ಬಂಗಾರಪೇಟೆ: ಸಾರ್ವಜನಿಕರು ಬಹಳ ವರ್ಷ ಗಳಿಂದ ನಿರೀಕ್ಷಿಸುತ್ತಿರುವ ವಾಯುವಿಹಾರ ಪಥ ನಿರ್ಮಾಣ ಕಾಮಗಾರಿ ಹತ್ತು ವರ್ಷಗಳಿಂದ ತೆವಳುತ್ತಾ ಸಾಗುತ್ತಿದ್ದರೂ, ಪುರಸಭೆ ಕಣ್ಣಿದ್ದೂ ಕುರುಡಂತೆ ವರ್ತಿಸುತ್ತಿರುವುದರಿಂದ ಯೋಜನೆ ಹಳ್ಳ ಹಿಡಿದಿದೆ.
ಪಟ್ಟಣದ ಜನಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಜನಸಂಖ್ಯೆಗೆ ಅಣುಗುಣವಾಗಿ ವಾಯುವಿಹಾರಕ್ಕೆ ಹೋಗಲು ಸ್ಥಳಾವಕಾಶ ಕೊರತೆಯಿಂದ ಜನರು ಪರದಾಡುವಂತಾಗಿದೆ. ಉದ್ಯಾನವನಗಳೂ ಸಹ ಇಲ್ಲದೆ ಸಂಜೆ ಮಕ್ಕಳನ್ನು ಆಟವಾಡಿಸಲು ಉದ್ಯಾನವನವಿಲ್ಲದೆ ಪರಿತಪಿಸು ತ್ತಿದ್ದಾರೆ. ಇದ್ದ ಏಕೈಕ ಪಟ್ಟಾಭಿಶೇಕೋದ್ಯನವನವನ್ನು ನವೀಕರಿಸಿ ಸಾರ್ವಜನಿಕರ ಉಪಯೋಗಕ್ಕೆ ಬಿಡಲಾಗಿದೆ. ಆದರೆ, ಅದು ತುಂಬಾ ಚಿಕ್ಕದಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬಂದರೆ ಮತ್ತೆ ಪರದಾಟ ತಪ್ಪಿದ್ದಲ್ಲ.
ವಾಯು ವಿಹಾರಿಗಳಿಗಿಲ್ಲ ಸೂಕ್ತ ಸ್ಥಳ: ಪಟ್ಟಣದ ಹೊರವಲಯದ ರೈಲ್ವೆಗೇಟ್ ಬಳಿ ಇಂದಿರಾ ಟ್ರೀ ಪಾರ್ಕ್ ನಿರ್ಮಾಣವಾಗಿದೆ.ಅಲ್ಲಿ ಎಲ್ಲಾ ವ್ಯವಸ್ಥೆ ಇದ್ದರೂ 3ಕಿ.ಮೀ ಕ್ರಮಿಸಿ ಮಕ್ಕಳು ಆಟವಾಡಲು ಹೋಗಲು ತೊಂದರೆಯಾಗಿದೆ. ಮುಂಜಾನೆ ಮತ್ತು ಸಂಜೆ ವೇಳೆ ಜನರಿಗೆ ವಾಯುವಿಹಾರ ಮಾಡಲು ಸ್ಥಳವಿಲ್ಲದೆ ರಸ್ತೆಗಳಲ್ಲೆ ಇಲ್ಲ. ದೂರದ ಪ್ರದೇಶಕ್ಕೆ ಹೋಗಿ ಮಾಡುವಂತಾಗಿದೆ. ಇದನ್ನು ಗಮನಿಸಿದ ಪುರಸಭೆ ಪಟ್ಟಣದ ದೊಡ್ಡಕೆರೆ ಸುತ್ತಲೂ ಪೆನ್ಷಿಂಗ್ ಅಳವಡಿಸಿ ಅಲ್ಲಿ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಮಾಡಲು ಯೋಜನೆ ರೂಪಿಸಿ 10ವರ್ಷಗಳೇ ಕಳೆದಿದೆ. ಆದರೆ ಯಾಕೋ ಏನೋ ಯೋಜನೆ ಪೂರ್ಣಗೊಂಡು ಜನರ ಬಳಕೆಗೆ ಮಾತ್ರ ಅವಕಾಶ ದೊರೆಯದೆ ಯೋಜನೆಗೆ ಗ್ರಹಣ ಹಿಡಿದಂತಾಗಿದೆ.
ಯೋಜನೆಯಿಂದ ಒತ್ತುವರಿ ತಡೆ: 15ವರ್ಷಗಳ ಹಿಂದೆಯೇ ದೊಡ್ಡಕೆರೆ ಸುತ್ತಲೂ ವಾಕಿಂಗ್ ಟ್ರ್ಯಾಕ್ ನಿರ್ಮಾಣಕ್ಕೆ ಜೀವ ಬಂದಿತ್ತು. ಆದರೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ಹಳ್ಳ ಹಿಡಿದಿತ್ತು. ಶಾಸಕ ಎಸ್.ಎನ್.ನಾರಾಯಣಸ್ವಾಮಿ ಬಂದ ನಂತರ ಯೋಜನೆಗೆ ಮರುಜೀವ ನೀಡಿದರು. 3 ಕೋಟಿ ವೆಚ್ಚದಲ್ಲಿ ಕೆರೆ ಸುತ್ತಲೂ ವಾಕಿಂಗ್ ಟ್ರ್ಯಾಕ್ ನಿರ್ಮಾಣಕ್ಕೆ ಚಾಲನೆ ನೀಡಿದರು. ಅರ್ಧದಷ್ಟು ಕಾಮಗಾರಿ ಪೂರ್ಣಗೊಂಡಿದೆ. ದೊಡ್ಡಕೆರೆ ಸುತ್ತಲೂ 3ಕಿ.ಮೀ ಉದ್ದದ ಟ್ರ್ಯಾಕ್ ತಲೆಎತ್ತಿದೆ. ಈ ಯೋಜನೆಯಿಂದ ಕೆರೆಯ ಒತ್ತುವರಿಯನ್ನು ತಡೆದಂತಾಗಿದೆ. ಕೆರೆಗೆ ಹೊಸ ಕಳೆ ಸಹ ಬಂದಂತಾಗಿದೆ.
ಯೋಜನೆ ಪೂರ್ಣಕ್ಕೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ: ಟ್ರ್ಯಾಕ್ ಸುತ್ತಲೂ ಕಣ್ಣಿಗೆ ಮುದ ನೀಡುವ ವಿವಿಧ ಬಣ್ಣಗಳ ಅಲಂಕೃತ ಹೂ ಗಿಡಗಳನ್ನು ಹಾಗೂ ವಿಶ್ರಾಂತಿ ಪಡೆಯಲು ಕುರ್ಚಿ ಅಳವಡಿಸಿದರೆ ಯೋಜನೆ ಪೂರ್ಣವಾಗುತ್ತದೆ. ಆದರೆ, ಪುರಸಭೆ ಯೋಜನೆಯನ್ನು ಪೂರ್ಣಗೊಳಿಸಲು ಆಸಕ್ತಿ ತೋರುತ್ತಿಲ್ಲ. ಇದರಿಂದ ಈಗಾಗಲೇ ವೆಚ್ಚ ಮಾಡಿರುವ ಹಣ ಕೆರೆಯಲ್ಲಿ ಹೋಮ ಮಾಡಿದಂತಾಗಿದೆ. ಇದಲ್ಲದೆ ಕೆಸಿ ವ್ಯಾಲಿ ನೀರನು °ಕೆರೆಗೆ ತುಂಬಿಸಿ ದೋಣಿ ವಿಹಾರ ವ್ಯವಸ್ಥೆ ಸಹ ಕಲ್ಪಿಸಿ ಮಕ್ಕಳನ್ನು ಆಕರ್ಷಿಸಲು ಯೋಜನೆ ರೂಪಿಸಲಾಗಿತ್ತು. ಅಂದುಕೊಂಡಂತೆ ಯಾವುದೂ ನಡೆದಿಲ್ಲ, ಕೆರೆ ಸುತ್ತಲೂ ಅಳವಡಿಸಿರುವ ಪೆನ್ಷಿಂಗ್ ಸಹ ನಿರ್ವಹಣೆ ಇಲ್ಲದೆ ಅವ್ಯವಸ್ಥೆಯಲ್ಲಿದೆ. ಶಾಸಕ ಎಸ್.ಎನ್ .ನಾರಾಯಣಸ್ವಾಮಿ ಆಸಕ್ತಿವಹಿಸಿ ನನೆಗುದಿಗೆ ಬಿದ್ದಿರುವ ವಾಕಿಂಗ್ ಟ್ರ್ಯಾಕ್ ಗೆ ಮರುಜೀವ ನೀಡುವರೆ ಎಂದು ಸಾರ್ವಜನಿಕರು ಕಾಯುವಂತಾಗಿದೆ.
ಪಟ್ಟಣದ ಪುರಸಭೆ ವ್ಯಾಪ್ತಿಗೆ ಬರುವ ದೊಡ್ಡಕೆರೆ ವಾಕಿಂಗ್ ಟ್ರ್ಯಾಕ್‌ನಲ್ಲಿ ಸ್ವಚ್ಛತೆ ಇಲ್ಲದೇ ಇರುವುದರಿಂದ ಜನರು ಓಡಾಡಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಕ್ರಮಕೈಗೊಳ್ಳಲಾಗುವುದು. ಪುರಸಭೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರ ಸ್ಥಾನಗಳು ಖಾಲಿ ಇರುವುದರಿಂದ ಸರ್ಕಾರವು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿಗೊಳಿಸಿ ಚುನಾವಣೆ ನಡೆದ ನಂತರ ಶಾಸಕರ, ನೂತನ ಅಧ್ಯಕ್ಷರ ಗಮನಕ್ಕೆ ತಂದು ಯೋಜನೆ ಪೂರ್ಣಕ್ಕೆ ಕ್ರಮಕೈಗೊಳ್ಳತ್ತೇವೆ.
-ಜಿ.ಎನ್.ಚಲಪತಿ, ಮುಖ್ಯಾಧಿಕಾರಿ,ಪುರಸಭೆ.
-ಎಂ.ಸಿ.ಮಂಜುನಾಥ್