Advertisement

19 ವರ್ಷಗಳಿಂದ ಶಬರಿಮಲೆಗೆ ಕಾಲ್ನಡಿಗೆ ಯಾತ್ರೆ

03:17 PM Dec 27, 2017 | |

ಸುಳ್ಯ: ಅಯ್ಯಪ್ಪ ಭಕ್ತರ ತಂಡವೊಂದು ನಿರಂತರ 19 ವರ್ಷಗಳಿಂದ 580 ಕಿ.ಮೀ. ದೂರದ ಕಾಲ್ನಡಿಗೆ ಯಾತ್ರೆ ಮೂಲಕವೇ ಸ್ವಾಮಿಯ ದರ್ಶನಕ್ಕೆ ತೆರಳುತ್ತಿದೆ.

Advertisement

ನಗರದ ಸತೀಶ್‌ ಗುರುಸ್ವಾಮಿ ನೇತೃತ್ವದ ತಂಡ ಪ್ರತೀ ಬಾರಿ ಕಾಲ್ನಡಿಗೆ ಮೂಲಕವೇ ಹೊರಡುತ್ತಿದ್ದು, ಈ ಬಾರಿಯೂ ಇರುಮುಡಿ ಕಟ್ಟಳೆ ನಡೆಸಿ ಪಾದಾಯಾತ್ರೆ ಆರಂಭಿಸಿದೆ. ಮೊದ ಮೊದಲು 13 ದಿನಗಳಲ್ಲಿ ಶಬರಿಮಲೆಯನ್ನು ತಲುಪುತ್ತಿದ್ದ ತಂಡ ಈಗ ಹೊಸ ಸದಸ್ಯರ ಸೇರ್ಪಡೆಯಿಂದಾಗಿ ಹೆಚ್ಚು ವಿಶ್ರಾಂತಿ ಬಯಸುತ್ತಿದ್ದು, 18 ದಿನಗಳಲ್ಲಿ ಸನ್ನಿಧಾನ ತಲುಪುತ್ತಿದೆ.

ದಿನಕ್ಕೆ 40 ಕಿ.ಮೀ. ನಡಿಗೆ
ಪ್ರತೀ ದಿನ 35ರಿಂದ 40 ಕಿಮೀ ಪಾದ ಯಾತ್ರೆ ಹಮ್ಮಿಕೊಂಡು ನಿರಂತರ 18 ದಿನಗಳ ಕಾಲ ನಡೆದು ಈ ಭಕ್ತರು ಕ್ಷೇತ್ರವನ್ನು ತಲುಪುತ್ತಾರೆ. ತಂಪು ಹೊತ್ತಿನಲ್ಲಿ, ಬೆಳಗ್ಗೆ ಹಾಗೂ ಸಂಜೆ ವೇಳೆ ನಡೆದು ತಮ್ಮ ಗಮ್ಯ ಸೇರುತ್ತಾರೆ. ಬಿಸಿಲಿನ ಹೊತ್ತಿನಲ್ಲಿ ವಿಶ್ರಾಂತಿ ಪಡೆಯುತ್ತಾರೆ. ದಿನಸಿ, ಪಾತ್ರೆಗಳನ್ನು ಕೊಂಡೊಯ್ದು, ಅಡುಗೆ ಮಾಡಿಕೊಳ್ಳುತ್ತಾರೆ. ಯಾತ್ರೆ ವೇಳೆ ಗುರುವಾಯೂರು ಶ್ರೀಕೃಷ್ಣ ಸಹಿತ 30ಕ್ಕೂ ಅಧಿಕ ದೇವಸ್ಥಾನಗಳಿಗೆ ತೆರಳಿ, ದೇವರ ದರ್ಶನ ಪಡೆಯುತ್ತಾರೆ. ಈ ಸಲ ಜ.9ರಂದು ಶಬರಿಮಲೆ ಸನ್ನಿಧಿಗೆ ತಲುಪುವ ಗುರಿ ಇಟ್ಟುಕೊಂಡಿದ್ದಾರೆ.

32 ವರ್ಷಗಳಿಂದ ಯಾತ್ರೆ
ತಂಡದ ನೇತೃತ್ವ ವಹಿಸಿದ್ದ ಸತೀಶ್‌ ಗುರುಸ್ವಾಮಿ ಅವರು 32 ವರ್ಷಗಳಿಂದ ನಿರಂತರವಾಗಿ ಶಬರಿಮಲೆಗೆ ತೆರಳುತ್ತಿದ್ದಾರೆ. ಈ ಪೈಕಿ 18 ಬಾರಿ ಪಾದಯಾತ್ರೆಯ ಮೂಲಕವೇ ತೆರಳಿರುವುದು ವಿಶೇಷ. ಇವರ ಸಹೋದರ ಮಣಿಕಂಠ ಗುರುಸ್ವಾಮಿ 17ನೇ ಬಾರಿ ಪಾದಯಾತ್ರೆ ಹಮ್ಮಿಕೊಳ್ಳುತ್ತಿದ್ದಾರೆ. ರಾಜೇಶ್‌, ಸಂತೋಷ್‌, ಅಶೋಕ್‌,
ಮೋಹಿತ್‌, ಗೋವಿಂದ, ವಿಖ್ಯಾತ್‌, ಸುಕುಮಾರ, ರಂಜಿತ್‌ ಪಾದಯಾತ್ರೆ ತಂಡದಲ್ಲಿ ರುವ ಅಯ್ಯಪ್ಪ ಭಕ್ತರು. ಆರಂಭ ದಲ್ಲಿ ನಾಲ್ವರು ಮಾತ್ರ ಪಾದಯಾತ್ರೆ ಹಮ್ಮಿಕೊಳ್ಳುತ್ತಿದ್ದರು. ಕೇರಳದ ಕೊಯಿಲಾಂಡಿಯಲ್ಲಿ ಈ ತಂಡ ದೊಂದಿಗೆ ಅಲ್ಲಿನ ಐವರು ಜೊತೆಯಾಗಲಿದ್ದಾರೆ.

47ನೇ ಯಾತ್ರೆ
ಸತೀಶ್‌ ಗುರುಸ್ವಾಮಿ ಅವರ ತಂದೆ ಜಟ್ಟಿಪಳ್ಳದ ಕೆಂಚಪ್ಪ ಗುರುಸ್ವಾಮಿ ಈ ಬಾರಿ 47ನೇ ವರ್ಷದ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿದ್ದಾರೆ. 1972ರಿಂದಲೂ ಶಬರಿಮಲೆ ಯಾತ್ರೆ ನಡೆಸುತ್ತಾರೆ. ವಯಸ್ಸಿನ ಕಾರಣದಿಂದ ಇತ್ತೀಚೆಗೆ ಪಾದ ಯಾತ್ರೆಗೆ ತೆರಲುತ್ತಿಲ್ಲ. ಆದರೆ, ಪಾದ ಯಾತ್ರೆಯ ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇವರು ಜ.7 ರಂದು ಇರು ಮುಡಿ ಕಟ್ಟಿ ಪಾದಯಾತ್ರೆ ತಂಡ ಸನ್ನಿಧಾನ ಸೇರುವ ಸಂದರ್ಭ ಅಲ್ಲಿ ಜತೆಗೂಡುತ್ತಾರೆ ಎಂದು ತಂಡದ ಸದಸ್ಯರು ತಿಳಿಸಿದ್ದಾರೆ.

Advertisement

ವಿಶಿಷ್ಟ ಅನುಭವ
ವರ್ಷಂಪ್ರತಿ ಪಾದಯಾತ್ರೆಯ ಮೂಲಕ ಸನ್ನಿಧಾನ ತಲುಪುವುದರಿಂದ ವಿಶಿಷ್ಟ ಅನುಭೂತಿಯಾಗುತ್ತಿದೆ. ಮನಸ್ಸಿಗೂ ನೆಮ್ಮದಿಯಿದೆ. ಈ ರೀತಿಯ ಯಾತ್ರೆ ಅಪರೂಪ. ಕಾಲ್ನಡಿಗೆ ಯಾತ್ರೆಯಿಂದ ನಿಜವಾದ ಯಾತ್ರೆ ಹಮ್ಮಿಕೊಂಡ ವಿಶಿಷ್ಟ ಅನುಭವವಾಗುತ್ತಿದೆ.
ಸತೀಶ್‌, ಗುರುಸ್ವಾಮಿ

 ಭರತ್‌ ಕನ್ನಡ್ಕ

Advertisement

Udayavani is now on Telegram. Click here to join our channel and stay updated with the latest news.

Next