ಮುಂಡರಗಿ: ಪಟ್ಟಣದಲ್ಲಿ ಖಾಸಗಿ ಮೊಬೈಲ್ ಕಂಪನಿ ಭೂಮಿಯೊಳಗೆ ಕೇಬಲ್ ಹಾಕಲು ಹೋಗಿ ಪೈಪ್‌ಲೈನ್ ಒಡೆದ ಪರಿಣಾಮ ಕೊಪ್ಪಳ ರಸ್ತೆ, ಹೇಮರಡ್ಡಿ ಮಲ್ಲಮ್ಮ ನಗರ, ಅನ್ನದಾನೀಶ್ವರ ನಗರ, ಡಾ| ಬಿ.ಆರ್. ಅಂಬೇಡ್ಕರ ನಗರದಲ್ಲಿ ನೀರು ಬಾರದೇ ಜನರು ಪರದಾಡುವಂತಾಗಿದೆ.
ಕಳೆದ ಒಂದು ವಾರದ ಹಿಂದೆ ಖಾಸಗಿ ಮೊಬೈಲ್ ಕಂಪನಿ ಪುರಸಭೆಯಿಂದ ಪರವಾನಗಿ ಪಡೆದುಕೊಂಡು ಪಟ್ಟಣದಲ್ಲಿ ಕೇಬಲ್ ಹಾಕಲು ಪ್ರಯತ್ನಿಸಿದೆ. ಆದರೆ ಭೀಮರಾವ್ ವೃತ್ತ, ಜಾಗೃತ ಸರ್ಕಲ್ ವರೆಗೂ ಕೇಬಲ್ ಭೂಮಿಯೊಳಗೆ ಹಾಕಿದೆ. ಆದರೆ ಪುರಸಭೆ ಸಿಬ್ಬಂದಿಯಿಂದ ನೀರಿನ ಪೈಪ್‌ಲೈನು ಎಲ್ಲಿ ಇದೆ ಎನ್ನುವ ಮಾಹಿತಿ ಪಡೆದುಕೊಂಡು ಕೇಬಲ್ ಹಾಕಬೇಕಿತ್ತು. ಕಂಪನಿ ಸಿಬ್ಬಂದಿ ರಾತ್ರಿ ಕೇಬಲ್ ಹಾಕಿದ್ದರಿಂದ ಪೈಪ್‌ಲೈನ್‌ನಲ್ಲಿ ಕೇಬಲ್ ಹೊಕ್ಕಿದೆ. ಹಾಗಾಇ ನೀರು ಸರಬರಾಜು ಆಗುವ ಪೈಪ್‌ಲೈನ್ ಒಡೆದು ಹೋಗಿದೆ.
ರಾತ್ರಿ ಕಾಮಗಾರಿ ಅವಾಂತರ: ಖಾಸಗಿ ಮೊಬೈಲ್ ಕಂಪನಿ ಪರವಾನಗಿ ಪಡೆದುಕೊಂಡಿರುವ ಪ್ರದೇಶ ಬೇರೆ. ಕೇಬಲ್ ಹಾಕುತ್ತಿರುವ ಪ್ರದೇಶ ಬೇರೆಯಾಗಿದೆ. ಜತೆಗೆ ನೀರು ಬೀಡುವ ವಾಲ್ಟ್ ಗಳು ಕೂಡ ಹಾಳಾಗಿ ಹೋಗಿವೆ. ಇದರಿಂದಾಗಿ ಬಹುಮುಖ್ಯವಾಗಿ ಡಾ| ಬಿ.ಆರ್. ಅಂಬೇಡ್ಕರ್ ನಗರದಲ್ಲಿಯೇ ಕಳೆದ ಒಂದು ವಾರದಿಂದ ನೀರು ಬಾರದಂತಾಗಿದೆ. ಡಾ| ಬಿ.ಆರ್. ಅಂಬೇಡ್ಕರ ನಗರದಲ್ಲಿ ಪುರಸಭೆ ಪೌರಕಾರ್ಮಿಕರು ವಾಸಿಸುತ್ತಿದ್ದಾರೆ. ಪ್ರತಿನಿತ್ಯ ಕೆಲಸ ಮುಗಿಸಿ ಬಂದ ನಂತರ ಸ್ನಾನ ಮಾಡಲು ನೀರು ಇಲ್ಲದಂತಾಗಿದೆ.
ಜತೆಗೆ ಲಕ್ಷ್ಮೀ ಕನಕನರಸಿಂಹ ಜಾತ್ರೆ ಹತ್ತಿರದಲ್ಲಿಯೇ ಇರುವುದರಿಂದ ಡಾ| ಬಿ.ಆರ್.ಅಂಬೇಡ್ಕರ ನಗರದ ನಿವಾಸಿಗಳಿಗೆ ನೀರಿನ ಸಮಸ್ಯೆ ಸಹ ಎದುರಾಗಿದೆ. ಕೇಬಲ್ ಹಾಕುವ ಪರವಾನಗಿ ಅರ್ಜಿ ಬಂದ ದಿನವೇ ಕಡಿಮೆ ಶುಲ್ಕ ತುಂಬಿಸಿಕೊಂಡು ಮಂಜೂರು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಪಟ್ಟಣದಲ್ಲಿ ಖಾಸಗಿ ಕಂಪನಿ ಕೇಬಲ್ ಹಾಕಲು ಹೋಗಿ ನೀರಿನ ಪೈಪ್‌ಲೈನ್ ಹಾಳು ಮಾಡಿರುವುದನ್ನು ಪುರಸಭೆ ಶೀಘ್ರವೇ ದುರಸ್ತಿ ಮಾಡಿ ಡಾ| ಬಿ.ಆರ್. ಅಂಬೇಡ್ಕರ ನಗರ ಸೇರಿದಂತೆ ಇತರೆ ಭಾಗಗಳಿಗೆ ನೀರು ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಪಟ್ಟಣದಲ್ಲಿ ಖಾಸಗಿ ಮೊಬೈಲ್ ಕಂಪನಿ ಕೇಬಲ್ ಹಾಕಲು ಹೋಗಿ ಪೈಪ್ ಲೈನ್ ಹದಗೆಡಿಸಿದೆ. ಇದರಿಂದ ಜನರಿಗೆ ನೀರಿನ ತೊಂದರೆಯಾಗಿದೆ. ಪುರಸಭೆ ಸಿಬ್ಬಂದಿ ಕೂಡ ಕೇಬಲ್ ಹಾಕಲು ಪರವಾನಗಿ ನೀಡುವಾಗ ಅಕ್ರಮ ಎಸಗಿದ್ದಾರೆ. ತಪ್ಪಿಸ್ಥ ಸಿಬ್ಬಂದಿ ವಿರುದ್ಧ ಕ್ರಮ ತೆಗದುಕೊಳ್ಳಬೇಕು. ಪೈಪ್‌ಲೈನ್ ಹಾಳು ಮಾಡಿರುವ ಖಾಸಗಿ ಕಂಪನಿಯಿಂದ ದಂಡ ವಸೂಲಿ ಮಾಡಲು ಪುರಸಭೆ ಮುಂದಾಗಬೇಕು ಎಂದು ಪುರಸಭೆ ಸದಸ್ಯರಾದ ಶಿವಣ್ಣ ಚಿಕ್ಕಣ್ಣವರ, ಸಂತೋಷ ಹಿರೇಮನಿ, ನಾಗೇಶ ಹುಬ್ಬಳ್ಳಿ, ರಾಜಾಭಕ್ಷಿ ಬೆಟಗೇರಿ ಸೇರಿದಂತೆ ಇತರೇ ಸದಸ್ಯರು ಆಗ್ರಹಿಸಿದ್ದಾರೆ.
ಖಾಸಗಿ ಮೊಬೈಲ್ ಕಂಪನಿ ಕೇಬಲ್ ಹಾಕಲು ಹೋಗಿ ನೀರು ಪೂರೈಸುವ ಪೈಪ್ ಹಾಳು ಮಾಡಿದೆ. ಹಾಳಾಗಿರುವ ಪೈಪ್‌ಲೈನ್ ದುರಸ್ತಿಗಾಗಿ ಹಣ ಭರಿಸಲು ಖಾಸಗಿ ಕಂಪನಿಗೆ ನೋಟಿಸ್ ಕೂಡ ನೀಡಲಾಗಿದೆ. ಹಾಳಾಗಿರುವ ಪೈಪ್‌ಲೈನ್ ಶೀಘ್ರವೇ ದುರಸ್ತಿ ಕಾಮಗಾರಿ ಮಾಡಲು ಪ್ರಾರಂಭಿಸಲಾಗುವುದು.
– ಎಚ್.ಎಸ್. ನಾಯಕ, ಪುರಸಭೆ ಮುಖ್ಯಾಧಿಕಾರಿ
–ಹು.ಬಾ. ವಡ್ಡಟ್ಟಿ