Advertisement

ಬೆಳಗೆದ್ದು ನೀರಿಗಾಗಿ ತಪ್ಪದ ಅಲೆದಾಟ

12:07 PM Apr 05, 2017 | |

ಬೇಸಿಗೆ ಆರಂಭವಾಗಿದೆ. ಜಲಮೂಲಗಳೆಲ್ಲ ಬತ್ತಿ ಹೋಗಿವೆ. ರಾಜಧಾನಿಗೆ ನೀರು ಸರಬರಾಜು ಮಾಡುವ ಕೆಆರ್‌ಎಸ್‌ನಲ್ಲೂ ಸಾಕಷ್ಟು ನೀರಿನ ಸಂಗ್ರಹವಿಲ್ಲ. ಹೀಗಾಗಿ ಈ ಬಾರಿ ನಗರದ ಜನರಿಗೆ ನೀರಿಗೆ ತತ್ವಾರ ಎದುರಾಗುವ ಮುನ್ಸೂಚನೆಗಳು ಅದಾಗಲೇ ಕಾಣಿಸಿವೆ. ನಗರದ ನೀರಿನ ಪೂರೈಕೆ, ಸಮಸ್ಯೆ ಹೇಗಿದೆ. ಎಲ್ಲೆಲ್ಲಿ ಹಾಹಾಕಾರ ಎದುರಾಗಿದೆ ಎಂಬುದರ ಕುರಿತು “ಉದಯವಾಣಿ’ ಇಂದಿನಿಂದ ನೀರಿನ ಅಭಿಯಾನ ಆರಂಭಿಸಿದೆ. ಅದರ ಮೊದಲ ಕಂತಿದು. 

Advertisement

ಬೆಂಗಳೂರು: ಅಲ್ಲಿ ಜನ ಬೆಳಗಾಗುತ್ತಿದ್ದಂತೆ ಸೈಕಲ್‌, ಬೈಕ್‌, ಆಟೋಗಳಿಗೆ ನೀರಿನ ಕ್ಯಾನ್‌, ಬಿಂದಿಗೆಗಳನ್ನು ನೇತುಹಾಕುತ್ತಾರೆ. ಚಿಲ್ಲರೆ ಹಣ ಕಲೆಹಾಕಿಕೊಂಡು, ಅಕ್ಕ-ಪಕ್ಕದವರೊಂದಿಗೆ ಹತ್ತಿರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಹುಡುಕಾಟ ನಡೆಸುತ್ತಾರೆ. ನಂತರ ಘಟಕದ ಕಾಯಿನ್‌ ಬಾಕ್ಸ್‌ನಲ್ಲಿ ನಾಲ್ಕಾರು ರೂಪಾಯಿ ಹಾಕಿ, ನೀರು ಹಿಡಿದುಕೊಂಡು ಮನೆಗೆ ಹಿಂತಿರುಗುತ್ತಾರೆ.ಹಾಗೇನಾದರೂ, ಘಟಕ ಮುಚ್ಚಿದ್ದರೆ ಆ ದಿನಕ್ಕೆ ಕುಡಿಯುವ ನೀರಿಗೆ ಹಾಹಾಕಾರವೇ – ಇದು ಯಾವುದೋ ಕುಗ್ರಾಮದ ಚಿತ್ರಣ ಅಲ್ಲ. ನಗರದ ಕೇಂದ್ರ ಮತ್ತು ಪೂರ್ವಭಾಗದ ಪ್ರದೇಶಗಳ ದುಃಸ್ಥಿತಿ. 

ಡಿ.ಜೆ. ಹಳ್ಳಿ, ಟ್ಯಾನರಿರಸ್ತೆ, ಕೆ.ಜಿ. ಹಳ್ಳಿ, ಮುನೇಶ್ವರ ವಾರ್ಡ್‌ ಸೇರಿದಂತೆ ಹತ್ತಾರು ಪ್ರದೇಶಧಿಗಳಲ್ಲಿ ಬೇಸಿಗೆ ಆರಂಭಧಿವಾಗುತ್ತಿದ್ದಂತೆ ಕುಡಿಯುವ ನೀರಿಗೆ ಹಾಹಾಧಿಕಾರ ಉಂಟಾಗಿದೆ. ಈ ಮಾರ್ಗದಲ್ಲಿ ಬರುವ ಬಹುತೇಕ ಎಲ್ಲ ಬಡಾವಣೆಗಳ ಸ್ಥಿತಿ ದೂರದ ಹಳ್ಳಿಗಳಿಗಿಂತ ಭಿನ್ನವಾಗಿಲ್ಲ. ಹಳ್ಳಿಗಳಲ್ಲಿ ಕೆರೆ ಅಥವಾ ಸರ್ಕಾರಿ ನಲ್ಲಿಗಳನ್ನು ಹುಡುಕಿಕೊಂಡು ಹೋಗುವಂತೆಯೇ ಈ ಬಡಾವಣೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಹುಡುಕಿಕೊಂಡು ಹೋಗುವ ಸ್ಥಿತಿ ಇದೆ. 

ಡಿ.ಜೆ. ಹಳ್ಳಿ, ಮುನೇಶ್ವರ ವಾರ್ಡ್‌, ಕಾವಲ್‌ಬೈರಸಂದ್ರ, ಮುಸ್ಲಿಂ ಕಾಲೊನಿ, ಪೆರಿಯಾರ್‌ನಗರ, ಎ.ಕೆ. ಕಾಲೊನಿಗಳಲ್ಲಿ ನೀರು ಬರುವುದೇ ಅಪರೂಪ. ಬಂದರೂ ಅದು ಕುಡಿಯಲು ಯೋಗ್ಯವಾಗಿರುವುದಿಲ್ಲ. ಹಾಗಾಗಿ ಅಲ್ಲಿನ ನಿವಾಸಿಗಳು ಬೈಕ್‌, ಆಟೋ, ಬೈಸಿಕಲ್‌ಗ‌ಳಲ್ಲಿ ನಿತ್ಯ ಒಂದರಿಂದ ಎರಡು ಕಿ.ಮೀ. ದೂರದಲ್ಲಿರುವ ಕುಡಿಯುವ ನೀರಿನ ಘಟಕಗಳಿಂದ ನೀರು ತುಂಬಿಕೊಂಡು ಬರುತ್ತಾರೆ. ಘಟಕಗಳು ಕೈಕೊಟ್ಟರೆ, ಆ ಭಾಗಗಳಿಗೆ ಕುಡಿಯಲು ನೀರೇ ಇಲ್ಲ!

ಇನ್ನು ಜಲಮಂಡಳಿಯ ನೀರಿನ ಪೂರೈಕೆ ವ್ಯವಸ್ಥೆಯಲ್ಲೂ ತಾರತಮ್ಯ ಇದೆ. ಭಾರತಿನಗರ ಮತ್ತು ಟ್ಯಾನರಿ ರಸ್ತೆಯಲ್ಲಿ ನೀರಿನ ಸರಬರಾಜು ನಿಯಮಿತವಾಗಿದ್ದರೆ,  ಡಿ.ಜೆ. ಹಳ್ಳಿಯ ಒಂದು ಭಾಗದಲ್ಲಿ ವಾರಕ್ಕೊಮ್ಮೆ ನೀರು ಬರುತ್ತದೆ. ಅದಕ್ಕೂ ನಿರ್ದಿಷ್ಟ ಸಮಯ ಇಲ್ಲ. ವೆಂಕಟೇಶಪುರಂನಲ್ಲಿ ಬರುವ ನೀರು ಕಲುಷಿತವಾಗಿದ್ದು, ಕೆಟ್ಟವಾಸನೆಯಿಂದ ಕೂಡಿರುತ್ತದೆ. ಆದರೆ, ಪಕ್ಕದ ಕೆ.ಜಿ. ಹಳ್ಳಿಯಲ್ಲಿ ಎರಡು ದಿನಕ್ಕೊಮ್ಮೆ ಗುಣಮಟ್ಟದ ನೀರು ಸರಬರಾಜು ಆಗುತ್ತಿದೆ.  

Advertisement

ಕುಡಿಯಲು ಸಾಧ್ಯವಾಗದಂಥ ನೀರು: ಪಕ್ಕದಲ್ಲೇ ಇರುವ ಟ್ಯಾನರಿ ರಸ್ತೆಯಲ್ಲಿ ನಿತ್ಯ ನಲ್ಲಿಗಳಲ್ಲಿ ನೀರು ಹರಿಯುತ್ತದೆ. ಆದರೂ ಅಲ್ಲಿನ ನಿವಾಸಿ ಶಾಹುಲ್‌ ಹಾಗೂ ಸ್ನೇಹಿತರು ನಿತ್ಯ ನೀರಿಗಾಗಿ ಮುನೇಶ್ವರ ವಾರ್ಡ್‌ನಲ್ಲಿರುವ ಸಚಿವ ಡಿ.ವಿ. ಸದಾನಂದಗೌಡ ಅವರ ಸಂಸದರ ಅನುದಾನದಲ್ಲಿ ನಿರ್ಮಿಸಿದ ಶುದ್ಧ ನೀರಿನ ಘಟಕಕ್ಕೆ ಬರುತ್ತಾರೆ. ಈ ಬಗ್ಗೆ ಶಾಹುಲ್‌ ಅವರನ್ನು ಮಾತಿಗೆಳೆದಾಗ, “ಖಂಡಿತಾ ಟ್ಯಾನರಿ ರಸ್ತೆಯಲ್ಲಿ ಎರಡು ದಿನಕ್ಕೊಮ್ಮೆ ನಿಯಮಿತವಾಗಿ ನೀರು ಬರುತ್ತದೆ. ಆದರೆ, ಅದು ಕಂದು ಬಣ್ಣದಿಂದ ಕೂಡಿರುತ್ತದೆ. ಕುಡಿಯಲು ಸಾಧ್ಯವೇ ಆಗುವುದಿಲ್ಲ.

ಆದ್ದರಿಂದ ಅರ್ಧ ಕಿ.ಮೀ. ದೂರದಲ್ಲಿರುವ ಕುಡಿಯುವ ನೀರಿನ ಘಟಕಕ್ಕೆ ಬಂದು-ಹೋಗಬೇಕಾಗಿದೆ. ಒಮ್ಮೊಮ್ಮೆ ಇದು ಕೈಕೊಟ್ಟರೆ, ಹದಿನೈದು ದಿನ ಫ‌ಜೀತಿ ಆಗಿಬಿಡುತ್ತದೆ’ ಎಂದು ಹೇಳಿದರು. ಇದೊಂದೇ ಅಲ್ಲ, ಈ ಭಾಗದಲ್ಲಿರುವ ಶಾಸಕರು, ಸಂಸದರ ಅನುದಾನದಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳಿಗೆಲ್ಲಾ ಫ‌ುಲ್‌ ಡಿಮ್ಯಾಂಡ್‌ ಇದೆ. ರಾತ್ರಿವರೆಗೂ ಜನ ಕಾಯಿನ್‌ ಹಾಕಿ, ನೀರು ತುಂಬಿಕೊಂಡು ಹೋಗುತ್ತಾರೆ. ಬೇಸಿಗೆ ಆರಂಭವಾದಾಗಿನಿಂದ ಕಲೆಕ್ಷನ್‌ ಕೂಡ ಜಾಸ್ತಿಯಾಗಿದೆ ಎಂದು ಮುನೇಶ್ವರ ವಾರ್ಡ್‌ನ ಘಟಕದ ಆಪರೇಟರ್‌ ಕುಮಾರ್‌ ಹೇಳುತ್ತಾರೆ. 

ದೂರು ಕೊಟ್ಟರೆ ತಕ್ಷಣವೇ ಪರಿಹಾರ
ಕುಡಿಯಲಿಕ್ಕೆ ಯೋಗ್ಯವಾದ ನೀರನ್ನೇ ಪೂರೈಸಲಾಗುತ್ತಿದೆ. ಬೇಸಿಗೆಯಲ್ಲಿ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಪೂರೈಕೆಯಾಗುವುದರಿಂದ ಪೈಪ್‌ಗ್ಳ ಮಧ್ಯೆ ಹಳೆಯ ನಿರು ಕೆಲವೊಮ್ಮೆ ನಿಂತಿರುತ್ತದೆ. ಅದು ಆರಂಭದಲ್ಲಿ ನಲ್ಲಿಯಲ್ಲಿ ಬಂದಿರಬಹುದು. ಕೊಳಚೆನೀರು ಪೂರೈಕೆ ಸಾಧ್ಯವೇ ಇಲ್ಲ. ನಿರ್ದಿಷ್ಟ ಮನೆಯಲ್ಲಿ ಈ ಸಮಸ್ಯೆ ಇರಬಹುದು. ಅಲ್ಲಿ ಪೈಪ್‌ಲೈನ್‌ ಯಾವ ರೀತಿ ಇದೆ? ಒಳಚರಂಡಿ ಪೈಪ್‌ ಪಕ್ಕದಲ್ಲೇ ಕಾವೇರಿ ನೀರಿನ ಪೈಪ್‌ ಜೋಡಣೆ ಮಾಡಿಕೊಂಡಿದ್ದರೆ, ಪೈಪ್‌ ಲೀಕ್‌ ಆದಾಗ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅದೇನೇ ಇರಲಿ, ಈ ರೀತಿಯ ಸಮಸ್ಯೆಗಳನ್ನು ಮಂಡಳಿ ಗಮನಕ್ಕೆ ತಂದರೆ, ತಕ್ಷಣ ಸರಿಪಡಿಸಲಾಗುವುದು ಎಂದು ಜಲಮಂಡಳಿಯ ಪ್ರಧಾನ ಮುಖ್ಯ ಎಂಜಿನಿಯರ್‌ ಕೆಂಪರಾಮಯ್ಯ ಹೇಳಿದ್ದಾರೆ.

ಬೆಳಗ್ಗೆ, ಸಂಜೆ ಮಾತ್ರ ಘಟಕಗಳಲ್ಲಿ ನೀರು ಲಭ್ಯ 
ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಶಾಸಕರು, ಸಂಸದರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳ ಬೇಡಿಕೆಗೆ ಅನುಗುಣವಾಗಿ ಸ್ಥಾಪಿಸುತ್ತಾರೆ. ಗಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಿಂದ ಗ್ರಾಮೀಣ ನೀರು ಸರಬರಾಜು ಯೋಜನೆ ಅಡಿ, ಬೆಂಗಳೂರು ನಗರ ಜಿಲ್ಲಾಡಳಿತದಿಂದ ನಿರ್ಮಿತಿ ಕೇಂದ್ರ ಹಾಗೂ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ನಿರ್ಮಿಸಲಾಗುತ್ತದೆ. ಶೇ. 90ರಷ್ಟು ಘಟಕಗಳಿಗೆ ಬೋರ್‌ವೆಲ್‌ನಿಂದಲೇ ನೀರು ಪೂರೈಕೆ ಆಗುತ್ತದೆ. ಸಾಮಾನ್ಯವಾಗಿ ಬೆಳಿಗ್ಗೆ ಮತ್ತು ಸಂಜೆ ಇವು ಕಾರ್ಯನಿರ್ವಹಿಸುತ್ತವೆ ಎಂದು ನಗರ ಜಿಲ್ಲಾ ಪಂಚಾಯ್ತಿಯ ಗ್ರಾಮೀಣ ನೀರು ಪೂರೈಕೆ ವಿಭಾಗದ ಕಾರ್ಯನಿರ್ವಹಣಾ ಎಂಜಿನಿಯರ್‌ ಶ್ರೀನಿವಾಸ್‌ ತಿಳಿಸಿದ್ದಾರೆ.  

ವಾರಕ್ಕೊಮ್ಮೆ ನೀರು ಬರುತ್ತದೆ. ಅದೂ ಕೊಳಚೆನೀರು. ಈ ನೀರು ಕೆಟ್ಟವಾಸನೆಯಿಂದ ಕೂಡಿದೆ. ಕಳೆದ ಒಂದು ತಿಂಗಳಿಂದ ಈ ಸಮಸ್ಯೆ ಇದೆ. ಕುಡಿಯಲಿಕ್ಕೆ ಅಲ್ಲ; ಬಳಸಲಿಕ್ಕೂ ಯೋಗ್ಯವಾಗಿಲ್ಲ.
-ಮಂಗಾದೇವಿ, ವೆಂಕಟೇಶ್ವರಪುರಂ ನಿವಾಸಿ.

ನೀರು ಬರುವುದು ನಿಗೂಢ! “ವಾರದಲ್ಲಿ ಒಂದು ದಿನ ನಲ್ಲಿಯಲ್ಲಿ ನೀರು ಬರುತ್ತೆ . ಆದರೆ, ಅದು ಯಾವಾಗ ಮತ್ತು ಎಷ್ಟು ಹೊತ್ತು ಬರುತ್ತದೆ ಎಂಬುದು ನಿಗೂಢ. ಎದುರಿನ ಮನೆಯಲ್ಲಿ ನೀರಿನ ಮೋಟರ್‌ ಶಬ್ದವಾದರೆ, ತಕ್ಷಣ ಎದ್ದು ನಮ್ಮ ಮನೆಯಲ್ಲಿನ ನಲ್ಲಿ ಆನ್‌ ಮಾಡಬೇಕು. ಎದುರಿನ ಮನೆ ದಾಟಿ ನಮ್ಮ ಮನೆಗೆ ಬರುವಷ್ಟರಲ್ಲಿ ನೀರಿನ ದಾರದಂತೆ ಬರುತ್ತಿರುತ್ತದೆ. ಜಲಮಂಡಳಿ ಸಿಬ್ಬಂದಿಗೆ ಎಷ್ಟು ಬಾರಿ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ’ 
-ಶಬಾನಾ, ಡಿ.ಜೆ. ಹಳ್ಳಿಯ ನಿವಾಸಿ 

ಶಾದಾಬ್‌ನಗರದಲ್ಲಿ ಹದಿನೈದು ದಿನ ಕ್ಕೊಮ್ಮೆ ನೀರು ಬರುತ್ತದೆ. ಹದಿನೈದು ದಿನಗಟ್ಟಲೆ ಆ ನೀರನ್ನು ಶೇಖರಿಸಿಡ ಬೇಕು. ಇದಕ್ಕೆ ಸೊಳ್ಳೆ ಮೊಟ್ಟೆ ಇಡುತ್ತವೆ ಎಂದು ಆರೋಗ್ಯ ಇಲಾಖೆಯವರು ಹೊರಚೆಲ್ಲುತ್ತಾರೆ. ಆದ್ದರಿಂದ ಒಂದು ಕಿ.ಮೀ. ದೂರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದಲೇ ಕ್ಯಾನ್‌ಗಳಲ್ಲಿ ತುಂಬಿಕೊಂಡು ಬರುತ್ತೇನೆ. 
-ಮೌಸಿನ್‌, ಕಾವಲ್‌ಬೈರಸಂದ್ರ ನಿವಾಸಿ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next