Advertisement

ಸೇವಾ ನಿವೃತ್ತಿ ಹಣಕ್ಕೆ ವರ್ಷದಿಂದ ಅಲೆದಾಟ

12:50 PM Mar 30, 2022 | Team Udayavani |

ಔರಾದ: ಸೇವಾ ನಿವೃತ್ತಿ ಹಣ ನೀಡಿರೆಂದು ತಾಲೂಕಿನ ಸಂತಪುರ ಸಿಡಿಪಿಒ ಕಚೇರಿಗೆ ಮೂರು ವರ್ಷಗಳಿಂದ ನಿತ್ಯ ಅಲೆದರೂ ಪ್ರಯೋಜನವಾಗಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಹಣವಿಲ್ಲದೆ ನರಳುತ್ತಿದ್ದೇವೆಂದು ಅಂಗಲಾಚಿ ಬೇಡಿಕೊಂಡರೂ ಅಧಿಕಾರಿಗಳಿಗೆ ಮಾತ್ರ ಕರುಣೆಯೇ ಬರುತ್ತಿಲ್ಲ.

Advertisement

ಹೌದು. ಔರಾದ ತಾಲೂಕಿನ ಬೋರಾಳ ಗ್ರಾಮದಲ್ಲಿನ ನಾಗಮ್ಮಾ ಗಣಪತರಾವ್‌ ಅವರು ಸಂತಪುರ ಶಿಶು ಅಧಿಕಾರಿಗಳ ಕಚೇರಿಯಲ್ಲಿ ಸೇವೆ ಸಲ್ಲಿಸಿ ಮೂರು ವರ್ಷಗಳ ಹಿಂದೆ ಸೇವಾ ನಿವೃತ್ತಿ ಪಡೆದರೂ ಇಂದಿಗೂ ಮಾಸಾಶನ ಸಿಕ್ಕಿಲ್ಲ. ಹೃದಯ ರೋಗ ಸಮಸ್ಯೆಯಿಂದ ಬಳಲುತ್ತಿದ್ದ ನಾಗಮ್ಮಾ ಅವರು ಈ ಹಿಂದೆ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಸಾಲದ ಸುಳಿಯಲ್ಲಿ ಸಿಲುಕಿ ನರಳುತ್ತಿದ್ದಾರೆ.

ಎರಡನೇ ಬಾರಿಗೂ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವಂತೆ ಹೃದಯ ರೋಗ ತಜ್ಞರು ಹೇಳಿದ್ದಾರೆ. ಆದರೆ ಕೈಯಲ್ಲಿ ಬಿಡಿಗಾಸು ಇಲ್ಲ. ಇಲಾಖೆಯಿಂದ ಬರಬೇಕಿದ್ದ ಸೇವಾ ನಿವೃತ್ತಿ ವೇತನ 10 ಲಕ್ಷ ಹಾಗೂ ಪರಿವೀಕ್ಷಣಾ ಅವಧಿಯ ಹಿಂಬಾಕಿ ಲಕ್ಷ ಬರಬೇಕು. ಆದರೆ ಇಂದಿಗೂ ಬಂದಿಲ್ಲ.

ಕಚೇರಿಗೆ ಅಲೆದಾಟ ತಪ್ಪಿಲ್ಲ

ಸಿಡಿಪಿಒ ಕಚೇರಿಯಲ್ಲಿ ಮೇಲ್ವಿಚಾರಕಿಯಾಗಿ ನಿವೃತ್ತಿ ಪಡೆದ ನಾಗಮ್ಮ ಗಣಪತರಾವ್‌, ಮುಂಗನಾಳ ಗ್ರಾಮದ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ನಿವೃತ್ತಿ ಪಡೆದ ಶಕುಂತಲಾ ಘೂಳೆ, ರಕ್ಷಾಳ ಗ್ರಾಮದ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ನಿವೃತ್ತಿ ಪಡೆದ ತಾರಾಬಾಯಿ, ಮಾನೂರ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ನಿವೃತ್ತಿ ಪಡೆದ ಮಹಾದೇವಿ, ಔರಾದ ಪಟ್ಟಣದ ಅಂಗನವಾಡಿಯಲ್ಲಿ ನಿವೃತ್ತಿ ಪಡೆದ ಸುಭದ್ರಾ ಪಟ್ನೆ ಸೇರಿದಂತೆ ಇನ್ನೂ ಹಲವು ಸಿಬ್ಬಂದಿ ತಮ್ಮ ನಿವೃತ್ತಿ ವೇತನ ನೀಡುವಂತೆ ನಿತ್ಯ ಕಚೇರಿಗೆ ಅಲೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಇಂದು-ನಾಳೆ ಎನ್ನುವ ನೆಪ ಹೇಳುತ್ತಿದ್ದಾರೆ. ನಮ್ಮ ಸಮಸ್ಯೆ ಬಗೆಹರಿಯುತ್ತಿಲ್ಲವೆಂದು ತಿಳಿಸಿದ್ದಾರೆ.

Advertisement

ನಮ್ಗೆ ಸಾವೇ ಗತಿ

ಕಳೆದ ಮೂರು ವರ್ಷಗಳಿಂದ ನಮಗೆ ಇಲಾಖೆಯಿಂದ ಬರಬೇಕಿದ್ದ ನಿವೃತ್ತಿ ವೇತನ ಇಂದಲ್ಲ ನಾಳೆ ಬರುತ್ತದೆ ಎನ್ನುವ ಹಂಬಲದಲ್ಲಿ ಮೂರು ವರ್ಷಗಳಿಂದ ಜೀವನ ಸಾಗಿಸುತ್ತಿದ್ದೇವೆ. ಇಲಾಖೆಯಿಂದ ಹಣ ಬರುತ್ತದೆ ಎಂದು ನಂಬಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳಿಂದ ಹಣ ಪಡೆಯುತ್ತಿರುವುದು ಸಾಕಾಗಿದೆ. ನಮಗೆ ಸಾವೇ ಬರಲಿ ಎಂಬ ಸ್ಥಿತಿ ಬಂದಿದೆ ಎನ್ನುತ್ತಿದ್ದಾರೆ ನಿವೃತ್ತಿ ಪಡೆದವರು. ಇಲಾಖೆ ನಿಯಮದ ಪ್ರಕಾರ ಶಿಶು ಅಭಿವೃದ್ಧಿ ಅಧಿಕಾರಿಗಳ ಕಚೇರಿಯಲ್ಲಿ ಕೆಲಸ ಮಾಡಿದ ಮೇಲ್ವಿಚಾರಕಿಗೆ ಹದಿನೈದರಿಂದ ಇಪ್ಪತ್ತು ದಿನಗಳಲ್ಲಿ, ಅಂಗನವಾಡಿ ಶಿಕ್ಷಕಿಯರು ಸೇವಾ ನಿವೃತ್ತಿ ಪಡೆದ ವಾರದಲ್ಲಿ ನಿವೃತ್ತಿ ವೇತನ ನೀಡುವಂತೆ ನಿಯಮವಿದೆ. ಆದರೆ ಅಧಿಕಾರಿಗಳು ಇಲ್ಲಿಯತನಕವೂ ನೀಡಿಲ್ಲ.

ಬೋರಾಳ ಗ್ರಾಮದಲ್ಲಿನ ನಾಗಮ್ಮಾ ಗಣಪತರಾವ್‌ ಸ್ಥಿತಿ ಚಿಂತಾಜನಕವಾಗಿದೆ. ಈ ಬಗ್ಗೆ ಖುದ್ದಾಗಿ ನಾನು ಸಂತಪುರ ಸಿಡಿಪಿಒ ಕಚೇರಿಗೆ ಹೋಗಿ ತಿಳಿಸಿದರೂ ಪ್ರಯೋಜನವಾಗಿಲ್ಲ. ವಾರದಲ್ಲಿ ಸೇವಾ ನಿವೃತ್ತಿ ಪಡೆದ ಎಲ್ಲ ಸಿಬ್ಬಂದಿಗಳ ವೇತನ ನೀಡಲು ಅಧಿಕಾರಿಗಳು ಮುಂದಾಗಬೇಕು. ಇಲ್ಲವಾದಲ್ಲಿ ಅಷ್ಟು ನಿವೃತ್ತಿ ಪಡೆದ ಕುಟುಂಬದ ಸದಸ್ಯರೊಂದಿಗೆ ಹೋಗಿ ನಾನೂ ಹೋರಾಟ ಮಾಡುತ್ತೇನೆ. -ಬಸವರಾಜ ಶಟಕಾರ, ಸಾಮಾಜಿಕ ಹೋರಾಟಗಾರ

ಇಲಾಖೆಯಿಂದ ಮೂರು ವರ್ಷದಲ್ಲಿ ನಿವೃತ್ತಿ ಪಡೆದ ಎಲ್ಲ ಸಿಬ್ಬಂದಿಗಳ ಸೇವಾ ನಿವೃತ್ತಿ ವೇತನ ವಾರದಲ್ಲಿ ನೀಡಲಾಗುತ್ತದೆ. ಕೆಲ ತಾಂತ್ರಿಕ ಕಾರಣ ಸಮಸ್ಯೆಯಿಂದ ವಿಳಂಬವಾಗಿದೆ. -ಶಂಭುಲಿಂಗ ಹಿರೇಮಠ, ಸಿಡಿಪಿಒ, ಸಂತಪುರ

-ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next