ಮಡಿಕೇರಿ: ಕೊಡಗಿನಲ್ಲಿ ಸುರಿದ ಮಳೆ ದಿಗ್ಬಂಧನದಿಂದ ಮುಕ್ಕೋಡ್ಲು, ಮಕ್ಕಂದೂರು, ಕಾಲೂರು ಗ್ರಾಮಗಳು ಅಪಾರ ಹಾನಿಗೆ ಒಳಗಾಗಿದ್ದು, ಮೂರು ದಿನದಿಂದ ಮಹಾಮಳೆಗೆ ಸಿಲುಕಿ ಬಿಡಿಸಿಕೊಂಡು ಬಂದವರ ಸ್ಥಿತಿ ರೋಚಕವಾಗಿದೆ. ಪ್ರವಾಹದ ನಡುವೆ ತಮ್ಮ ಮನೆಯಲ್ಲಿ ಸುಮಾರು 100ಕ್ಕೂ ಅಧಿಕ ಗ್ರಾಮಸ್ಥರೊಂದಿಗೆ ಸಿಲುಕಿಕೊಂಡಿದ್ದ ಜಿಪಂ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ ಅವರ ಪ್ರಕಾರ ಯಾರೂ ಕೂಡ ಅವರನ್ನು ರಕ್ಷಿಸಿಲ್ಲ. ಜೀವ ಉಳಿಸಿಕೊಳ್ಳಲು ಬೆಟ್ಟ ಗುಡ್ಡ, ಕಾಡು ಮೇಡುಗಳನ್ನು ದಾಟಿ ಡಾಂಬರು ರಸ್ತೆಗೆ ತಲುಪಿದ ಬಳಿಕವಷ್ಟೇ ಗ್ರಾಮಸ್ಥರನ್ನು ಕಾರ್ಯಾಚರಣೆ ತಂಡ ಭೇಟಿಯಾಗಿದೆ.
ಜಲಾವೃತವಾದ ಗ್ರಾಮ: ಆ.15 ರಿಂದ ಮಹಾಮಳೆ ಪ್ರತಿ ಗಂಟೆಗೂ ಹೆಚ್ಚುತ್ತಾ ಎರಡು ದಿನ ನಿರಂತವಾಯಿತು. ಗ್ರಾಮಕ್ಕೆ ಗ್ರಾಮವೇ ಜಲಾವೃತವಾಯಿತು. ಅಪಾಯವನ್ನು ಅರಿತ ಸುಮಾರು 74 ಮಂದಿ ತಂತಿಪಾಲದ ದೊಡ್ಡ ಗುಡ್ಡದ ಮೇಲೆ ಹತ್ತಿ ಕುಳಿತರು. ಜಿಲ್ಲಾಡಳಿತದಿಂದ ಕಾರ್ಯಾಚರಣೆ ಮಾಡದ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಕುಶಾಲಪ್ಪ ಅವರ ಮನೆಯಲ್ಲಿ ಆಶ್ರಯ ಕಲ್ಪಿಸಿಕೊಡಲಾಯಿತು.
“ತಮ್ಮ ಮನೆಯಲ್ಲೇ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಯಿತು. ಗ್ರಾಮದಲ್ಲಿ ಮಳೆ ನಿಲ್ಲದೆ, ಕೆಸರು ನೀರಿನಿಂದ ದ್ವೀಪದಂತಾದಾಗ ಇನ್ನು ಜಿಲ್ಲಾಡಳಿತವನ್ನು ಕಾಯುವುದು ಬೇಡವೆಂದು ಧೈರ್ಯ ಮಾಡಿ ಗ್ರಾಮದಿಂದ ಹೊರ ನಡೆಯಲು ಪ್ರಾರಂಭಿಸಿದೆವು’ ಎನ್ನುತ್ತಾರೆ ರವಿ ಕುಶಾಲಪ್ಪ.
ಪ್ರಯಾಣ: ಹಗ್ಗ ಹಾಗೂ ಮರ ಕತ್ತರಿಸುವ ಯಂತ್ರದೊಂದಿಗೆ ಉಟ್ಟ ಬಟ್ಟೆಯಲ್ಲೆ ಎಲ್ಲರೂ ಹೊರಟೆವು. ಪ್ರವಾಹದಲ್ಲಿ ಸಂಪರ್ಕ ಸೇತುವೆ ಮುಳುಗಿದ್ದರಿಂದ ಹಗ್ಗದ ಮೂಲಕ ಸೇತುವೆ ದಾಟಿ 3 ಕಿ.ಮೀ. ದೂರ ನಡೆದೆವು. ಆ ಮಾರ್ಗದಲ್ಲಿ ದೊಡ್ಡ ಪ್ರವಾಹ ಹರಿಯುತ್ತಿದ್ದುದರಿಂದ ಮರವೊಂದನ್ನು ಬೀಳಿಸಿ ಆ ಮರದ ಆಸರೆಯಿಂದ ದಾಟಿದೆವು. ಅನಂತರ ಕೋಟೆ ಬೆಟ್ಟವನ್ನು ಏರಲು ಆರಂಭಿಸಿದೆವು. ಕೋಟೆ ಬೆಟ್ಟಕ್ಕೆ ಬಡಿಯುತ್ತಿದ್ದ ಮಳೆ ಗಾಳಿ ಸಹಿಸಿಕೊಂಡು ನೂರಕ್ಕೂ ಅಧಿಕ ಮಂದಿ ಬೆಟ್ಟವೇರಿ ಎರಡು ಹೊಳೆಗಳನ್ನು ದಾಟಿ ಹೇಗೋ ಮಾದಾಪುರ -ಸೋಮವಾರಪೇಟೆಯ ಇಗ್ಗೊàಡ್ಲು ಗ್ರಾಮದ ಡಾಂಬರಿನ ರಸ್ತೆಗೆ ಬಂದೆವು. ಅಲ್ಲಿ ಕಾರ್ಯಾಚರಣೆ ತಂಡಗಳು ಸ್ವಾಗತಿಸಿದವು ಎಂದು ಕುಶಾಲಪ್ಪ ತಮ್ಮ ಅನುಭವ ವಿವರಿಸಿದರು.
ಅಸುನೀಗಿದ ಮಗು: ಇಷ್ಟೆಲ್ಲ ಕಷ್ಟಪಟ್ಟು ನಾವು ಸಾವಿನ ದವಡೆಯಿಂದ ಪಾರಾಗಿದ್ದೇವೆ. ಆದರೆ, ಕಾರ್ಯಾಚರಣೆ ಪಡೆಗಳು ನಾವೇ ಗ್ರಾಮಸ್ಥರನ್ನು ರಕ್ಷಿಸಿದ್ದೇವೆಂದು ಹೇಳಿಕೊಳ್ಳುತ್ತಿರುವುದು ಬೇಸರದ ಸಂಗತಿ. ಮಾರ್ಗ ಮಧ್ಯೆ ಪುಟ್ಟ ಮಗುವೊಂದು ಅಸುನೀಗಿರುವುದು ವಿಷಾದಕರವೆಂದು ಕುಶಾಲಪ್ಪಕಣ್ಣೀರು ಹಾಕಿದರು.
ಮಕ್ಕಂದೂರು, ಮುಕ್ಕೋಡ್ಲು, ಶಾಂತಳ್ಳಿ ಗ್ರಾಮಗಳು ಸಂಪೂರ್ಣವಾಗಿ ನಾಶವಾಗಿದ್ದು, ಕೇಂದ್ರ, ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ಅವರು ಮನವಿ ಮಾಡಿದರು.