Advertisement

ಐಐಎಸ್‌ಸಿ ಕ್ಯಾಂಪಸ್‌ನಲ್ಲಿ ದಿನವಿಡೀ ವಿಹರಿಸಿ!

12:03 PM Mar 05, 2018 | Team Udayavani |

ಬೆಂಗಳೂರು: ಮಾರ್ಚ್‌ 10ರಂದು ನೀವು ನಿಮ್ಮ ಕುಟುಂಬ ಸಮೇತರಾಗಿ ಅಥವಾ ಸ್ನೇಹಿತರೊಂದಿಗೆ ಮಲ್ಲೇಶ್ವರದ ಭಾರತೀಯ ವಿಜ್ಞಾನ ಸಂಸ್ಥೆಯೊಳಗೆ (ಐಐಎಸ್ಸಿ) ಹೋಗಿ. ಭಾರತೀಯ ವಿಜ್ಞಾನಿಗಳ ಸಾಧನೆ, ಸಾಗಿಬಂದ ಹಾದಿ, ಕಾರ್ಯವೈಖರಿ, ಹೊಸ ಆವಿಷ್ಕಾರ, ವಿಜ್ಞಾನದ ಪ್ರಾತ್ಯಕ್ಷಿಕೆಗಳ ಜತೆಗೆ ಕ್ಯಾಂಪಸ್‌ನ ಹಸಿರು ಅನುಭವವನ್ನು ದಿನಪೂರ್ತಿ ಪಡೆಯಬಹುದು.

Advertisement

ಐಐಎಸ್ಸಿ ಕ್ಯಾಂಪಸ್‌ ಒಳಗೆ ಏನಾಗುತ್ತಿದೆ? ಒಮ್ಮೆ ಕ್ಯಾಂಪಸ್‌ ಒಳಹೊಕ್ಕು ನೋಡಬೇಕೆಂಬ ಕುತೂಹಲ ಬಹುತೇಕರಿಗಿದೆ. ಆದರೆ, ಐಐಎಸ್ಸಿ ಕ್ಯಾಂಪಸ್‌ಗೆ ಮುಕ್ತ ಪ್ರವೇಶವಿಲ್ಲ. ಕಾರ್ಯಕ್ರಮಕ್ಕೆ ಹೋದವರೂ ಸಹ ಸಭಾಂಗಣದಲ್ಲಿ ಕಾರ್ಯಕ್ರಮ ಮುಗಿಸಿ ವಾಪಾಸ್‌ ಆಗಬೇಕು.

ಈ ಹಿನ್ನೆಲೆಯಲ್ಲೇ ಸಾಮಾನ್ಯ ವ್ಯಕ್ತಿಗೂ ವಿಜ್ಞಾನದ ಮೂಲ ಆಶಯ ತಿಳಿಯಬೇಕು ಮತ್ತು ವೈಜ್ಞಾನಿಕ ಮನೋಧರ್ಮ ಬೆಳೆಸಬೇಕು ಎಂಬ ಉದ್ದೇಶದಿಂದಲೇ ಐಐಎಸ್ಸಿ ವರ್ಷದಲ್ಲಿ ಒಂದು ದಿನ “ತೆರೆದ ದಿನ'(ಒಪನ್‌ ಡೇ) ಆಚರಣೆ ಮಾಡಿಕೊಂಡು ಬರುತ್ತಿದೆ.

ಮಾ.10ರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯ ತನಕ ಐಐಎಸ್ಸಿ ಸಂಪೂರ್ಣವಾಗಿ ಸಾರ್ವಜನಿಕರಿಗೆ ತೆರೆದಿರುತ್ತದೆ. ಕ್ಯಾಂಪಸ್‌ ಒಳಗೆ ಹೋಗಿ ಅಲ್ಲಿ ನಡೆಯುತ್ತಿರುವ ವಿಜ್ಞಾನ ಚಟುವಟಿಕೆಗಳನ್ನು ತಿಳಿದುಕೊಳ್ಳಲು ಇದೊಂದು ಮುಕ್ತ ಹಾಗೂ ಸುವರ್ಣಾವಕಾಶವಾಗಿದೆ.

ತೆರೆದ ದಿನ ಏನೇನಿರುತ್ತದೆ?: ಮಾ.10ರಂದು ವಿಜ್ಞಾನದ ಹಲವು ಪ್ರಯೋಗಗಳನ್ನು ಸ್ಥಳದಲ್ಲೇ ಮಾಡಿ ತೋರಿಸಲಾಗುತ್ತದೆ. ಜನಪ್ರಿಯ ವಿಜ್ಞಾನಕ್ಕೆ ಸಂಬಂಧಿಸಿದ ಹಲವು ಉಪನ್ಯಾಸಗಳನ್ನು ತಜ್ಞರ ಮೂಲಕ ಏರ್ಪಡಿಸಲಾಗಿದೆ. ವೈಜ್ಞಾನಿಕ ಪ್ರಾತ್ಯಕ್ಷಿಕೆಗಳು, ವಿಜ್ಞಾನ ವಸ್ತು ಪ್ರದರ್ಶನ, ವಿಜ್ಞಾನದ ವಿಷಯಗಳಿಗೆ ಸಂಬಂಧಿಸಿದ ರಸಪ್ರಶ್ನೆ,

Advertisement

ಐಐಎಸ್ಸಿ ಸಾಧನೆ ಹಾಗೂ ನಡೆದು ಬಂದ ಹಾದಿಯ ಫೋಟೋ ಹಾಗೂ ಪೋಸ್ಟರ್‌ ಪ್ರದರ್ಶನ, ಇತ್ತೀಚಿನ ವರ್ಷಗಳಲ್ಲಿ ಆಗಿರುವ ಹೊಸ ಸಂಶೋಧನೆ ಮತ್ತು ಆವಿಷ್ಕಾರದ ಬಗ್ಗೆ ಮಾಹಿತಿ ಮತ್ತು ಐಐಎಸ್ಸಿ ಪ್ರತಿ ವಿಭಾಗದಿಂದಲೂ ವಿಭಿನ್ನವಾದ ಕಾರ್ಯಕ್ರಮ, ವಿಜ್ಞಾನ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಇರುತ್ತದೆ.

ಬೇರೆ ಬೇರೆ ತರಗತಿಯ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಮಾನ್ಯ ವಿಜ್ಞಾನ, ಗಣಿತ ಮತ್ತು ವಿಜ್ಞಾನದ ಇತಿಹಾಸ, ಸಾಮಾನ್ಯ ಜ್ಞಾನ ಹೀಗೆ ಹಲವು ವಿಭಾಗದಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ಇದರ ಜತೆಗೆ ಹೊಸ ರೀತಿಯ ಆಟವೂ ಇದೆ.

ಕುಡಿಯು ನೀರಿನ ವ್ಯವಸ್ಥೆ, ವಿಶ್ರಾಂತಿ ಪಡೆಯುವ ಸ್ಥಳ, ಪ್ರಥಮ ಚಿಕಿತ್ಸಾ ಘಟಕ, ಫ‌ುಡ್‌ಕೋರ್ಟ್‌ಗಳ ವ್ಯವಸ್ಥೆ ಮಾಡಲಾಗಿದೆ. ತೆರೆದ ದಿನದ ಸಂಪೂರ್ಣ ಮಾಹಿತಿಯ ಜತೆಗೆ ಕ್ಯಾಂಪಸ್‌ ರೂಟ್‌ ಮ್ಯಾಪ್‌ ಐಐಎಸ್ಸಿ ವೆಬ್‌ಸೈಟ್‌ //www.iisc.ac.in ನಲ್ಲಿ ಪಡೆಯಬಹುದು.

ಈ ಅಂಶ ಗಮನದಲ್ಲಿರಲಿ: ಇದು ತೆರೆದ ದಿನ ಮಾತ್ರವಲ್ಲ. ಹಸಿರು ದಿನ ಕೂಡ. ಕ್ಯಾಂಪಸ್‌ ಒಳಗೆ ಕಂಡ ಕಂಡಲ್ಲಿ ಕಸ ಎಸೆಯುವಂತಿಲ್ಲ. ಕ್ಯಾಂಪಸ್‌ ಸುತ್ತಲೂ ಕಸದ ಬುಟ್ಟಿ ಇಡಲಾಗಿದೆ. ಹಸಿ ಕಸ, ಒಣಕಸ ಹಾಗೂ ಇತರೆ ಕಸಗಳನ್ನು ವಿಂಗಡಿಸಿ ಸಂಬಂಧಪಟ್ಟ ಬುಟ್ಟಿಗೆ ಹಾಕಬೇಕು. ನೀರು ಕುಡಿಯಲು ನಿಮ್ಮದೇ ಬಾಟಲಿ ತೆಗೆದುಕೊಂಡು ಹೋಗಬೇಕು.

ಗ್ರಂಥಾಲಯ ಪ್ರವಾಸ: ಐಐಎಸ್ಸಿ ಒಳಗಿರುವ ಜೆಆರ್‌ಡಿ ಟಾಟಾ ಸ್ಮಾರಕ ಗ್ರಂಥಾಲಯದೊಳಗೆ ಸುತ್ತಾಡಿ, ಅಲ್ಲಿನ ಪುಸ್ತಕ ಹಾಗೂ ವಿಜ್ಞಾನದ ಸಂಶೋಧನಾಗ್ರಂಥಗಳ ಬಗ್ಗೆ ಮಾಹಿತಿ ಪಡೆಯಬಹುದು. ಗ್ರಂಥಾಲಯ ಸೇವೆ, ವಿಜ್ಞಾನಕ್ಕೆ ಸಂಬಂಧಿಸಿದ ಐಐಎಸ್ಸಿ ಪಡೆದುಕೊಳ್ಳುತ್ತಿರುವ ಆನ್‌ಲೈನ್‌ ಪೊರ್ಟಲ್‌, ಗ್ರಂಥಾಲಯದ ಮಾಹಿತಿ, ಲೇಖಕರ ಮಾಹಿತಿ ಸಿಗಲಿದೆ.

ಕಿಡ್‌ ಝೋನ್‌: ತೆರೆದ ದಿನದಂದು ಮಕ್ಕಳಿಗಾಗಿಯೇ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕಿಡ್‌ ಝೋನ್‌ನಲ್ಲಿ ಮಕ್ಕಳಿಗೆ ಸುಲಭವಾಗಿ ವಿಜ್ಞಾನವನ್ನು ತಿಳಿಸಿ, ಅರ್ಥೈಸಲು ಬೇಕಾದ ವಿಜ್ಞಾನದ ಮೂಲ ಅಂಶಗಳ ಪ್ರಾತ್ಯಕ್ಷಿಕೆ ವ್ಯವಸ್ಥೆ ಮಾಡಲಾಗಿದೆ. ಮಾ.10ರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಐಐಎಸ್ಸಿ ಕ್ಯಾಂಪಸ್‌ ಒಳಗಿರುವ ಒಲ್ಡ್‌ ಏರೊಸ್ಪೇಸ್‌ ಕಟ್ಟಡದಲ್ಲಿ ಕಿಡ್‌ಝೋನ್‌ ವ್ಯವಸ್ಥೆ ಮಾಡಲಾಗಿದೆ. 

ಜೆ.ಎನ್‌.ಟಾಟಾ ಅವರ ಜನ್ಮ ದಿನವನ್ನೇ ಐಐಎಸ್ಸಿ ಸಂಸ್ಥಾಪನಾ ದಿನವಾಗಿ ಪ್ರತಿ ವರ್ಷ ಮಾ.3ರಂದು ಆಯೋಜಿಸಲಾಗುತ್ತದೆ. ಹಾಗೆಯೇ ಫೆ.28ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಐಐಎಸ್ಸಿ ಮತ್ತು ವಿಜ್ಞಾನ ಬಗ್ಗೆ ಸಾಮಾನ್ಯ ಜನರಿಗೆ ತಿಳಿಸಲು ಮಾ.10ರಂದು ಒಪನ್‌ ಡೇ ಆಚರಣೆ ಮಾಡುತ್ತಿದ್ದೇವೆ.
-ಪ್ರೊ. ಅನುರಾಗ್‌ ಕುಮಾರ್‌, ನಿರ್ದೇಶಕ ಐಐಎಸ್ಸಿ 

Advertisement

Udayavani is now on Telegram. Click here to join our channel and stay updated with the latest news.

Next