Advertisement

ಒಂಟೆ ಬದುಕಿನ ಅಲೆಮಾರಿ ಜೀವನ 

10:50 AM Dec 29, 2018 | |

ವಿಜಯಪುರ: ಆಕಳು, ಎಮ್ಮೆ, ಕುರಿ, ಕೋಳಿ ಸಾಕಿ ಜೀವನ ಮಾಡುವವರನ್ನು ನೋಡಿರುತ್ತೀರಿ. ಆದರೆ ತಲೆಮಾರಿನಿಂದ ಒಂಟೆಗಳನ್ನು ಸಾಕಿ ಅಲೆಮಾರಿ ಜೀವನ ನಡೆಸುತ್ತಿರುವ ಕುಟುಂಬ ಇದೀಗ ನಾಟಕದಲ್ಲಿ ಒಂಟೆಗಳ ಪ್ರದರ್ಶನ ನೀಡಲು ವಿಜಯಪುರಕ್ಕೆ ಆಗಮಿಸಿದೆ.

Advertisement

ಮಹಾರಾಷ್ಟ್ರದ ಪುಣೆ ಪಕ್ಕದ ಹಳ್ಳಿಯೊಂದರ ಜಗತಾಪ ಕುಟುಂಬ 15 ಒಂಟೆಗಳನ್ನು ಸಾಕಿದ್ದು, ಅವುಗಳಿಂದಲೇ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದೆ. ಇದಕ್ಕಾಗಿ ಕರ್ನಾಟಕ ಮೂಲೆ ಮೂಲೆಗೆ ನಿತ್ಯವೂ ಸಂಚರಿಸುವ ಈ ಕುಟುಂಬ ಮಕ್ಕಳ ಶಿಕ್ಷಣಕ್ಕಿಂತ ಬದುಕು ಮುಖ್ಯ ಎನ್ನುತ್ತ ಊರೂರು ಅಲೆಯುತ್ತಿದೆ. ಸುಮಾರು 50 ಸಾವಿರ ರೂ. ಮೌಲ್ಯದ ಒಂಟೆಗಳು ಕುರಿ, ಮೇಕೆಗಳು ತಿನ್ನುವ ಎಲ್ಲ ರೀತಿಯ ಸಸ್ಯಗಳನ್ನು ತಿನ್ನುತ್ತಿದ್ದರೂ ಬೇವಿನ ಸೊಪ್ಪು ಅತ್ಯಂತ ಪ್ರಿಯ ಆಹಾರ.

ಜಗತಾಪ ಕುಟುಂಬದ ಮೊಘಲ್‌ ಎಂಬುವರು ಹಿರಿಯರಿಂದ ಬಂದಿದ್ದ ಒಂಟೆ ಸಾಕುವುದನ್ನು ಬದುಕಾಗಿಸಿಕೊಂಡಿದ್ದು, ತಮ್ಮ ಮಗ ನಾಮದೇವ ಅವರಿಗೆ ಬಳುವಳಿಯಾಗಿ ನೀಡಿದ್ದರು. ಇದೀಗ ನಾಮದೇವ ಅವರ ಮಕ್ಕಳಾದ ಅವಿನಾಶ ಹಾಗೂ ವಿಕಾಸ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇವರ ಬಳಿ 15 ಒಂಟೆಗಳಿದ್ದು, ತಮ್ಮ ಹೊಟ್ಟೆ ತುಂಬಿಸುವ ಅವುಗಳನ್ನು ಮಕ್ಕಳಂತೆ ಸಾಕುತ್ತ ಬರುತ್ತಿದ್ದಾರೆ.

ಊರುರು ಅಲೆಯುವ ಈ ಒಂಟೆ ಸಂಸಾರದ ಕುಟುಂಬಗಳನ್ನು ಉತ್ಸವ, ಮೆರವಣಿಗೆ, ಹಬ್ಬ ಹರಿದಿನಗಳಲ್ಲಿ ದೇವಸ್ಥಾನಗಳ ಜಾತ್ರೆ, ಗಣೇಶ ಉತ್ಸವ ಹೀಗೆ ಹಲವು ಕಾರ್ಯಕ್ರಮಗಳಿಗೆ ಬಾಡಿಗೆ ನೀಡುತ್ತಾರೆ. ಅಲ್ಲದೇ ಊರೂರು ಅಲೆಯುವಾಗ ಮಕ್ಕಳನ್ನು ಒಂಟೆಗಳ ಮೇಲೆ ಮೆರವಣಿಗೆ ಮಾಡಿಸಿ ಅದರಿಂದ ಸಂಪಾದನೆ ಅಗುವ ಹಣದಲ್ಲಿ ಜೀವನ ನಡೆಸುತ್ತಾರೆ.

ಚಲನಚಿತ್ರಗಳಲ್ಲೂ ಇವರ ಒಂಟೆ ಕುಟುಂಬಗಳು ನಟಿಸಿದ್ದು, ಖ್ಯಾತ ತಾರಾಗಣದ ಪದ್ಮಾವತಿ ಮಾತ್ರವಲ್ಲ ಕನ್ನಡದ ನಾಯಕನಟ ಗಣೇಶ ಅಭಿನಯದ ಹಲವು ಚಿತ್ರಗಳಲ್ಲೂ ನಟಿಸಿವೆ. ಇದೀಗ ಕಗ್ಗೋಡ ಗ್ರಾಮದಲ್ಲಿ ಡಿ. 29 ಹಾಗೂ 31ರಂದು ನಡೆಯಲಿರುವ ಐತಿಹಾಸಿಕ ಶಿವ ಘರ್ಜನೆ ನಾಟಕದಲ್ಲಿ ಶಿವಾಜಿ ಮಹಾರಾಜರ ಸೇನೆಯಲ್ಲಿನ ಒಂಟೆ ಬಲ ಪ್ರದರ್ಶನ ನೀಡಲು 4 ಒಂಟೆಗಳನ್ನು ಬಳಸಲು ಮುಂದಾಗಿದೆ.

Advertisement

ಪ್ರತಿ ಒಂಟೆ ಪ್ರದರ್ಶನಕ್ಕೆ 5 ಸಾವಿರ ರೂ. ಬೆಲೆ ನಿಗದಿ ಮಾಡಿದ್ದು, ಮಹಾರಾಷ್ಟ್ರದ ಹಲವು ಕಡೆಗಳಲ್ಲಿ ಈ ನಾಟಕದ 15 ಪ್ರದರ್ಶನ ನೀಡಿದೆ. ಇದೇ ಮೊದಲ ಬಾರಿಗೆ ಕರ್ನಾಟಕದ ವಿಜಯಪುರ ಜಿಲ್ಲೆಯ ಕಗ್ಗೋಡ ಗ್ರಾಮದಲ್ಲಿ ಈ ನಾಟಕದ ಪ್ರದರ್ಶನಕ್ಕೆ ಬಂದಿದೆ.

ಊರೂರು ಅಲೆಯುವ ಈ ಕುಟುಂಬಕ್ಕೆ ಶಿಕ್ಷಣ ಮರೀಚಿಕೆಯಾಗಿದ್ದು, ಈ ಕುಟುಂಬದ ಯಾರೂ ಹೈಸ್ಕೂಲ್‌ ಮೆಟ್ಟಿಲೇರಿಲ್ಲ. ಅವಿನಾಶ 6ನೇ ತರಗತಿ ಓದಿಗೆ ಶರಣು ಹೊಡೆದಿದ್ದರೆ, ಇವರ ಅಣ್ಣ ವಿಕಾಸ 2ನೇ ತರಗತಿಗೆ ಕೂಮುಗಿಯಲು ಕುಟುಂಬದ ಅಲೆಮಾರಿ ಜೀವನವೇ ಪ್ರಮುಖ ಕಾರಣ. ಇದೀಗ ವಿಕಾಸ ಅವರ ನಾಲ್ಕು ಮಕ್ಕಳಲ್ಲಿ ಇಬ್ಬರು ಮಕ್ಕಳು ಅಭಿಷೇಕ, ಆದರ್ಶ ಇಬ್ಬರೂ 4ನೇ ತರಗತಿಗೆ ಶಿಕ್ಷಣ ನಿಲ್ಲಿಸಿ ಒಂಟೆ ಕಾಯುವ ಕಾಯಕ ಮಾಡುತ್ತಿದ್ದರೆ, ಇನ್ನಿಬ್ಬರು ಮಕ್ಕಳು ಓದಿಗೆ ಶರಣು ಹೊಡೆಯಲು ಸಿದ್ಧರಾಗಿದ್ದಾರೆ.

ಒಂಟೆ ಪಾಲನೆ ಮಾಡುತ್ತಿರುವ ನಮ್ಮ ಕುಟುಂಬಕ್ಕೆ ಎಂದೂ ಅನ್ನದ ಕೊರತೆ ಆಗಿಲ್ಲ. ಶಿಕ್ಷಣ ಕಲಿತು ನಾವು ಏನನ್ನೂ ಸಾಧಿಸಬೇಕಿಲ್ಲ, ಒಂಟೆಗಳೇ ನಮ್ಮ ಬದುಕಾಗಿರುವ ಕಾರಣ ಈ ಜೀವನದಲ್ಲೇ ನಮ್ಮ ಜೀವನ ಸಂತೃಪ್ತಿ ಪಡೆಯುತ್ತಿದೆ ಎಂದು ಒಂಟೆಗಳ ಮಾಲೀಕ ಅವಿನಾಶ ವಿವರಿಸುತ್ತಾರೆ.

ಒಂಟೆ ಪಾಲನೆ ಮಾಡುತ್ತಿರುವ ನಮ್ಮ ಕುಟುಂಬಕ್ಕೆ ಎಂದೂ ಅನ್ನದ ಕೊರತೆ ಆಗಿಲ್ಲ. ಶಿಕ್ಷಣ ಕಲಿತು ನಾವು ಏನನ್ನೂ ಸಾಧಿಸಬೇಕಿಲ್ಲ, ಒಂಟೆಗಳೇ ನಮ್ಮ ಬದುಕಾಗಿರುವ ಕಾರಣ ಈ ಜೀವನದಲ್ಲೇ ನಮ್ಮ ಜೀವನ ಸಂತೃಪ್ತಿ ಪಡೆಯುತ್ತಿದೆ.
 ಅವಿನಾಶ ಜಗತಾಪ, ಒಂಟೆ ಮಾಲೀಕ

ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next