Advertisement
“ಸೂಜಿದಾರ’ ಚಿತ್ರ ಆರಂಭವಾಗುತ್ತಿದ್ದಂತೆ “ದೇಹದ ಮೇಲಿನ ದೊಡ್ಡ ಗಾಯವೆಂದರೆ ಅದು ಮನಸ್ಸು’ ಎಂಬ ಸಂಭಾಷಣೆ ಬರುತ್ತದೆ. ಅದೇ ಅಂಶದೊಂದಿಗೆ ನಿರ್ದೇಶಕರು “ಸೂಜಿದಾರ’ವನ್ನು ಪೋಣಿಸಿದ್ದಾರೆ. ಮನಸ್ಸಿಗಾಗುವ ಗಾಯ ಹಾಗೂ ಅದರಾಚೆಗಿನ ಪರಿಣಾಮವೇ ಈ ಚಿತ್ರದ ಮೂಲ ಅಂಶ. “ಸೂಜಿದಾರ’ ಒಂದು ಸೂಕ್ಷ್ಮ ಸಂವೇದನೆಯ ಚಿತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡದಲ್ಲಿ ಇತ್ತೀಚೆಗೆ ಬರುತ್ತಿರುವ ಹೊಸ ಬಗೆಯ ಸಿನಿಮಾಗಳ ಸಾಲಿಗೆ ಸೇರುವ ಚಿತ್ರವಿದು.
Related Articles
Advertisement
ಇಲ್ಲಿ ನಿರ್ದೇಶಕರು ಯಾವ ಅಂಶವನ್ನೂ ತುಂಬಾ ಅತಿಯಾಗಿ, ವಿರಳವಾಗಿ ಹೇಳುವ ಗೋಜಿಗೆ ಹೋಗಿಲ್ಲ. ಆದರೆ, ಸೂಕ್ಷ್ಮ ಅಂಶಗಳೊಂದಿಗೆ ಕಟ್ಟಿಕೊಟ್ಟಿದ್ದಾರೆ. ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಜವಾಬ್ದಾರಿಯನ್ನು ಪ್ರೇಕ್ಷಕರಿಗೆ ಬಿಟ್ಟಿದ್ದಾರೆ. ಚಿತ್ರದ ಕೆಲವು ದೃಶ್ಯಗಳು ಆಗಾಗ ಮರುಕಳಿಸುತ್ತವೆ. ಆ ತರಹದ ಕೆಲವು ತಪ್ಪುಗಳನ್ನು ಬದಿಗಿಟ್ಟು ನೋಡಬೇಕಾಗುತ್ತದೆ.
ಮುಖ್ಯವಾಗಿ ಈ ತರಹದ ಸಿನಿಮಾಗಳನ್ನು ತುಂಬಾ ಸಾವಧಾನದಿಂದ ನೋಡಬೇಕಾಗುತ್ತದೆ. ಅದಕ್ಕೆ ಕಾರಣ ಕಥೆ ತೆರೆದುಕೊಳ್ಳುವ ರೀತಿ. ಕಮರ್ಷಿಯಲ್ ಸಿನಿಮಾಗಳಂತೆ ಹೀರೋ ಅದ್ಧೂರಿ ಎಂಟ್ರಿ, ಕಲರ್‌ಫುಲ್ ಸಾಂಗ್, ಬ್ಯೂಟಿಫುಲ್ ಲೊಕೇಶನ್ … ಇವೆಲ್ಲವನ್ನು ಬಯಸುವವರಿಗೆ ಮತ್ತು ಕಮರ್ಷಿಯಲ್ ಸಿನಿಮಾಗಳಲ್ಲಿನ ಮನರಂಜನೆಯ ನಿರೀಕ್ಷೆಯಲ್ಲಿರುವ ಸಿನಿಪ್ರಿಯರಿಗೆ “ಸೂಜಿದಾರ’ ಹೆಚ್ಚೇನು ರುಚಿಸಲಿಕ್ಕಿಲ್ಲ.
ಬದಲಾಗಿ ಹೊಸ ಜಾನರ್‌ನ, ಸೂಕ್ಷ್ಮ ಅಂಶಗಳಿರುವ ಸಿನಿಮಾ ಕಣ್ತುಂಬಿಕೊಳ್ಳುವ ಮನಸ್ಸುಳ್ಳವರಿಗೆ “ಸೂಜಿ’ ಇಷ್ಟವಾಗಬಹುದು. ಇಲ್ಲಿ ನಿರ್ದೇಶಕರು ಯಾವ ಪಾತ್ರವನ್ನು ಹೆಚ್ಚು ಹೈಲೈಟ್ ಮಾಡಿಲ್ಲ. ಹಾಗೆ ಬಂದು ಹೀಗೆ ಹೋಗುತ್ತವೆ. ಆ ಅವಧಿಯಲ್ಲೇ ಹರಿದ ಬದುಕಿನ ಅನಾವರಣ. ಈ ಚಿತ್ರದ ಹೈಲೈಟ್ ಎಂದರೆ ಹರಿಪ್ರಿಯಾ. ಈ ಹಿಂದೆ ಅವರು ಮಾಡಿರುವ ಪಾತ್ರಗಳಿಗೆ ಹೋಲಿಸಿದರೆ ಸಂಪೂರ್ಣ ಭಿನ್ನವಾದ ಪಾತ್ರ “ಸೂಜಿದಾರ’ದಲ್ಲಿದೆ.
ಪದ್ಮಾ ಎಂಬ ಅಸಹಾಯಕ ಹೆಣ್ಣುಮಗಳ ಕಥಾನಕವನ್ನು ಹರಿಪ್ರಿಯಾ ನಟನೆಗಿಂತ ಹೆಚ್ಚಾಗಿ ತಮ್ಮ ಹಾವ-ಭಾವಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಮಾತಿಗಿಂತ ಮೌನಕ್ಕೆ ಹೆಚ್ಚು ಅರ್ಥ. ಹರಿಪ್ರಿಯಾ ಪಾತ್ರದಲ್ಲಿ ಮೌನ ಹೆಚ್ಚು ಕೆಲಸ ಮಾಡಿದೆ. ಉಳಿದಂತೆ ಯಶ್ ಶೆಟ್ಟಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅಮಾಯಕನೊಬ್ಬನ ವೇದನೆ, ತೊಳಲಾಟವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಉಳಿದಂತೆ ಅಚ್ಯುತ್, ಚೈತ್ರಾ ಕೊಟ್ಟೂರು, ಸುಚೇಂದ್ರ ಪ್ರಸಾದ್ ಸೇರಿದಂತೆ ಇತರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಕಥೆಯ ಆಶಯಕ್ಕೆ ತಕ್ಕುದಾಗಿದೆ.
ಚಿತ್ರ: ಸೂಜಿದಾರನಿರ್ಮಾಣ: ಸಚ್ಚೀಂದ್ರನಾಯಕ್-ಅಭಿಜಿತ್
ನಿರ್ದೇಶನ: ಮೌನೇಶ್ ಬಡಿಗೇರ್
ತಾರಾಗಣ: ಹರಿಪ್ರಿಯಾ, ಯಶ್ ಶೆಟ್ಟಿ, ಸುಚೇಂದ್ರ ಪ್ರಸಾದ್, ಚೈತ್ರಾ ಕೊಟ್ಟೂರು, ಅಚ್ಯುತ್ ಕುಮಾರ್ ಮತ್ತಿತರರು. * ರವಿಪ್ರಕಾಶ್ ರೈ