Advertisement
ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಜಾನುವಾರುಗಳು ಮೇವು, ನೀರಿಗಾಗಿ ಪರದಾಡುತ್ತಿವೆ. ಎಲ್ಲಿ ನೋಡಿದರೂ ಬರೀ ಬರಡು ನೆಲ ಕಾಣಿಸುತ್ತಿದೆ. ಇಲ್ಲಿನ ಕುರಿಗಾರರು ನೀರು, ಮೇವು ಅರಸುತ್ತಾ ಕಿ.ಮೀ.ಗಟ್ಟಲೇ ದೂರ ಅಲೆದಾಡುವಂತಾಗಿದೆ. ಬಿಸಿಲಿನ ತಾಪಕ್ಕೆ ಭೂಮಿ ಕಾದು ಕಾವಲಿಯಂತಾಗಿದೆ. ಎತ್ತ ನೋಡಿದರು ಬರಡು ಭೂಮಿ ಎದ್ದು ಕಾಣುತ್ತಿದೆ. ಕುರಿಗಳಿಗೆ, ದನ-ಕರುಗಳಿಗೆ ತೊಟ್ಟು ನೀರು ಕುಡಿಸಲು ಕುರಿಗಾಹಿಗಳು ನಿತ್ಯ ಹರ ಸಾಹಸಪಡಬೇಕಾಗಿದೆ. ಕುರಿಗಾರರು ತಮ್ಮ ಹಿಂಡುಗಳೊಂದಿಗೆ ನೀರಾವರಿ ಪ್ರದೇಶಗಳಾದ ಸಿಂಧನೂರ, ಮಾನ್ವಿ, ಸುರಪುರ ಕಡೆ ಗುಳೆ ಹೋಗಿ ಅಲ್ಲಿ ಸಿಗುವ ನೀರು, ಮರಗಿಡಗಳ ತಪ್ಪಲು, ಹಸಿರು ಮೇವು ತಿನ್ನಿಸಿ ಕುರಿಗಳ ಜೀವ ಉಳಿಸಿಕೊಳ್ಳುತ್ತಿದ್ದಾರೆ. ಇನ್ನು ಮನೆಯಲ್ಲಿ ಅನಾನುಕೂಲ ಇರುವ ಕೆಲ ಕುರಿಗಾಹಿಗಳು ಇಲ್ಲಿಯೇ ಖಾಸಗಿ ವ್ಯಕ್ತಿಗಳ ತೋಟ, ಬಾವಿಗಳ ಹತ್ತಿರ ತಮ್ಮ ಕುರಿಗಳಿಗೆ, ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮೊದಲಿಗೆ ಮೂರು-ನಾಲ್ಕು ಕಿ.ಮೀ.ದೂರದವರೆಗೆ ಹೋಗಿ ಮೇಯಿಸಿಕೊಂಡು ಸಂಜೆ ಮನೆಗೆ ಮರಳುತ್ತಿದ್ದವು. ಆದರೆ ಈಗ ಬಿಸಿಲಿನ ಧಗೆಗೆ ಗಿಡಮರಗಳು ಒಣಗುತ್ತಿವೆ. ಎಲ್ಲಿಯೂ ಹಲ್ಲು ಸಿಗದೇ ಬರಿ ಕೆಂಪು, ಕಪ್ಪು ನೆಲ ಕಾಣಿಸುತ್ತಿದೆ. 8-10ಕಿ.ಮೀ. ದೂರ ಹೋದರೂ ಹಸಿರು ಹುಲ್ಲು-ನೀರು ಸಿಗುತ್ತಿಲ್ಲ. ಕುರಿಗಳನ್ನು ಮೇಯಿಸಲು ತುಂಬ ತೊಂದರೆಯಾಗುತ್ತಿದೆ ಎಂದು ಕುರಿಗಾಹಿಗಳಾದ ಮೀಟಪ್ಪ, ಗನಕಪ್ಪ, ಬಾಳಪ್ಪ ಅಳಲು ತೋಡಿಕೊಂಡರು.
Related Articles
Advertisement