Advertisement
8 ಎಕರೆ ಪ್ರದೇಶದಲ್ಲಿ 2 ಸಾವಿರ ಮನೆ ನಿರ್ಮಾಣ: ಈಗಾಗಲೇ ತಾಲೂಕಿನ 30 ಕೆರೆಗಳಿಗೆ ಕೆ.ಆರ್.ಪುರಂನ ಎಸ್‌ಟಿಪಿ ಘಟಕದಿಂದ ನೀರು ಹರಿಸುವ ಯೋಜನೆಯನ್ನು 100 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಇದೇ ರೀತಿ ಗ್ರಾಮೀಣ ರಸ್ತೆಗಳ ದುರಸ್ತಿಗೆ 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಗೊಳ್ಳಲಿದೆ. 65 ಕೋಟಿ ರೂ.ಗಳ ವೆಚ್ಚದಲ್ಲಿ ನಗರಕ್ಕೆ ಕಾವೇರಿ 4ನೇ ಹಂತದಲ್ಲಿ ನೀರು ಸರಬರಾಜು ಮಾಡಲು ಯೋಜಿಸಲಾಗಿದೆ. ತಾಲೂಕಿನ ಕುರುಬರಹಳ್ಳಿಯಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ 8 ಎಕರೆ ಪ್ರದೇಶದಲ್ಲಿ 2 ಸಾವಿರ ಮನೆಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ ಎಂದರು.
Related Articles
Advertisement
ಅನರ್ಹ ಶಾಸಕರ ಬಗ್ಗೆ ಮೆಚ್ಚುಗೆ: ಎಂಟಿಬಿ ನಾಗರಾಜ್ ಸರಳ ಸಜ್ಜನ ವ್ಯಕ್ತಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಕ್ಷೇತ್ರದ ಮತದಾರರು ಆಶೀರ್ವದಿಸಬೇಕು ಎಂದು ಪರೋಕ್ಷವಾಗಿ ಚುನಾವಣಾ ಪ್ರಚಾರಕ್ಕೆ ನಾಂದಿ ಹಾಡಿದರು.
ಇತರೆ ಕೆರೆಗಳಿಗೆ ನೀರು: ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಗ್ರಾಮೀಣ ಬದುಕನ್ನು ಸುಸ್ಥಿರಗೊಳಿಸಲು, ವಲಸೆ ತಡೆಗಟ್ಟಲು ಸರಕಾರ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಕೆರೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ತುಂಬಿ ಹರಿಯುವ ವ್ಯರ್ಥ ನೀರನ್ನು ಇತರೆ ಕೆರೆಗಳಿಗೆ ಹರಿಸಲು ಆದ್ಯತೆ ನೀಡಲಾಗುತ್ತಿದೆ. ಕೆ.ಸಿ. ವ್ಯಾಲಿ, ಎಚ್‌ಎನ್ ವ್ಯಾಲಿ ನೀರು ಹರಿಸಲು ಸಹ ಯೋಜಿಸಲಾಗಿದ್ದು ತಮಿಳುನಾಡಿಗೆ ವ್ಯರ್ಥವಾಗಿ ಹೋಗುತ್ತಿರುವ ಕೊಳಚೆ ನೀರನ್ನು ಶುದ್ಧೀಕರಿಸಲು ಸಿದ್ಧತೆ ಮಾಡಲಾಗಿದೆ.
ಬರ ಪರಿಸ್ಥಿತಿಯನ್ನು ನಿವಾರಿಸಲು ಶಾಶ್ವತ ಪರಿಹಾರಕ್ಕೆ ಜಾನುವಾರು ಸಾಕಣೆ , ಕೃಷಿಗೆ ಅಗತ್ಯವಾದ ನೀರು ಒದಗಿಸಲು ರಾಜ್ಯದಲ್ಲಿ ಸಂಭವಿಸಿರುವ ನೆರೆ ಪರಿಸ್ಥಿತಿಯಿಂದ ತಡವಾಗುತ್ತಿದೆ ಎಂದರು. ಕಂದಾಯ, ಪೌರಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಮಾತನಾಡಿ, ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಯಾರಿಂದಲೂ ತೆಗಳು ಸಾಧ್ಯವಿಲ್ಲ. ಇಂಥ ಜನಪ್ರತಿನಿಧಿಯನ್ನು ಮತ್ತೂಮ್ಮೆ ಆಯ್ಕೆ ಮಾಡಿಕೊಳ್ಳಬೇಕಾದ್ದು ಅವಶ್ಯಕತೆಯಿದೆ ಎಂದು ತಿಳಿಸಿದರು.
ನೆರೆ ನಿರ್ವಹಣೆ ಬಗ್ಗೆ ಟೀಕೆಗಳಿಗೆ ಪ್ರತ್ಯುತ್ತರ: ವಿರೋಧ ಪಕ್ಷದವರು ನೆರೆಯಿಂದಾಗಿ ಹಾನಿಗೊಂಡವರಿಗೆ ಬಿಡಿಗಾಸು ನೀಡಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಇದುವರೆಗೂ 2.4 ಲಕ್ಷ ಜನರಿಗೆ ತಲಾ 10 ಸಾವಿರ ರೂ.ಗಳಷ್ಟು ಪರಿಹಾರ ಬಿಡುಗಡೆ ಮಾಡಲಾಗಿದೆ. ಈ ಮಾಹಿತಿಯನ್ನು ಯಾರೂ ಬೇಕಾದರೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ಪಡೆಯಬಹುದಾಗಿದೆ ಎಂದರು.
ಯಾರಿಂದಲೂ ಬಿಜೆಪಿಗೆ ಪಾಠಬೇಡ: ಮನೆ ನಿರ್ಮಿಸಿಕೊಳ್ಳಲು ಸಹ ಈಗಾಗಲೇ 5 ಲಕ್ಷ ರೂ.ಗಳನ್ನು ನೀಡಿದ್ದು ಆರೋಪ ಮಾಡುವ ವಿರೋಧ ಪಕ್ಷದವರು ಎಷು ಬಾರಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು ಎಂಬುದನ್ನು ತಿಳಿಸಲು ಎಂದು ಸವಾಲೆಸೆದರು. ಕೊಡಗು ಜಿಲ್ಲೆಯಲ್ಲಿ ಭೂಕುಸಿತದಿಂದ ಹಾನಿಗೊಳಗಾದವರಿಗೆ ಬದಲಿಯಾಗಿ 380 ಎಕರೆಯಷ್ಟು ಜಮೀನನ್ನು ನೀಡಲಾಗಿದೆ. ಕೇಂದ್ರದಲ್ಲಿಯೂ ಬಿಜೆಪಿ ಸರಕಾರವಿದ್ದು ರಾಜ್ಯದ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ದೊರಕುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸ್ವತಃ ಹೋರಾಟ ಮನೋಭಾವ ಉಳ್ಳವರಾಗಿದ್ದು ರಾಜ್ಯದ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದಾರೆ. ಈ ಬಗ್ಗೆ ಯಾರಿಂದಲೂ ಬಿಜೆಪಿ ಪಾಠ ಕಲಿಯಬೇಕಾಗಿಲ್ಲ ಎಂದರು.
ಆಮಿಷಗಳಿಗೆ ಒಳಗಾಗಿಲ್ಲ: ಮಾಜಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಸಮ್ಮಿಶ್ರ ಸರಕಾರದಲ್ಲಿ 10 ತಿಂಗಳು ಶಾಸಕನಾಗಿ, 6 ತಿಂಗಳು ಸಚಿವನಾಗಿದ್ದಾಗ್ಯೂ ಸಹ ನಿಗದಿಪಡಿಸಿದ ಯೋಜನೆಗಳಿಗೆ ಹಣ ಬಿಡುಗಡೆಯಾಗಲೀ ಕಾಮಗಾರಿಗಳನ್ನು ಪ್ರಾರಂಭಿಸುವ ಬಗ್ಗೆ ಬಹಳಷ್ಟು ಭಾರೀ ಮನವಿ ಮಾಡಿದರೂ ಸಹ ಕವಡೆ ಕಿಮ್ಮತ್ತು ಸಹ ನೀಡಿಲ್ಲದ ಕಾರಣ ಬೇಸತ್ತು ರಾಜೀನಾಮೆ ನೀಡಬೇಕಾಯಿತೆ ಹೊರತು ಯಾವುದೇ ಆಮಿಷಗಳಿಗೆ ಒಳಗಾಗಿಯಲ್ಲ ಎಂದು ಸ್ಪಷ್ಟಪಡಿಸಿದರು.
ಜನಸೇವೆಯೇ ಪ್ರಮುಖ ಉದ್ದೇಶ: ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಎಂದಿಗೂ ಹಣ, ಅಧಿಕಾರದಾಸೆ ಪಟ್ಟಿಲ್ಲದೆ ಜನಸೇವೆ ಮಾಡುವುದೇ ಪ್ರಮುಖ ಉದ್ದೇಶವಾಗಿದೆ. ಬಿಜೆಪಿ ಸರಕಾರ ಅತಂತ್ರವಾಗಿದ್ದು ಯಾವುದೇ ಸಂದರ್ಭದಲ್ಲಾದರೂ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ವಿರೋಧ ಪಕ್ಷದವರು ಹಗಲುಗನಸು ಕಾಣುತ್ತಿದ್ದು ಯಡಿಯೂರಪ್ಪ ನೇತೃತ್ವದ ಸರಕಾರ ಉಳಿದಿರುವ ಅವಧಿಯನ್ನು ಪೂರ್ಣಗೊಳಿಸುವುದಲ್ಲಿ ಯಾವುದೇ ಸಂಶಯವಿಲ್ಲ. ಹಿಂದೆ ತಡೆಹಿಡಿದಿದ್ದ ಪ್ರಸ್ತಾವನೆಗಳಿಗೆ ಮುಖ್ಯಮಂತ್ರಿಗಳು ಒಂದು ತಿಂಗಳೊಳಗಾಗಿ ಮಂಜೂರಾತಿ ನೀಡಿ ಕಾಮಗಾರಿ ಪ್ರಾರಂಭಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.
ತಮ್ಮ ಬಹಳಷ್ಟು ಪ್ರಸ್ತಾ ವನೆಗಳಿಗೂ ಸಹ ಅನುಮೋದನೆ ನೀಡುವ ಭರವಸೆ ನೀಡಿದ್ದಾರೆ ಎಂದರು. ತಾಪಂ ಅಧ್ಯಕ್ಷ ವಿ.ಸಿ.ಜಯದೇವಯ್ಯ, ಜಿಲ್ಲಾಧಿಕಾರಿ ರವೀಂದ್ರ ಇನ್ನಿತರರು ಭಾಗವಹಿಸಿದ್ದರು. ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಮತ್ತು ಜಡಿಗೇನಹಳ್ಳಿ ಹೋಬಳಿ ವ್ಯಾಪ್ತಿಯ 30 ಕೆರೆಗಳಿಗೆ 100 ಕೋಟಿ ರೂ.ಗಳ ವೆಚ್ಚದಲ್ಲಿ ಕೆ.ಆರ್.ಪುರಂನ ಎಸ್‌ಟಿಪಿಯಿಂದ ನೀರು ತುಂಬಿಸುವ ಕಾಮಗಾರಿ, ಸಮ್ಮೇತನಹಳ್ಳಿ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದರು.