Advertisement

ಕಾಯಕದಲ್ಲಿ ಶ್ರದ್ಧೆ ಬೆಳೆಸಿಕೊಂಡ ಟೆಂಗಳಿ

10:15 AM Aug 29, 2017 | Team Udayavani |

ಕಲಬುರಗಿ: ನಿರಂತರ ಕಾಯಕ ಮೈಗೂಡಿಸಿಕೊಂಡರೆ ಮನುಷ್ಯ ಹೇಗೆ ಮೇಲೆ ಬರಬಹುದು ಎಂಬುದಕ್ಕೆ ಇಂದಿನ ಯುವಕರಿಗೆ ಚಿನ್ನದ ಉದ್ಯಮಿ, ಎಚ್‌ ಕೆಸಿಸಿಐ ಅಧ್ಯಕ್ಷ ಸೋಮಶೇಖರ ಟೆಂಗಳಿ ಮಾದರಿಯಾಗಿದ್ದಾರೆ ಎಂದು ಶ್ರೀಶೈಲಂ ಸಾರಂಗಮಠದ ಜಗದ್ಗುರು ಡಾ| ಸಾರಂಗಧರೇಶ್ವರ ಮಹಾಸ್ವಾಮಿಗಳು ನುಡಿದರು. ಚೆನ್ನೆನ ಶಾಂತಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಲಭಿಸಿದ ಹಿನ್ನೆಲೆಯಲ್ಲಿ ಎಚ್‌ ಕೆಸಿಸಿಐ ಸಭಾಂಗಣದಲ್ಲಿ ಗೆಳೆಯರ ಬಳಗದಿಂದ ಸೋಮವಾರ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಸ್ವಾಮೀಜಿ
ಮಾತನಾಡಿದರು. ಬಸವಾದಿ ಶರಣರು ಕಲಿಸಿದ ಕಾಯಕ ಹಾಗೂ ದಾಸೋಹವನ್ನು ಜೀವನುದ್ದಕ್ಕೂ ಅಳವಡಿಸಿಕೊಂಡು ಸಾಮಾನ್ಯ ವ್ಯಕ್ತಿಯಾಗಿದ್ದ ಟೆಂಗಳಿ ಅವರಿಂದ ಅಸಾಮಾನ್ಯರಾಗಿ ಬೆಳೆದು ನಿಂತಿರುವುದು ಸಾಮಾನ್ಯವಾದುದ್ದಲ್ಲ ಎಂದು ಹೇಳಿದರು. ಬಂಗಾರದ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಕಾಯಕ ಶ್ರದ್ಧೆ ಬೆಳೆಸಿಕೊಂಡು ಸಿನಿಮಾ ತಾರೆಯಂತೆ ಮಿಂಚಿ ಬಂಗಾರದ ಅಂಗಡಿ ಮಾಲೀಕನಾಗಿ ಈಗ ಪ್ರತಿಷ್ಠಿತ ಹೈದ್ರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷರಾಗಿರುವುದು ಚಹಾ ಮಾರುತ್ತಿದ್ದ ವ್ಯಕ್ತಿ ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿಯಾಗಿರುವುದನ್ನು ನೆನಪಿಸುತ್ತದೆ ಎಂದು ಹೇಳಿದರು. ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ
ಸಲ್ಲಿಸಿದ ಅನೇಕರಿಗೆ ಗೌರವ ಡಾಕ್ಟರೇಟ್‌ ಲಭಿಸಿವೆ. ಮಠಾಧೀಶರಿಗೂ ಲಭಿಸಿವೆ. ಆದರೆ ಕೇವಲ 50ವರ್ಷದ ಚಿನ್ನದ ಉದ್ಯಮಿಯೊಬ್ಬರಿಗೆ ಗೌರವ ಡಾಕ್ಟರೇಟ್‌ ಲಭಿಸಿದ್ದು ಅಪರೂಪ ಹಾಗೂ ಮಾದರಿಯಾಗಿದೆ ಎಂದು ಹೇಳಿದರು.
ಪಾಲಿಕೆ ಮಹಾಪೌರ ಶರಣು ಮೋದಿ ಮಾತನಾಡಿ, ಗೆಳೆಯ ಸೋಮಶೇಖರ ಟೆಂಗಳಿ ತಮ್ಮ 50ನೇ ವರ್ಷ, 50 ವರ್ಷ ತುಂಬಿದ ಎಚ್‌ಕೆಸಿಸಿಐನಂಥ ಪ್ರತಿಷ್ಠಿತ ಸಂಸ್ಥೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಮಾದರಿಯಾಗಿದೆ ಎಂದು ಹೇಳಿದರು. ಹಿಂದುಳಿದ ವರ್ಗಗಳ ಮುಖಂಡ ತಿಪ್ಪಣಪ್ಪ ಕಮಕನೂರ ಮಾತನಾಡಿ, ಜನಪ್ರೀತಿ, ಹೃದಯವಂತಿಕೆ, ಪ್ರಾಮಾಣಿಕತೆಯಿದ್ದರೆ ಸಾಧಾರಣ ವ್ಯಕ್ತಿಯೂ ಉನ್ನತ ಮಟ್ಟಕ್ಕೆ ಬೆಳೆಯಬಲ್ಲ ಎಂಬುದಕ್ಕೆ ಟೆಂಗಳಿಯೇ ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು. ಡಾ| ಸೋಮಶೇಖರ ಟೆಂಗಳಿ ಬೆಳವಣಿಗೆಗೆ ಕಾರಣರಾದ ಉದ್ಯಮಿ ಸುಭಾಶ್ಚಂದ್ರ ಪಾಟೀಲ್‌ ಮತ್ತು ನಾಗೇಂದ್ರಪ್ಪ ಪಾಟೀಲ ಅವರನ್ನು
ಸನ್ಮಾನಿಸಲಾಯಿತು. ಅತಿಥಿಗಳಾಗಿ ಜಿಪಂ ಅಧ್ಯಕ್ಷೆ ಸುವರ್ಣಾ ಮಾಲಾಜಿ, ದಾಲ್‌ಮಿಲ್ಲರ್ಸ್‌ ಅಸೋಸಿಯೇಷನ್‌ ನ ಚಿದಂಬರರಾವ ಪಾಟೀಲ, ಎಪಿಎಂಸಿ ಅಧ್ಯಕ್ಷ ಶಾಂತಕುಮಾರ ಪಾಟೀಲ, ಗೆಳೆಯರ ಬಳಗದ ಸಂಚಾಲಕ ಬಸವರಾಜ ಕೊನೇಕ ಆಗಮಿಸಿದ್ದರು. ಉದ್ಯಮಿಗಳಾದ ಡಾ|ಎಸ್‌.ಎಸ್‌. ಪಾಟೀಲ, ಗುಂಡಪ್ಪ ಹಾಗರಗಿ, ಶಾಮ ಜೋಶಿ, ರಮೇಶ ಮಂದಕನಹಳ್ಳಿ, ಗಣೇಶಲಾಲ ತಪಾಡಿಯಾ, ಪ್ರಶಾಂತ ಮಾನಕರ, ಶಿವಾನಂದ ಹೂಲಿ, ಮಂಜುನಾಥ ಜೇವರ್ಗಿ,
ಉತ್ತಮ ಬಜಾಜ, ಸಂಗಮೇಶ ಕಲ್ಯಾಣಿ, ಅನೀಲ ಮರಗೋಳ, ಗುರುದೇವ ದೇಸಾಯಿ ಭಾಗವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಡಾ| ವಿಶ್ವನಾಥ ಚಿಮಕೋಡ ಅಭಿನಂದನಾ ಭಾಷಣ ಮಾಡಿದರು. ಪ್ರೊ| ಶಿವರಾಜ ಪಾಟೀಲ
ನಿರೂಪಿಸಿದರು. ವಿಜಯಲಕ್ಷ್ಮೀ ಕೆಂಗನಾಳ ಪ್ರಾರ್ಥಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next