Advertisement

ಪುತ್ತೂರು: ಆವರಣ ಗೋಡೆ ಕುಸಿದು ಮಹಿಳೆ ಸಾವು

01:49 AM Jul 08, 2020 | Hari Prasad |

ಪುತ್ತೂರು: ಮನೆ ಹಿಂಭಾಗದಲ್ಲಿ ಕುಳಿತು ಬೀಡಿ ಕಟ್ಟುತ್ತಿದ್ದ ಮಹಿಳೆ ಮೇಲೆ ಪಕ್ಕದ ಮನೆಯ ಆವರಣ ಗೋಡೆ ಕುಸಿದು ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಪುತ್ತೂರು ನಗರದ ಪರ್ಲಡ್ಕ ಗೋಳಿಕಟ್ಟೆಯಲ್ಲಿ ಜು. 7ರಂದು ಸಂಭವಿಸಿದೆ.

Advertisement

ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ಘಟಕದಲ್ಲಿ ಸಾರಿಗೆ ನಿಯಂತ್ರಣಾಧಿಕಾರಿಯಾಗಿರುವ ಚಂದ್ರಶೇಖರ್‌ ಅವರ ಪತ್ನಿ ವಸಂತಿ ಯಾನೆ ಶೋಭಾ (49) ಮೃತಪಟ್ಟವರು. ಮೃತರು ಪತಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.

ಹಣ್ಣಿನ ವ್ಯಾಪಾರಿ ಫಾರೂಕ್‌ ಅವರ ಮನೆ ಆವರಣ ಗೋಡೆ ಕುಸಿದು ಈ ಘಟನೆ ಸಂಭವಿಸಿದೆ.

ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಮಣ್ಣು ಮೃದುಗೊಂಡ ಕಾರಣ ಗೋಡೆ ಕುಸಿದಿರಬಹುದೆಂದು ಭಾವಿಸಲಾಗಿದೆ. ಆವರಣ ಗೋಡೆಗೆ ಬೆನ್ನು ಹಾಕಿ ಕುಳಿತಿದ್ದ ಶೋಭಾ ಅವರ ಮೇಲೆ ಕಲ್ಲು, ಮಣ್ಣು ಒಮ್ಮೆಲೆ ಬಿದ್ದಿದೆ. ಅದರಡಿಯಲ್ಲಿ ಸಿಲುಕಿದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವೇಳೆ ಅವರ ಪತಿ ಮತ್ತು ಪುತ್ರ ಮನೆಯಲ್ಲಿದ್ದರು.

ಮನೆ ಮಂದಿ ಸ್ಥಳಾಂತರ
ಅಗ್ನಿಶಾಮಕ ಹಾಗೂ ಸ್ಥಳೀಯರ ಸಹಕಾರದಿಂದ ಕಾರ್ಯಾಚರಣೆ ನಡೆಸಿ ಮೃತದೇಹ ಹೊರ ತೆಗೆಯಲಾಯಿತು. ಕುಸಿತದ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಫಾರೂಕ್‌ ಅವರ ಮನೆಮಂದಿಯನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ. ಆಸುಪಾಸಿನ ಮನೆಮಂದಿಗೂ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

Advertisement

ಸಂಸದ, ಶಾಸಕರ ಭೇಟಿ
ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌, ನಗರಸಭಾ ಸದಸ್ಯೆ ದೀ ಪೈ, ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಡಿವೈಎಸ್‌ಪಿ ದಿನಕರ್‌ ಶೆಟ್ಟಿ, ಸಂಪ್ಯ ಠಾಣಾ ಎಸ್‌ಐ ಚೆಲುವಯ್ಯ, ನಗರ ಠಾಣಾ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದರು.

ಸಚಿವರಿಂದ 5 ಲಕ್ಷ ರೂ. ಪರಿಹಾರ ಘೋಷಣೆ
ಮೃತ ಮಹಿಳೆಯ ಮನೆಗೆ ಮತ್ತು ಮೃತ ದೇಹವಿದ್ದ ಸರಕಾರಿ ಆಸ್ಪತ್ರೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿದರು. ಮನೆಮಂದಿಗೆ ಸಾಂತ್ವನ ಹೇಳಿದ ಅವರು ಸರಕಾರದ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಭರವಸೆಯಿತ್ತರು.

ಮರುಕಳಿಸಿದ ಘಟನೆ
2018 ಜು. 6ರಂದು ಪುತ್ತೂರು ಪೇಟೆಯ ಸಮೀಪದಲ್ಲಿ ರೈಲ್ವೇ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಸಾಲ್ಮರ ಹೆಬ್ಟಾರಬೈಲಿನಲ್ಲಿ ಮನೆಯೊಂದರ ಬೃಹತ್‌ ಆವರಣ ಗೋಡೆ ಪಕ್ಕದ ಇನ್ನೊಂದು ಮನೆಯ ಮೇಲೆ ಕುಸಿದು ಬಿದ್ದು ತಡರಾತ್ರಿ ನಿದ್ದೆಯಲ್ಲಿದ್ದ ಅಜ್ಜಿ (ಪಾರ್ವತಿ), ಮೊಮ್ಮಗ (ಧನುಶ್‌) ಮೃತಪಟ್ಟಿದ್ದರು. ಇದೇ ಮಾದರಿಯಲ್ಲಿ ಈ ಘಟನೆ ಸಂಭವಿಸಿದೆ. ಈ ಎರಡೂ ಘಟನೆಗಳು ಎರಡು ವರ್ಷಗಳ ಅಂತರದಲ್ಲಿ ಒಂದೇ ತಿಂಗಳಲ್ಲಿ ಒಂದು ದಿನದ ಅಂತರದಲ್ಲಿ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next