Advertisement
ಪಂಚದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ, ತನ್ನದೇ ಲಿಪಿಯನ್ನು ಹೊಂದಿರುವ, ಕೇಳಲು ಇಂಪಾಗಿರುವ ಭಾಷೆ ನಾವಾಡುವ ಕನ್ನಡ. ಕನ್ನಡ ಮಾತನಾಡುವವರು ವಿಶ್ವಾದ್ಯಂತ ನೋಡಲು ಸಿಗುತ್ತಾರೆ. ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದೆ. ಅನೇಕ ಗದ್ಯ, ಪದ್ಯ, ಛಂದಸ್ಸು, ಕಾವ್ಯಗಳನ್ನು ಹಳೆಗನ್ನಡವು ಜಗತ್ತಿಗೆ ಕೊಟ್ಟಿದ್ದರೆ ನವ್ಯ ಕವನ, ಕಾದಂಬರಿ, ಕತೆ, ಕವಿತೆಗಳನ್ನು ಹೊಸಗನ್ನಡವು ಕೊಟ್ಟಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಕನ್ನಡಪರ ಸಂಘಟನೆಗಳು ಕನ್ನಡವನ್ನು ಉಳಿಸಿ ಬೆಳೆಸಲು ಒಂದು ತರಹದ ಆಂದೋಲನವನ್ನೇ ಕೈಗೊಂಡಿವೆ. ಕರ್ನಾಟಕದಲ್ಲಿ ಎಲ್ಲವೂ ಕನ್ನಡದಲ್ಲೇ ಇರಬೇಕೆಂದು, ಹಿಂದಿ ಹೇರಿಕೆ ಮಾಡಬಾರದೆಂದು ಹೋರಾಡುವವರೂ ಇದ್ದಾರೆ. ಕನ್ನಡವನ್ನು ಉಳಿಸುವುದು ಮತ್ತು ಅದಕ್ಕಾಗಿ ಕನ್ನಡವನ್ನು ಮಾತನಾಡುವುದು ಮತ್ತು ನಮ್ಮ ಮಕ್ಕಳಿಗೆ ಕನ್ನಡವನ್ನು ಕಲಿಸುವುದು ನಮ್ಮ ಕರ್ತವ್ಯವಾಗಿದೆ. ಆದರೆ ಕನ್ನಡವನ್ನು ಬೆಳೆಸಬೇಕು ಅಥವಾ ಶುದ್ಧೀ ಕರಿಸಬೇಕು ಎನ್ನುವ ಗುಂಗು ಅತಿಯಾದರೆ ಅದು ಒಳ್ಳೆಯ ಫಲಿತಾಂಶವನ್ನು ಕೊಡಲಾರದು. ಕನ್ನಡವನ್ನು ಉಳಿಸುವ ಮತ್ತು ಬೆಳೆಸುವ ಕಾಯಕಕ್ಕೆ ಇಳಿಯುವ ಮುನ್ನ ಕೆಲವೊಂದು ವಿಷಯಗಳ ಬಗ್ಗೆ ಆತ್ಮಾವಲೋಕನ ಅಗತ್ಯ.
Related Articles
Advertisement
ಹಾಗಾದರೆ ಕನ್ನಡವು ದೋಷಪೂರಿತ ಭಾಷೆಯೇ?, ಅದರ ದೋಷ ನಿವಾರಣೆ ಮಾಡಬೇಕೇ? ಅದಕ್ಕಾಗಿ ಅದರಲ್ಲಿರುವ ಸಂಸ್ಕೃತ, ಇಂಗ್ಲಿಷ್, ಹಿಂದಿ ಶಬ್ದಗಳನ್ನು ತೆಗೆದು ಅಲ್ಲಿಗೆ ನಾವೇ ಹೊಸದಾಗಿ ಸೃಷ್ಟಿಸಿರುವ ಶಬ್ದಗಳನ್ನು ಕಸಿ ಕಟ್ಟಬೇಕೇ? ಹೀಗೆ ಮಾಡಿದರೆ ಏನಾದೀತು?ಡಾಕ್ಟರ್, ಎಂಜಿನಿಯರ್, ಸೈಕಲ್, ಕೆಮರಾ, ಮೊಬೈಲ್ ಫೋನ್, ಬಸ್ ಇತ್ಯಾದಿ ಇಂಗ್ಲಿಷ್ ಶಬ್ದಗಳೂ ಸೂರ್ಯೋದಯ, ಸೋಮವಾರ, ಪಕ್ಷಾಂತರ, ತಂತ್ರಜ್ಞಾನ ಇತ್ಯಾದಿ ಸಂಸ್ಕೃತ ಶಬ್ದಗಳಿಂದ ಕನ್ನಡಕ್ಕೆ ಯಾವ ತೊಂದರೆಯೂ ಇಲ್ಲ. ಚಹಾದೊಳಗಿನ ಸಕ್ಕರೆ, ಹಾಲು, ನೀರುಗಳನ್ನೂ ಹೇಗೆ ಬೇರ್ಪಡಿಸಲಾಗದೋ ಅದೇ ರೀತಿ ಇವುಗಳನ್ನು ಸುಲಭವಾಗಿ ಕನ್ನಡದಿಂದ ಬೇರ್ಪಡಿಸಲಾಗದು. ಇಂತಹ ಹಲವು ಶಬ್ದಗಳು ಕನ್ನಡದಲ್ಲಿ ರಕ್ತಗತವಾಗಿವೆ ಮತ್ತು ಅವುಗಳು ಹಾಗೆಯೇ ಇದ್ದರೇ ಚೆನ್ನ ಹಾಗೂ ರಾಜ್ಯದ ಅನಕ್ಷರಸ್ಥರೂ ಕೂಡ ಈ ಶಬ್ದಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳುತ್ತಾರೆ. ಕೇವಲ ಶುದ್ಧೀಕರಣದ ಹೆಸರಿನಲ್ಲಿ ಯಾರೂ ಕೇಳಿರದ ಶಬ್ದಗಳನ್ನು ತುರುಕತೊಡಗಿದರೆ ಅದೊಂದು ಹೊಸ ಭಾಷೆಯಾದೀತು. ಈಗ ಜನಸಾಮಾನ್ಯರು ಮಾತನಾಡುವ, ಬರೆಯುವ ಕನ್ನಡವು ಸಂಸ್ಕೃತ, ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಗಳ ಹದವಾದ ಮಿಶ್ರಣವಾಗಿದ್ದು ನೂರಕ್ಕೆ ತೊಂಬತ್ತೈದು ಜನ ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ಬೇಕಾದರೆ ಕೇವಲ ಶೇ. 5 ಜನರಿಗಾಗಿ ಈ ಹೊಸ ಶಬ್ದಗಳ ಶಬ್ದಕೋಶದ ರಚನೆಯಾಗಲಿ. ಆದರೆ ಹೆಚ್ಚಿನ ಕನ್ನಡಿಗರು ಆ ಹೊಸ ಶಬ್ದಗಳನ್ನು ಒಪ್ಪಿ, ಕಲಿತು ಬಳಸಲು ಒಪ್ಪಲಾರರು. ಅದೊಂದು ತರಹದ ಹೊಸಕನ್ನಡದ ಹೇರಿಕೆಯಾದೀತು. ಭಾಷೆ ಎನ್ನುವುದು ಒಂದು ಸಂವಹನ ಮಾಧ್ಯಮ ವಷ್ಟೇ. ನಮ್ಮ ಭಾವನೆ, ಅಭಿಪ್ರಾಯ, ಸಲಹೆ, ತರ್ಕಗ ಳನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ವ್ಯಕ್ತಪಡಿ ಸುವುದಕ್ಕೋ ಇತರರು ಹೇಳುತ್ತಿರುವುದನ್ನು ಅರ್ಥ ಮಾಡಿಕೊಳ್ಳುವುದಕ್ಕೋ ಇರುವ ಮಾಧ್ಯಮ. ಇದು ಎಷ್ಟು ಸುಲಭವಾಗಿರುತ್ತದೋ ಅಷ್ಟು ಪರಿಣಾಮಕಾರಿ ಯಾಗಿರುತ್ತದೆ. ಹೆಚ್ಚು ಹೆಚ್ಚು ಜನ ಅದನ್ನು ಕಲಿತು ಮಾತ ನಾಡುತ್ತಾರೆ. ಆದುದರಿಂದ ಭಾಷೆಯನ್ನು ಸರಳೀಕರಿಸಿ, ಜನಪ್ರಿಯ, ಲೋಕಪ್ರಿಯಗೊಳಿಸುವತ್ತ ಪ್ರಯತ್ನ ಅಗತ್ಯ. ಈಗ ಚಲಾವಣೆಯಲ್ಲಿದ್ದು ಜನರು ಆಡುತ್ತಿರುವ ಕನ್ನಡವು ಸಿಹಿಯಾಗಿದ್ದು ಸುಲಭವಾಗಿ ಜೀರ್ಣವಾಗುವಂಥ ಕಬ್ಬಿನ ಹಾಲಿನಂತಿದೆ. ಇದನ್ನು ಕಠಿನಗೊಳಿಸಿ ಕಬ್ಬಿಣದ ಕಡಲೆಯಾಗಿಸುವ ಆವಶ್ಯಕತೆ ಇದೆಯೇ? – ಡಾ| ಸತೀಶ ನಾಯಕ್, ಅಲಂಬಿ