Advertisement

ಜೀವಜಲಕ್ಕಾಗಿ ಹೆಚ್ಚಿದ ಪರದಾಟ

11:08 AM Jun 03, 2019 | Suhan S |

ಹಾವೇರಿ: ಸತತ ಐದಾರು ವರ್ಷಗಳಿಂದ ಬರ ಎದುರಿಸುತ್ತಿರುವ ಜಿಲ್ಲೆಯಲ್ಲಿ ಈ ಬಾರಿ ಕೆರೆ-ಕಟ್ಟೆ ಸೇರಿದಂತೆ ಬಹುತೇಕ ಎಲ್ಲ ಜಲಮೂಲಗಳು ಬರಿದಾಗಿದ್ದು, ಪಶು-ಪಕ್ಷಿ-ಪ್ರಾಣಿಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

Advertisement

ನೀರಿನ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಮನುಷ್ಯರು ಮಾತ್ರವಲ್ಲ ಪ್ರಾಣಿ-ಪಕ್ಷಿಗಳು ಸಹ ಪರಿತಪಿಸುತ್ತಿವೆ. ತಾಪಮಾನ 35ರಿಂದ 40 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. ಮೂಕ ಪ್ರಾಣಿ-ಪಕ್ಷಿಗಳು ಸಂಕಟ ಪಡುತ್ತಿವೆ. ನೀರಿಗಾಗಿ ಹತ್ತಾರು ಮೈಲಿ ಹುಡುಕಾಟ ನಡೆಸುತ್ತಿದ್ದು ನೀರು ಸಿಗದೇ ಕೆಲ ಸೂಕ್ಷ್ಮಪ್ರಾಣಿ-ಪಕ್ಷಿಗಳು ಸಾವಿಗೀಡಾಗುತ್ತಿವೆ.

ವಾಡಿಕೆ ಮಳೆಯಿಲ್ಲ: ಕೃಷಿ ಇಲಾಖೆ ಅಂಕಿ ಅಂಶಗಳ ಪ್ರಕಾರ ಸಾಮಾನ್ಯವಾಗಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಅಂದರೆ ಜನವರಿಯಿಂದ ಮೇ ವರೆಗೆ 126.7 ಮಿಮೀ. ವಾಡಿಕೆ ಮಳೆಯಾಗುತ್ತದೆ. ಇಷ್ಟು ಮಳೆಯಾದರೆ ಸಾಕು ಕೆರೆ ಕಟ್ಟೆಗಳಲ್ಲಿ ಸ್ವಲ್ಪ ಪ್ರಮಾಣದ ನೀರು ನಿಲ್ಲುತ್ತಿತ್ತು. ಕಳೆದ ವರ್ಷ 193.8 ಮಿ.ಮೀ.ಯಷ್ಟಾದರೂ ಮುಂಗಾರು ಪೂರ್ವ ಮಳೆಯಾಗಿತ್ತು. ಆದರೆ, ಈ ವರ್ಷ ಕೇವಲ 44.37 ಮಾತ್ರ ಮಳೆಯಾಗಿದ್ದು, ಮುಂಗಾರು ಪೂರ್ವ ಮಳೆಯೇ ಮರೀಚಿಕೆಯಾಗಿದೆ.

ಅಲ್ಲಲ್ಲಿ ವ್ಯವಸ್ಥೆ: ಜಿಲ್ಲಾ ಪಂಚಾಯಿತಿ ಅಲ್ಲಲ್ಲಿ ನೀರಿನ ತೊಟ್ಟಿಗಳನ್ನು ಇಟ್ಟು ಟ್ಯಾಂಕರ್‌ ಮೂಲಕ ನೀರು ತುಂಬಿಸುವ ಕೆಲಸ ಮಾಡುತ್ತಿದೆ. ಅರಣ್ಯ ಇಲಾಖೆ ಅಭಯಾರಣ್ಯ, ಪ್ರಾಣಿ-ಪಕ್ಷಿಧಾಮಗಳಲ್ಲಿ ನೀರಿನ ತೊಟ್ಟಿಗಳನ್ನು ಮಾಡಿ ಟ್ಯಾಂಕರ್‌ ಮೂಲಕ ನೀರು ಹಾಕುತ್ತಿದೆ. ಕೆಲ ಜನರು ಸ್ವಯಂಪ್ರೇರಿತರಾಗಿ ತಮ್ಮ ಮನೆ, ಹಿತ್ತಲಲ್ಲಿ ಪಕ್ಷಿಗಳಿಗಾಗಿ ನೀರಿಟ್ಟು ತಮ್ಮ ಪಕ್ಷಿ ಪ್ರೀತಿ ಮೆರೆಯುತ್ತಿದ್ದಾರೆ.

Advertisement

ಕೆಲ ಪ್ರಾಣಿ-ಪಕ್ಷಿಗಳು ಕಾಡಿನಲ್ಲಿ ನೀರು ಸಿಗದೆ ನೀರು ಹುಡುಕಿ ಜನವಸತಿ ಪ್ರದೇಶಗಳಿಗೂ ಬರುತ್ತಿವೆ. ಕೆಲವೊಮ್ಮೆ ಇಲ್ಲಿಯ ಬೀದಿ ನಾಯಿ, ಬೆಕ್ಕುಗಳ ದಾಳಿಗೂ ಸಿಲುಕಿ ಬಲಿಯಾಗುತ್ತಿವೆ. ಕೋತಿ, ಗುಬ್ಬಚ್ಚಿ, ಕಾಗೆ, ಬೀದಿಗೆ ಬಿಟ್ಟ ಹಸು, ಎಮ್ಮೆ, ಕರುಗಳು, ಬೀದಿ ನಾಯಿಗಳು ಮನೆ ಇಲ್ಲವೇ ನಲ್ಲಿಗಳ ಬಳಿ ನೀರಿಗಾಗಿ ನಿಂತ ದೃಶ್ಯಗಳು ಅಲ್ಲಲ್ಲಿ ಕಂಡು ಬರುತ್ತಿವೆ.

ಅರಣ್ಯ ಪ್ರದೇಶಗಳಲ್ಲಿ, ಪ್ರಾಣಿ ಪಕ್ಷಿಗಳ ಸಂಖ್ಯೆ ಹೆಚ್ಚಿರುವ ಕಡೆಗಳಲ್ಲಿ ನೀರಿನ ತೊಟ್ಟಿ ನಿರ್ಮಿಸಿ ನೀರುಣಿಸುವ ಅಭಿಯಾನವನ್ನು ಜಿಲ್ಲಾಡಳಿತ, ಅರಣ್ಯ ಇಲಾಖೆ ಕೈಗೊಂಡಿದೆ. ಈ ಅಭಿಯಾನ ಎಲ್ಲೆಡೆ ವ್ಯಾಪಿಸಿ ಪ್ರಾಣಿ-ಪಕ್ಷಿಗಳಿಗೆ ಎಲ್ಲೆಡೆ ನೀರು ಸಿಗುವಂತಾಗಬೇಕೆಂಬುದು ಪ್ರಾಣಿ-ಪಕ್ಷಿ ಪ್ರಿಯರ ಕಳಕಳಿ.

ಪ್ರಾಣಿ-ಪಕ್ಷಿಗಳ ನೀರಿನ ದಾಹ ತೀರಿಸಲು ಅನುಕೂಲವಾಗುವಂತೆ ಅಲ್ಲಲ್ಲಿ ತೊಟ್ಟಿಗಳನ್ನು ನಿರ್ಮಿಸಿ ನೀರು ತುಂಬಿಸಲಾಗುತ್ತಿದೆ. ಅರಣ್ಯ ಪ್ರದೇಶದಲ್ಲೂ ತೊಟ್ಟಿಯನ್ನು ಮಾಡಿ ಪ್ರಾಣಿ-ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಜನ ಸಹ ಪ್ರಾಣಿ-ಪಕ್ಷಿಗಳಿಗಾಗಿ ತಮಗೆ ಸಾಧ್ಯವಾದ ಸ್ಥಳದಲ್ಲಿ ನೀರು ತುಂಬಿಡಬೇಕು.•ಕೃಷ್ಣ ಭಾಜಪೇಯಿ, ಜಿಲ್ಲಾಧಿಕಾರಿ, ಹಾವೇರಿ

•ಎಚ್.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next