ಹೊಸದಿಲ್ಲಿ: ಭಾರತ ಮಹಿಳಾ ಹಾಕಿ ತಂಡದ ಕೋಚ್, ಹಾಲೆಂಡ್‌ನ ವಾಲ್ತೆರಸ್ ಮರಿನ್ ಅವರು ಭಾರತ ಪುರುಷರ ಹಾಕಿ ತಂಡದ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಹಾಕಿ ವಲಯದಲ್ಲಿ ಆಘಾತಕಾರಿ ಎನಿಸಿರುವ ಈ ಸುದ್ದಿಯನ್ನು ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಪ್ರಕಟಿಸಿದ್ದಾರೆ. ಇತ್ತೀಚೆಗಷ್ಟೇ ಭಾರತ ಪುರುಷರ ತಂಡದ ಕೋಚ್ ಆಗಿದ್ದ ರೋಲೆಂಟ್ ಓಲ್ಟ್ಮನ್ಸ್ ಅವರನ್ನು ಕಳೆದ ಶನಿವಾರ ಈ ಸ್ಥಾನದಿಂದ ಕೆಳಗಿಳಿಸಲಾಗಿತ್ತು.
ಇದುವರೆಗೆ ಪುರುಷರ ಹಿರಿಯರ ತಂಡದ ಕೋಚ್ ಆಗಿ ಯಾವುದೇ ಅನುಭವ ಹೊಂದಿಲ್ಲದ ವಾಲ್ತೆರಸ್ ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿದ್ದೇಕೆ ಎನ್ನುವುದು ಪ್ರಶ್ನಾರ್ಥಕವಾಗಿದೆ. ಇದು ಹಿಮ್ಮುಖ ಹೆಜ್ಜೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಹಾಕಿ ಇಂಡಿಯಾ ಮತ್ತು ಕೇಂದ್ರ ಕ್ರೀಡಾ ಸಚಿವಾಲಯ ಚರ್ಚೆ ನಡೆಸಿಯೇ ಈ ನಿರ್ಧಾರಕ್ಕೆ ಬಂದಿವೆ ಎಂದು ರಾಥೋಡ್ ತಿಳಿಸಿದ್ದಾರೆ.
ಮಾಹಿತಿಗಳ ಪ್ರಕಾರ ವಾಲ್ತೆರಸ್‌ಗೆ ಈ ಹುದ್ದೆ ವಹಿಸಿಕೊಳ್ಳಲು ಆಸಕ್ತಿ ಇರಲಿಲ್ಲವಂತೆ. ಹಾಕಿ ಇಂಡಿಯಾ ಮತ್ತು ಕ್ರೀಡಾ ಸಚಿವಾಲಯದ ಅಧಿಕಾರಿಗಳು ಅವರಿಗೆ ಮನವರಿಕೆ ಮಾಡಿಕೊಟ್ಟ ಆನಂತರ ಹುದ್ದೆ ವಹಿಸಿಕೊಳ್ಳಲು ಮುಂದಾಗಿದ್ದಾರೆ. ಮತ್ತೂಂದು ಕಡೆ ಪುರುಷರ ತಂಡದ ಜವಾಬ್ದಾರಿಗಾಗಿ ಕಾಯುತ್ತಿದ್ದ ಕಿರಿಯರ ಕೋಚ್ ಹರೇಂದ್ರ ಸಿಂಗ್ ಅವರನ್ನು ಮಹಿಳಾ ತಂಡದ ಉನ್ನತ ಪ್ರದರ್ಶನ ವಿಶೇಷ ಕೋಚ್ ಆಗಿ ನೇಮಿಸಲಾಗಿದೆ. ಈ ಎರಡೂ ಬೆಳವಣಿಗೆಗಳೂ ಸದ್ಯದ ಮಟ್ಟಿಗೆ ಗೊಂದಲ ಮೂಡಿಸಿವೆ.
ಭಾರತ ಕಿರಿಯರ ತಂಡದ ಕೋಚ್ ಆಗಿ ಹರೇಂದ್ರ ಸಿಂಗ್ ಉತ್ತಮ ಕಾರ್ಯ ಮಾಡಿದ್ದಾರೆ. ಅವರ ನೇತೃತ್ವದಲ್ಲಿ ಭಾರತ ವಿಶ್ವಕಪ್ ಕೂಡ ಗೆದ್ದಿದೆ. 2020ರ ಒಲಿಂಪಿಕ್ಸ್ ವೇಳೆಗೆ ಈ ಹುಡುಗರೇ ಮುಖ್ಯವಾಹಿನಿಗೆ ಬರುವುದು ಖಚಿತವಾಗಿರುವುದರಿಂದ, ಜೊತೆಗೆ ಬಹುತೇಕ ಆಟಗಾರರ ಜೊತೆ ಅವರು ಉತ್ತಮ ಬಾಂಧವ್ಯ ಹೊಂದಿರುವುದರಿಂದ ಅವರನ್ನೇ ಕೋಚ್ ಮಾಡಿದ್ದರೆ ಉತ್ತಮ ನಿರ್ಧಾರ ಎನಿಸಿಕೊಳ್ಳುತ್ತಿತ್ತು ಎನ್ನಲಾಗಿದೆ.
ವಾಲ್ತೆರಸ್ ಯಾರು? ಹಿನ್ನೆಲೆಯೇನು?
ಹಾಲೆಂಡ್‌ನ ಮಾಜಿ ಹಾಕಿ ಆಟಗಾರ 43 ವರ್ಷದ ವಾಲ್ತೆರಸ್ ನಾರ್ಬಟಸ್ ಮರಿಯಾ ಮರಿನ್ ಭಾರತ ಮಹಿಳಾ ತಂಡದ ಕೋಚ್ ಆಗಿ ಆಯ್ಕೆಯಾಗಿ ಇನ್ನೂ 6 ತಿಂಗಳಾಗಿದೆಯಷ್ಟೇ. ಅದಕ್ಕೂ ಮುನ್ನ ಯಾವುದೇ ಪುರುಷರ ಹಿರಿಯರ ತಂಡಕ್ಕೆ ಕೋಚ್ ಆಗಿ ಅನುಭವ ಹೊಂದಿಲ್ಲ. ಆದರೆ ಕೋಚ್ ಆಗಿ ಅವರ ಸಾಧನೆ ಉತ್ತಮವಾಗಿಯೇ ಇದೆ. 21 ವರ್ಷ ವಯೋಮಿತಿಯೊಳಗಿನ ಹಾಲೆಂಡ್‌ನ ಮಹಿಳಾ ತಂಡವನ್ನು ವಿಶ್ವ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಹಿರಿಯರ ಮಹಿಳಾ ತಂಡ ವಿಶ್ವ ಹಾಕಿ ಲೀಗ್ ಕಿರೀಟ ಗೆಲ್ಲಲು ಕಾರಣವಾಗಿದ್ದಾರೆ. ಸದ್ಯದ ಭಾರತ ಪುರುಷರ ತಂಡದ ಕೋಚ್ ಆಗಿ ಅವರ ಕಾರ್ಯಾವಧಿ ಸೆ. 20ಕ್ಕೆ ಆರಂಭವಾಗಲಿದೆ. ಅಲ್ಲಿಯವರೆಗೆ ಅವರು ಮಹಿಳಾ ತಂಡದೊಂದಿಗೆ ಯೂರೋಪ್ ಪ್ರವಾಸದಲ್ಲಿರಲಿದ್ದಾರೆ.