ಪರೀಕ್ಷೆಯ ತಲೆಬಿಸಿ ಮುಗಿದಿದೆ. ಇನ್ನೇನಿದ್ದರೂ ರಜೆಯ ಮಜ! ಮಕ್ಕಳೊಟ್ಟಿಗೆ, ಗೆಳತಿಯರೊಟ್ಟಿಗೆ ಹೊರಗೆ ಸುತ್ತುವ, ಟ್ರಿಪ್ ಹೋಗುವ ಸಮಯ. ಆದರೆ ಹೊರಗೆ ಹೋಗೋಕೆ ಭಯ, ಹಿಂಜರಿಕೆ. ಯಾಕಂದ್ರೆ, ಚರ್ಮ ಸುಟ್ಟು ಕಪ್ಪಾಗಿ ಬಿಡುವಷ್ಟು ಧಗೆ ಇದೆ. ಬಿಸಿಲಿಗೆ ಕೂದಲೆಲ್ಲ ಬೆವರಿ ಅಂಟಿಕೊಳ್ಳುವ, ಉದುರುವ ಹಿಂಸೆ ಬೇರೆ. ಬೇಸಿಗೆಯಲ್ಲಿ ಚರ್ಮ, ಕೂದಲಿನ ಆರೈಕೆಯೇ ದೊಡ್ಡ ತಲೆನೋವು ಅಂತ ಭಾವಿಸುವವರಿಗೆ ಇಲ್ಲಿದೆ ಕೆಲವು ಸರಳ ಟಿಪ್ಸ್‌ಗಳು.
1. ಸನ್‌ಸ್ಕ್ರೀನ್ ಹಚ್ಚಿ: ಬೇಸಿಗೆಯ ದಿನಗಳಲ್ಲಿ ಹೊರಗೆ ಹೋಗುವ ಮುನ್ನ ಮರೆಯದೆ ಮುಖ, ಕುತ್ತಿಗೆ, ಕೈ, ಕಾಲಿಗೆ ಸನ್‌ಸ್ಕ್ರೀನ್ ಕ್ರೀಮ್ ಹಚ್ಚಿ. ಆಗಾಗ ಮುಖ ತೊಳೆಯುವ ಅಭ್ಯಾಸವುಳ್ಳವರು ಕ್ರೀಮ್ ಅನ್ನು ಬ್ಯಾಗ್‌ನಲ್ಲೇ ಇಟ್ಟುಕೊಳ್ಳಿ.
2. ಹ್ಯಾಟ್, ಸನ್‌ಗ್ಲಾಸ್ ಧರಿಸಿ: ಸೂರ್ಯನ ಕಿರಣಗಳಿಗೆ ಹೆದರಿ ಮನೆಯಲ್ಲೇ ಕುಳಿತುಕೊಳ್ಳಲಾದೀತೆ? ಇಲ್ಲ ತಾನೇ? ಆದರೆ, ಅತಿಯಾದ ಬಿಸಿಲಿಗೆ ಮೈಯೊಡ್ಡುವುದೂ ತೊಂದರೆಯೇ. ಬಿರುಬಿಸಿಲಿನಿಂದ ಚರ್ಮವನ್ನು ರಕ್ಷಿಸಿಕೊಳ್ಳಲು ಹ್ಯಾಟ್, ಸನ್‌ಗ್ಲಾಸ್, ಸ್ಕಾಫ್ì ಬಳಸಿ. ಸೆಖೆ ಎಂದು ಸ್ಲಿàವ್‌ಲೆಸ್ ಬಟ್ಟೆ ಧರಿಸುವ ಬದಲು, ಕಾಟನ್‌ನ ತುಂಬುತೋಳಿನ ಬಟ್ಟೆ ಬಳಸಿ ಚರ್ಮವನ್ನು ಕಾಪಾಡಬಹುದು.
3. ಹೆಚ್ಚು ನೀರು ಕುಡಿಯಿರಿ: ಬೇಸಿಗೆಯಲ್ಲಿ ದೇಹಕ್ಕೆ ಹೆಚ್ಚು ನೀರಿನಾಂಶದ ಅಗತ್ಯವಿರುತ್ತದೆ. ದ್ರವ ಪದಾರ್ಥಗಳನ್ನು ಹೆಚ್ಚೆಚ್ಚು ಸೇವಿಸುವುದು ಉತ್ತಮ. ಅದು ಚರ್ಮಕ್ಕೂ ಒಳ್ಳೆಯದು. ತಂಪು ಪಾನೀಯಗಳಿಗಿಂತ ಮಜ್ಜಿಗೆ, ಎಳನೀರು, ಹಣ್ಣಿನ ರಸ ಆರೋಗ್ಯಕ್ಕೆ ಸಹಕಾರಿ. ಬೇಸಿಗೆಯ ದಿನಗಳಲ್ಲಿ ಕಡಿಮೆಯೆಂದರೂ ದಿನಕ್ಕೆ 3-4 ಲೀಟರ್ ನೀರು ಕುಡಿಯುವುದು ಸೂಕ್ತ.
4. ಚರ್ಮ ಸ್ವತ್ಛ ಹಾಗೂ ನುಣುಪಾಗಿರಲಿ: ಸಹಜವಾಗಿಯೇ ಬೇಸಿಗೆಯಲ್ಲಿ ನಾವು ಹೆಚ್ಚು ಬೆವರುತ್ತೇವೆ. ಬೆವರುಗುಳ್ಳೆಗಳಂಥ ಸಮಸ್ಯೆಗಳು ಕೂಡ ಕಾಡಬಹುದು. ಹಾಗಾಗಿ ಚರ್ಮವನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು. ಧೂಳಿರುವ ಪರಿಸರದಲ್ಲಿ ಅಡ್ಡಾಡಿದಾಗ ಹಾಗೂ ತರಕಾರಿ ತರಲೋ, ವಾಕಿಂಗ್‌ಗೋ ಹೊರಗೆ ಹೋಗಿ ಬಂದ ಮೇಲೆ ತಣ್ಣೀರಿನಿಂದ ಮುಖ ತೊಳೆಯುವುದನ್ನು ಮರೆಯಬೇಡಿ.
5. ಉತ್ತಮ ಆಹಾರ ಸೇವಿಸಿ: ಚರ್ಮದ ಆರೋಗ್ಯಕ್ಕೆ ಸಹಕಾರಿಯಾದ ಆ್ಯಂಟಿ ಆ್ಯಕ್ಸಿಡೆಂಟ್‌ಗಳನ್ನು ಸೇವಿಸಿ. ಈ ಗುಣ ಹೊಂದಿರುವ ತಾಜಾ ಹಣ್ಣು, ತರಕಾರಿಗಳನ್ನೇ ಹೆಚ್ಚೆಚ್ಚು ಬಳಸಿ. ಈ ಸೀಸನ್‌ನಲ್ಲಿ ಸಿಗುವ ಹಣ್ಣುಗಳು ಬೇಸಿಗೆಯ ಆರೈಕೆಗೆ ಉತ್ತಮ.
* ಡಾ. ಚಿತ್ರಾ ಆನಂದ್