆಯನೂರು ಮಂಜುನಾಥ್‌, ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿದರು. ಎಂಎಲ್‌ಸಿ ಎಸ್‌. ರುದ್ರೇಗೌಡ, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಪಕ್ಷದ ಮುಖಂಡರಾದ ಎಸ್‌. ದತ್ತಾತ್ರಿ, ಪದ್ಮನಾಭ ಭಟ್ಟ ಇತರರಿದ್ದರು. ಡಿ.ಎಸ್‌. ಅರುಣ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next