Advertisement

ಪಾರ್ಕ್‌ಗಳಲ್ಲಿ ಓಟಿನ ಪಠ

12:03 PM Mar 26, 2018 | |

ಬೆಂಗಳೂರು: ವಿಧಾನಸಭೆ ಚುನಾವಣೆ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿರುವ ಚುನಾವಣಾ ಆಯೋಗ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಹಾಗೂ ಮತದಾರ ದೃಢೀಕರಣ ಚೀಟಿ (ವಿವಿ ಪ್ಯಾಟ್‌) ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ಭಾನುವಾರ ಲಾಲ್‌ಬಾಗ್‌, ಕಬ್ಬನ್‌ಪಾಕ್‌, ಸ್ಯಾಂಕಿ ಕೆರೆ, ಜೆ.ಪಿ.ಪಾರ್ಕ್‌ ಸೇರಿ ನಗರದ ವಿವಿಧೆಡೆ ಪ್ರಾತ್ಯಕ್ಷಿಕೆ ಮತ್ತಿತರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.

Advertisement

ಮತದಾನದ ಮಹತ್ವ, ಮತ ಚಲಾಯಿಸುವುದು ಹೇಗೆ? ಹಾಕಿದ ಓಟಿನ ಸುರಕ್ಷತೆ ಮತ್ತು ನಿಖರತೆ ಬಗ್ಗೆ ತಿಳಿದುಕೊಳ್ಳುವುದು ಹೇಗೆ? ಇವಿಎಂ ಮತ್ತು ವಿವಿಪ್ಯಾಟ್‌ಗಳ ತಂತ್ರಜ್ಞಾನ, ಅದರ ಕಾರ್ಯನಿರ್ವಹಣೆ ಬಗ್ಗೆ ಅಧಿಕಾರಿಗಳು ಪ್ರತ್ಯಾಕ್ಷಿಕೆ ಮೂಲಕ ಮಾಹಿತಿ ನೀಡಿದರು. ಈ ವೇಳೆ ಸಾರ್ವಜನಿಕರು ಪ್ರಶ್ನೆ ಕೇಳುವ ಮೂಲಕ ತಮಗಿರುವ ಸಂದೇಹ ಪರಿಹರಿಸಿಕೊಂಡರು. 

ರಜಾ ದಿನವಾದ ಭಾನುವಾರ ಮತ್ತು ಬೆಳಗಿನ ವಾಯು ವಿಹಾರದ ವೇಳೆ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕಾಲೇಜು ವಿದ್ಯಾರ್ಥಿಗಳಿಗೆ ಮತದಾನದ ಹಕ್ಕು ಚಲಾಯಿಸುವ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಅರಿವು ಮೂಡಿಸುವ ಕಾರ್ಯಕ್ರಮ ನಡೆದ ಎಲ್ಲ ಕಡೆಗಳಲ್ಲಿ ವಿದ್ಯುನ್ಮಾನ ಮತ ಯಂತ್ರ ಮತ್ತು ವಿವಿಪ್ಯಾಟ್‌ಗಳನ್ನು ಸ್ಥಳದಲ್ಲಿ ಇಟ್ಟು ಸಾರ್ವಜನಿಕರಿಗೆ ಅವುಗಳನ್ನು ಬಳಸಿ ನೋಡುವ ಅವಕಾಶ ನೀಡಲಾಗಿತ್ತು. ಸಾರ್ವಜನಿಕರನ್ನು ಆಕರ್ಷಿಸಿಸಲು ಜಾನಪದ ಕಲಾ ತಂಡ, ಬೀದಿನಾಟಕಗಳ ಮೂಲಕ ಚುನಾವಣೆ ಹಾಗೂ ಮತದಾರರ ಜಾಗೃತಿ ಕುರಿತು ರಚಿಸಿದ ಹಾಡುಗಳನ್ನು ಹಾಡಿದ್ದು ವಿಶೇಷವಾಗಿತ್ತು. 

ಅನುಮಾನ ಬೇಡ: ಲಾಲ್‌ಬಾಗ್‌ನಲ್ಲಿ ಬೆಳಗ್ಗೆ 7 ಗಂಟೆಗೆ ನಡೆದ ಕಾರ್ಯಕ್ರಮಕ್ಕೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಚಾಲನೆ ನೀಡಿ, ಸಾರ್ವಜನಿಕರ ಸಂದೇಹ ಪರಿಹರಿಸುವ ಪ್ರಯತ್ನ ಮಾಡಿದರು. ಮತ ಯಂತ್ರಗಳಲ್ಲಿ ಅಳವಡಿಸಿರುವ ತಂತ್ರಾಂಶವನ್ನು ಬದಲಾಯಿಸಲು ಸಾಧ್ಯವಿಲ್ಲ. ಇದಕ್ಕೆ ಯಾವುದೇ ರೀತಿಯ ಇಂಟರ್ನೆಟ…, ಬ್ಲೂಟೂತ್‌ ಅಥವಾ ಪೋರ್ಟ್‌ ಮೂಲಕ ಸಂಪರ್ಕ ಸಾದ್ಯವಿಲ್ಲ. 

Advertisement

ಆದ್ದರಿಂದ ಮತಯಂತ್ರಗಳ ಕುರಿತು ಅನುಮಾನ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಮತದಾಯನಕ್ಕೆ ಬಳಸುವ ಮುನ್ನ ಮತಯಂತ್ರಗಳನ್ನು ಮೂರು ಹಂತಗಳಲ್ಲಿ ರಾಜಕೀಯ ಪಕ್ಷಗಳ ಸಮ್ಮುಖದಲ್ಲಿಯೇ ಪರಿಶೀಲನೆ ನಡೆಸಲಾಗುತ್ತದೆ ಹಾಗೂ ಸೂಕ್ತ ಭದ್ರತೆಯಲ್ಲಿ ಅವುಗಳನ್ನು ಸಂರಕ್ಷಿಸಲಾಗುತ್ತದೆ ಎಂದು ಅವರು ವಿವರಿಸಿದರು.

ಪ್ರತಿಜ್ಞಾ ವಿಧಿ: ಇದೇ ವೇಳೆ ವಿಜಯಾ ಕಾಲೇಜಿನ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳಿಗೆ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಅವರು ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಬೆಂಗಳೂರು ನಗರ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್‌. ಅರ್ಚನಾ, ನಟ ಧನಂಜಯ್‌ ಇದ್ದರು.

ಪ್ರತಿಜ್ಞಾವಿಧಿ ಬೋಧನೆ
ಕಬ್ಬನ್‌ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿ ಡಾ. ಜಗದೀಶ್‌ ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು. ಬೆಂಗಳೂರು ಪೂರ್ವ ವಲಯದ ಜಂಟಿ ಆಯುಕ್ತ ಡಾ. ಅಶೋಕ್‌, ಇವಿಎಂ ಹಾಗೂ ವಿವಿಪ್ಯಾಟ್‌ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು. ಈ ವೇಳೆ ಸಾರ್ವಜನಿಕರಿಗಾಗಿ ಇವಿಎಂ ಹಾಗೂ ವಿವಿಪ್ಯಾಟ್‌ನ ಬಳಕೆ ಬಗ್ಗೆ ಪ್ರಾತ್ಯಾಕ್ಷಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಹಾಜರಿದ್ದ ಬಿಎಎಲ್‌ ಸಂಸ್ಥೆಯ ತಾಂತ್ರಿಕ ಸಿಬ್ಬಂದಿ ಯಂತ್ರಗಳ ತಾಂತ್ರಿಕತೆ ಬಗ್ಗೆ ವಿವರಿಸಿದರು. ಚುನಾವಣಾ ಆಯೋಗದ ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಾರ್ವಜನಿಕರು, ಇಂತಹ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ನಡೆಸುವಂತೆ ಸಲಹೆ ನೀಡಿದರು. ಕಬ್ಬನ್‌ಪಾರ್ಕ್‌ ಹಾಗೂ ಸುತ್ತಲಿನ ರಸ್ತೆಗಳಲ್ಲಿ ಜಾಗೃತಿ ಮೂಡಿಸುವ ಕರಪತ್ರಗಳನ್ನು ಹಂಚಲಾಯಿತು

ಬಳಕೆ ಕುರಿತು ಪ್ರಾತ್ಯಕ್ಷಿಕೆ
ಜೆ.ಪಿ. ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಜಂಟಿ ಸಿಇಒ ಸೂರ್ಯಸೇನ್‌, ಸಾರ್ವಜನಿಕರಿಗೆ ಇವಿಎಂ ಹಾಗೂ ವಿವಿಪ್ಯಾಟ್‌ಗಳ ಬಗ್ಗೆ ಪ್ರಾತ್ಯಾಕ್ಷಿಕೆ ಮೂಲಕ ವಿವರಿಸಿದರು. ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಅನುಮಾನ ಪಡಬೇಕಿಲ್ಲ. ವಿವಿಪ್ಯಾಟ…ನಲ್ಲಿ ಮತದಾರ ತಾನು ಯಾವ ಅಭ್ಯರ್ಥಿ ಮತ್ತು ಯಾವ ಕ್ರಮ ಸಂಖ್ಯೆಗೆ ಮತ ಚಲಾಯಿಸಿದ್ದೇನೆ ಎಂದು ತಕ್ಷಣ ಗೊತ್ತಾಗುತ್ತದೆ. ಒಂದು ಯಂತ್ರದಲ್ಲಿ ಮತ ಚಲಾಯಿಸಿದರೆ ಅದು ಒಂದೇ ಪಕ್ಷಕ್ಕೆ ಹೋಗುತ್ತದೆ ಎಂಬುದು ನಿರಾಧಾರ. ಈ ಅನುಮಾನ ತಪ್ಪಿಸಲೆಂದೇ ವಿವಿಪ್ಯಾಟ್‌ಗಳನ್ನು ಅಳವಡಿಸಲಾಗುತ್ತಿದೆ ಎಂದು ಹೇಳಿದರು. ಬಿಬಿಎಂಪಿ ಜಂಟಿ ಆಯುಕ್ತ ತಿಪ್ಪೇಸ್ವಾಮಿ ಈ ಸಂದರ್ಭದಲ್ಲಿ ಹಾಜರಿದ್ದರು. 

ಸ್ಯಾಂಕಿ ಕೆರೆ 
ಸ್ಯಾಂಕಿ ಕೆರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿಬಿಎಂಪಿ ಜಂಟಿ ಆಯುಕ್ತೆ (ಮಹದೇವಪುರ ವಲಯ) ವಾಸಂತಿ ಅಮರ್‌ ಅವರು ಇವಿಎಂ ಮತ್ತು ವಿವಿ ಪ್ಯಾಟ್‌ಗಳ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಿದರು. ಈ ಸಂದರ್ಭದಲ್ಲಿ ಬಿಬಿಎಂಪಿ ಜಂಟಿ ಆಯುಕ್ತ (ಪಶ್ಚಿಮ ವಲಯ) ಬಸವರಾಜ್‌ ಮತ್ತು ಇತರ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next