Advertisement

ಅಲೆಮಾರಿಗಳಿಗೆ ಏಕಲವ್ಯ ನಗರದಲ್ಲಿ “ಮನೆ ಭಾಗ್ಯ’

11:44 AM Jul 16, 2017 | |

ಮೈಸೂರು: ಬದುಕು ಕಟ್ಟಿಕೊಳ್ಳಲು ಊರೂರು ಮೇಲೆ ಅಲೆಯುವ ಅಲೆಮಾರಿಗಳಿಗೆ ನೆಲೆ ಸಿಕ್ಕಿದ್ದು ತಮಗೆ ಖುಷಿ ಕೊಟ್ಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದರು. ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ನಾಗನಹಳ್ಳಿ ಪಂಚಾಯ್ತಿಗೆ ಸೇರಿದ ಶ್ಯಾದನಹಳ್ಳಿ ಸ.ನಂ. 53ರ 8.30 ಎಕರೆ ಪ್ರದೇಶದಲ್ಲಿ ಜೆ-ನರ್ಮ್ ಯೋಜನೆಯಡಿ ನಿರ್ಮಿಸಿರುವ ಏಕಲವ್ಯ ನಗರದಲ್ಲಿ 1040 ಮನೆಗಳನ್ನು ಉದ್ಘಾಟಿಸಿ, ಫ‌ಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

Advertisement

ಹಿಂದೆ ತಾವು ಚಾಮುಂಡೇಶ್ವರಿ ಕ್ಷೇತ್ರದ ಶಾಸಕನಾಗಿದ್ದಾಗಿನಿಂದಲೂ ಈ ಸರ್ಕಾರಿ ಜಾಗದಲ್ಲಿ ಅಲೆಮಾರಿಗಳು ಏಕಲವ್ಯ ನಗರ ಎಂದು ಹೆಸರಿಟ್ಟುಕೊಂಡು ವಾಸಿಸುತ್ತಿದ್ದರು. ಹಕ್ಕಿಪಿಕ್ಕಿ, ದೊಂಬಿದಾಸರು, ಕೊರಮ, ಕೊರಚ, ಸೋಲಿಗರು ಸೇರಿದಂತೆ ಹತ್ತಾರು ಜಾತಿಗಳವರು ಇಲ್ಲಿ ನೆಲೆಸಿದ್ದು, ಅಲೆಮಾರಿಗಳಾದ ಇವರು ಒಂದೇ ಜಾಗದಲ್ಲಿ ನೆಲೆ ನಿಲ್ಲುವುದು ಕಡಿಮೆ ಎಂದರು.

ಸಮುದಾಯ ಭವನ: ವಸತಿಹೀನರಿಗೆ ಜಿ+3 ಮನೆಗಳನ್ನು ಕೇಂದ್ರದ ಯುಪಿಎ ಸರ್ಕಾರ ಮಂಜೂರು ಮಾಡಿತ್ತು. ಕೊಳಚೆ ನಿರ್ಮೂಲನಾ ಮಂಡಳಿಯಿಂದ 48 ಕೋಟಿ ವೆಚ್ಚದಲ್ಲಿ ಹಾಲ್‌, ಬೆಡ್‌ ರೂಂ, ಅಡುಗೆ ಮನೆ, ಸ್ನಾನಗೃಹ, ಶೌಚಾಲಯ ಹೊಂದಿರುವ ಮನೆಯನ್ನು ನಿರ್ಮಿಸಿಕೊಡಲಾಗಿದೆ. ಸಣ್ಣ ಕುಟುಂಬವೊಂದು ವಾಸಿಸಲು ಸಾಕಾಗುತ್ತದೆ ಎಂದ ಅವರು, ಇಲ್ಲಿನ ನಿವಾಸಿಗಳ ಮದುವೆ ಮುಂತಾದ ಶುಭಕಾರ್ಯಗಳಿಗಾಗಿ ಸಮುದಾಯ ಭವನ ನಿರ್ಮಾಣಕ್ಕೆ ಒಂದು ಎಕರೆ ಜಾಗ ಗುರುತಿಸುವಂತೆ ವೇದಿಕೆಯಿಂದಲೇ ಮೈಸೂರು ಜಿಲ್ಲಾಧಿಕಾರಿಗೆ ಸೂಚಿಸಿದರು.

ರಾಜಕಾರಣಿಗಳಿಗೆ ಮತದಾರರೇ ದೇವರು: ಮೂರು ಚುನಾವಣೆಗಳಲ್ಲಿ ತನಗೆ ಈ ಜನ ಮತ ಹಾಕಿದ್ದಾರೆ. ರಾಜಕುಮಾರ್‌ ಅವರು ಅಭಿಮಾನಿಗಳೇ ದೇವರು ಅನ್ನುತ್ತಿದ್ದರು. ರಾಜಕಾರಣಿಗಳಿಗೆ ಮತದಾರರೇ ದೇವರು, ನೀವು ಆಯ್ಕೆ ಮಾಡಿ ಕಳುಹಿಸದೆ ಹೋದರೆ ನಾವುಗಳು ಮನೆಯಲ್ಲಿರಬೇಕಾಗುತ್ತದೆ ಎಂದು ಹೇಳಿದರು. ಸದ್ಯ ಇಲ್ಲೇ ವಾಸಿಸುತ್ತಿರುವ 354 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುತ್ತಿದ್ದು, ಉಳಿದ ಮನೆಗಳನ್ನು ಇಲ್ಲೇ ವಾಸಿಸುತ್ತಿದ್ದು ಮನೆ ಸಿಕ್ಕಿಲ್ಲದವರಿಗೆ ಕೊಡಿಸುವುದಾಗಿ ಹೇಳಿದ ಅವರು, ಈ ಭಾಗದ ಹಳ್ಳಿಗಳಿಗೆ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.

ಬೆಂಗಳೂರ‌ಲ್ಲಿ 6 ಸಾವಿರ ಮನೆ: ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ಆರ್‌.ವಿ.ದೇವರಾಜ್‌ ಮಾತನಾಡಿ, ಮಂಡಳಿವತಿಯಿಂದ ಬೆಂಗಳೂರಿನಲ್ಲಿ 6 ಸಾವಿರ ಮನೆ ನಿರ್ಮಿಸಲಾಗುತ್ತಿದ್ದು, ಇನ್ನೆರಡು ತಿಂಗಳಲ್ಲಿ ಉದ್ಘಾಟಿಸುವುದಾಗಿ ಹೇಳಿದರು. ಕೊಳಚೆ ಪ್ರದೇಶದ ಹಳೇ ಬಡಾವಣೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಎಸ್‌ಇಪಿ-ಟಿಎಸ್‌ಪಿಯಡಿ 500 ಕೋಟಿ ಹೆಚ್ಚುವರಿ ಅನುದಾನವನ್ನು ಮುಖ್ಯಮಂತ್ರಿಯವರಿಗೆ ಕೋರಿದ್ದೇನೆ ಎಂದರು.

Advertisement

ಅಧ್ಯಕ್ಷತೆವಹಿಸಿದ್ದ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, 2008ರಲ್ಲಿ ಸಿದ್ದರಾಮಯ್ಯ ಈ ಕ್ಷೇತ್ರದ ಶಾಸಕರಾಗಿದ್ದಾಗ ಕೇಂದ್ರದ ಯುಪಿಎ ಸರ್ಕಾರ, ರಾಜ್ಯದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಏಕಲವ್ಯ ನಗರದಲ್ಲಿ ಜೆ-ನರ್ಮ್ ಮನೆಗಳ ನಿರ್ಮಾಣಕ್ಕೆ ವಿಸ್ತತ ಯೋಜನಾ ವರದಿ ಸಿದ್ಧಪಡಿಸಲಾಯಿತು. 2010ರಲ್ಲಿ ಕಾರ್ಯಾದೇಶ ನೀಡಿ ಕಾಮಗಾರಿ ಪೂರ್ಣಗೊಂಡು ನಾಲ್ಕು ವರ್ಷಗಳೇ ಕಳೆದರೂ ಫ‌ಲಾನುಭವಿಗಳಿಗೆ ಹಕ್ಕುಪತ್ರ ನೀಡಿರಲಿಲ್ಲ ಎಂದರು.

ಕೊಳಚೆ ನಿರ್ಮೂಲನಾ ಮಂಡಳಿಗಳನ್ನು ಕೊಡುವಾಗ ಎಲ್ಲಿ ವಾಸವಿದ್ದಾರೋ ಅಲ್ಲೇ ಅವರಿಗೆ ಮನೆ ಕೊಡಿ, ಎರಡೆರಡು ಕಡೆಗಳಲ್ಲೂ ಮನೆಪಡೆಯುತ್ತಿದ್ದಾರೆ, ಇದನ್ನು ತಪ್ಪಿಸಿ ಎಂದರು. ಕೊಳಚೆ ನಿರ್ಮೂಲನಾ ಮಂಡಳಿ ನಿರ್ಮಿಸಿದ ಮನೆಗಳನ್ನು ಯಾರೂ ನಿರ್ವಹಣೆ ಮಾಡುತ್ತಿಲ್ಲ, ಹೀಗಾಗಿ ಆ ಮನೆಗಳೆಲ್ಲ ಗಬ್ಬೆದ್ದು ನಾರುತ್ತಿದ್ದು, ವಾಸಮಾಡಲಾಗದ ಪರಿಸ್ಥಿತಿ ಇದೆ. ಇದನ್ನು ಸರಿಪಡಿಸಿಕೊಡಿ, ಜತೆಗೆ ಈ ಭಾಗಕ್ಕೆ ಕಾವೇರಿ ನೀರು ಒದಗಿಸಿಕೊಡುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಮನವಿ ಮಾಡಿದರು.

ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ವಸತಿ ಸಚಿವ ಎಂ.ಕೃಷ್ಣಪ್ಪ, ಮಾಜಿ ಶಾಸಕ ಸತ್ಯನಾರಾಯಣ, ಡಾ.ಯತೀಂದ್ರ ಸಿದ್ದರಾಮಯ್ಯ, ನಾಗನಹಳ್ಳಿ ಗ್ರಾಪಂ ಅಧ್ಯಕ್ಷೆ ಚೈತ್ರಾ, ಜಿಪಂ ಸದಸ್ಯ ದಿನೇಶ್‌ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next