ಹೊಸದಿಲ್ಲಿ : ವಿಶ್ವದ ಅತೀ ದೊಡ್ಡ ಚಿಲ್ಲರೆ ಮಾರಾಟಗಾರ ಸಂಸ್ಥೆಯಾಗಿರುವ ವಾಲ್‌ಮಾರ್ಟ್ ಇಂಕ್ ಇಂದು ಬುಧವಾರ ತಾನು ಫ್ಲಿಪ್ ಕಾರ್ಟ್ ಸಂಸ್ಥೆಯನ್ನು 16 ಶತಕೋಟಿ ಡಾಲರ್‌ಗೆ ಖರೀದಿಸಿರುವುದಾಗಿ ಮತ್ತು ಆ ಮೂಲಕ ಅದರ ಆಡಳಿತ ನಿಯಂತ್ರಣವನ್ನು ಪಡೆದಿರುವುದಾಗಿ ಅಧಿಕೃತವಾಗಿ ಘೋಷಿಸಿದೆ.
11 ವರ್ಷಗಳ ಹಿಂದೆ ಸಚಿನ್ ಬನ್ಸಾಲ್ ಅವರು ಬಿನ್ನಿ ಬನ್ಸಾಲ್ ಜತೆಗೂಡಿ ಸಹ ಸ್ಥಾಪಕರಾಗಿ ಆರಂಭಿಸಿದ್ದ ಫ್ಲಿಪ್ ಕಾರ್ಟ್ ನಲ್ಲಿನ ತನ್ನ ಶೇ.5ಕ್ಕೂ ಮೀರಿದ ಪೂರ್ಣ ಪಾಲನ್ನು ವಾಲ್ ಮಾರ್ಟ್‌ಗೆ ಮಾರುವ ಮೂಲಕ ತಮ್ಮ ಕಂಪೆನಿಯ ಒಡೆತನವನ್ನು ಕಳೆದುಕೊಂಡಿದ್ದಾರೆ.
16 ಬಿಲಿಯ ಡಾಲರ್ ತೆತ್ತು ಖರೀದಿಸಿರುವ ಫ್ಲಿಪ್ ಕಾರ್ಟ್ ಸಂಸ್ಥೆಯಲ್ಲೀಗ ವಾಲ್ ಮಾರ್ಟ್ ಒಡೆತನದ ಪಾಲು ಶೇ.77 ಇದೆ. ಫ್ಲಿಪ್ ಕಾರ್ಟ್ ಮಾರುಕಟ್ಟೆ ಮೌಲ್ಯ 20 ಬಿಲಿಯ ಡಾಲರ್ ಇದೆ.
ವಾಲ್ ಮಾರ್ಟ್ ಪಾಲನ್ನು ಕಳೆದು ಉಳಿದಿರುವ ಫ್ಲಿಪ್ ಕಾರ್ಟ್ ಪಾಲನ್ನು ಕಂಪೆನಿಯ ಈಗಿನ ಶೇರುದಾರರು, ಫ್ಲಿಪ್ ಕಾರ್ಟ್ ಸಹ ಸ್ಥಾಪಕ ಬಿನ್ನಿ ಬನ್ಸಾಲ್, ಚೀನದ ಟೆನ್ ಸೆಂಟ್ ಹೋಲ್ಡಿಂಗ್‌ಸ್ ಲಿಮಿಟೆಡ್, ಟೈಗರ್ ಗ್ಲೋಬಲ್ ಮ್ಯಾನೇಜ್‌ಮೆಂಟ್ ಎಲ್‌ಎಲ್‌ಸಿ ಮತ್ತು ಮೈಕ್ರೋಸಾಫ್ಟ್ ಕಾರ್ಪೊರೇಶನ್ ಹೊಂದಿರುತ್ತವೆ.
ಕಳೆದ ವರ್ಷ ಫ್ಲಿಪ್ ಕಾರ್ಟ್ ಮಾರುಕಟ್ಟೆ ಮೌಲ್ಯ 12 ಬಿಲಿಯ ಡಾಲರ್ ಇದ್ದುದಾಗಿ ಸಿಬಿ ಇನ್‌ಸೈಟ್ ರಿಸರ್ಚರ್ ಅಂದಾಜಿಸಿತ್ತು. ಫ್ಲಿಪ್ ಕಾರ್ಟ್ ಗೆ ಈಗಿನ್ನು ಪರ್ಯಾಪ್ತ ಹೆಚ್ಚುವರಿ ಬಂಡವಾಳ ಒದಗಿರುವ ಕಾರಣ ಅದು ತನ್ನ ಪ್ರಬಲ ಎದುರಾಳಿ ಅಮೆಜಾನ್ ವಿರುದ್ಧ ಕತ್ತುಕತ್ತಿನ ಹೋರಾಟವನ್ನು ನೀಡಲಿದೆ.