Advertisement

ನೈತಿಕ-ಕಡ್ಡಾಯ ಮತದಾನಕ್ಕೆ ವಾಕಥಾನ್‌

09:30 PM Nov 22, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಡಿ.5 ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳ ಮಾಡಲು ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ನ.25 ಕ್ಕೆ ಜಿಲ್ಲಾ ಕೇಂದ್ರದಲ್ಲಿ ಬೃಹತ್‌ ವಾಕಥಾನ್‌, 26ಕ್ಕೆ ವಿಕಲಚೇತನರ ಬೈಕ್‌ ರ್ಯಾಲಿ ಸೇರಿದಂತೆ ವಿವಿಧ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ಹಾಗೂ ಸ್ವೀಪ್‌ ಸಮಿತಿ ಅಧ್ಯಕ್ಷೆ ಬಿ.ಫೌಜಿಯಾ ತರುನ್ನುಮ್‌ ತಿಳಿಸಿದರು.

Advertisement

ನಗರದ ಜಿಪಂ ಮಿನಿ ಸಭಾಂಗಣದಲ್ಲಿ ಶುಕ್ರವಾರ ಬೆಳಗ್ಗೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ನೈತಿಕ ಮತದಾನದ ಜೊತೆಗೆ ಕಡ್ಡಾಯ ಮಾತದಾನ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಲು ಡಿ.3ರ ವರೆಗೂ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.

ಪಾರದರ್ಶಕ ಚುನಾವಣೆ: ಕ್ಷೇತ್ರದಲ್ಲಿ 254 ಮತಗಟ್ಟೆಗಳಿದ್ದು, 2 ಲಕ್ಷಕ್ಕೂ ಅಧಿಕ ಮತದಾರರು ಇದ್ದಾರೆ. ಪ್ರತಿಯೊಬ್ಬ ಮತದಾರರು ಕೂಡ ಮುಕ್ತ ಹಾಗೂ ನಿರ್ಭೀತಿಯಿಂದ ಚುನಾವಣೆಯಲ್ಲಿ ಭಾಗವಹಿಸಬೇಕು, ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬವಾಗಿ ಆಚರಿಸಬೇಕು. ಈ ದಿಸೆಯಲ್ಲಿ ಜಿಲ್ಲಾಡಳಿತ ಚುನಾವಣೆಯನ್ನು ಪಾರದರ್ಶಕತೆಯಿಂದ ನಡೆಸಲಾಗುವುದು. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.

ಮಾಹಿತಿ ನೀಡಿ: ಚೆಕ್‌ ಪೋಸ್ಟ್‌ಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೂ ಕಟ್ಟೆಚ್ಚರದಿಂದ ಇರುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಅಥವಾ ಮತದಾರರು, ಚುನಾವಣಾ ಅಕ್ರಮಗಳು ಕಂಡು ಬಂದ ತಕ್ಷಣ ಜಿಲ್ಲಾಡಳಿತಕ್ಕೆ ಮಾಹಿತಿ ಕೊಡಬಹುದು ಎಂದರು.

ವಿವಿಧ ಸ್ಪರ್ಧೆ ಆಯೋಜನೆ: ಕಳೆದ ಬಾರಿ ಚುನಾವಣೆಯಲ್ಲಿ ಶೇ.82 ರಷ್ಟು ಮತದಾನ ಆಗಿದೆ. ಈ ಬಾರಿ ಕನಿಷ್ಠ ಶೇ.90ಕ್ಕಿಂತ ಹೆಚ್ಚು ಮತದಾನ ಆಗಬೇಕು. ಇದಕ್ಕಾಗಿ ಜಿಲ್ಲಾಡಳಿತ ಮತದಾನ ಜಾಗೃತಿಗಾಗಿ ಪ್ರತಿ ಹೋಬಳಿ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ಮಾನವ ಸರಪಳಿ, ಜಾಥಾ, ರ್ಯಾಲಿ, ಮಕ್ಕಳಿಗೆ ಪ್ರಬಂಧ, ರಸಪ್ರಶ್ನೆ, ನಾಟಕ, ಚಿತ್ರಕಲೆ, ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪ್ರತಿಜ್ಞಾ ವಿಧಿ ಬೋಧಿಸಲಾಗುತ್ತಿದೆ ಎಂದರು.

Advertisement

ವೇತನ ಸಹಿತ ರಜೆ: ಮತದಾನ ಪ್ರಮಾಣ ಹೆಚ್ಚಿಸುವ ದೃಷ್ಟಿಯಿಂದ ಪ್ರತಿ ಮತಗಟ್ಟೆಯಲ್ಲಿ ವಿಕಲಚೇತನರಿಗೆ ವೀಲ್‌ಚೇರ್‌ ವ್ಯವಸ್ಥೆ ಮಾಡಲಾಗಿದೆ. ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ. ಅಸಹಾಯಕರಿಗೆ ಸಾರಿಗೆ ಸೌಕರ್ಯ ಮಾಡುವ ಚಿಂತನೆ ಮಾಡಲಾಗಿದೆ. ಮಹಿಳಾ ಮತದಾರರನ್ನು ಆಕರ್ಷಿಸಲು ಸಖೀ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.

ಈಗಾಗಲೇ ಪ್ರತಿ ಮತಗಟ್ಟೆಗೆ ತೆರಳಿ ಮೂಲ ಸೌಕರ್ಯಗಳನ್ನು ಪರಿಶೀಲನೆ ನಡೆಸಲಾಗಿದ್ದು, ಅಗತ್ಯ ಇರುವ ಬೆಳಕು, ಕುಡಿಯುವ ನೀರು, ರ್ಯಾಪ್‌ ವ್ಯವಸ್ಥೆ ಮಾಡಲಾಗುವುದು. ಮತದಾರರು ಆಸೆ, ಆಷಮಿಗಳಿಗೆ ಒಳಗಾಗದೇ ಮತ ಚಲಾಯಿಸಬೇಕೆಂದರು. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ನಿಗಾ ವಹಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಯೋಜನಾ ನಿರ್ದೇಶಕರಾದ ಗಿರಿಜಾ ಶಂಕರ್‌, ವಾರ್ತಾಧಿಕಾರಿ ಎಂ.ಜುಂಜಣ್ಣ, ಜಿಲ್ಲಾ ಸ್ವೀಪ್‌ ಸಮಿತಿ ಸದಸ್ಯರಾದ ಸತೀಶ್‌ ಕುಮಾರ್‌, ರವಿಕುಮಾರ್‌, ಮೋಹನ್‌ ಕುಮಾರ್‌ ಇದ್ದರು.

ಮತದಾನ ಜಾಗೃತಿಗೆ ಏನೇನು ಕಾರ್ಯಕ್ರಮ: ನ.23ಕ್ಕೆ ಬೆಳಗ್ಗೆ 10 ಗಂಟೆಗೆ ಶಿಕ್ಷಣ ಇಲಾಖೆಯಿಂದ ಮಾನವ ಸರಪಳಿ, ಸಂಜೆ 6 ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, 25ಕ್ಕೆ ಬೆಳಗ್ಗೆ ಮಂಚೇನಹಳ್ಳಿ ಗ್ರಾಪಂ ಸ್ತ್ರೀಶಕ್ತಿ ಸಂಘಗಳಿಂದ ಮಾನವ ಸರಪಳಿ, ಬೆಳಗ್ಗೆ 9 ಗಂಟೆಗೆ ಅಂಬೇಡ್ಕರ್‌ ಭವನದಿಂದ ವಾಕಥಾನ್‌, ಸಂಜೆ 5:30ಕ್ಕೆ ನಂದಿ ದೇವಾಲಯದ ಬಳಿ ಭಕ್ತರಿಗೆ ಪ್ರತಿಜ್ಞಾ ವಿಧಿ ಬೋಧನೆ, 26ಕ್ಕೆ ಬೆಳಗ್ಗೆ 11 ಗಂಟೆಗೆ ವಿಕಲಚೇತನರಿಂದ ಬೈಕ್‌ ರ್ಯಾಲಿ.

27ಕ್ಕೆ ಸ್ತ್ರೀಶಕ್ತಿ ಸಂಘಗಳಿಂದ ಜನ ಜಾಗೃತಿ ಜಾಥಾ, ಬೈಕ್‌ ರ್ಯಾಲಿ, 28ಕ್ಕೆ ಮೇಣದ ಬತ್ತಿ ನಡಿಗೆ, 29ಕ್ಕೆ ಮತದಾನ ಕುರಿತು ನಾಟಕ, 30ಕ್ಕೆ ಚರ್ಚಾ ಸ್ಪರ್ಧೆ, ಡಿ.1ಕ್ಕೆ ರಂಗೋಲಿ ಸ್ಪರ್ಧೆ, 2ಕ್ಕೆ ಮಂಚೇನಹಳ್ಳಿಯಲ್ಲಿ ಬೈಕ್‌ ರ್ಯಾಲಿ, ಡಿ.3ಕ್ಕೆ ಸಂಜೆ 6 ಗಂಟೆಗೆ ರಂಗೋಲಿ ಸ್ಪರ್ಧೆ ಹಾಗೂ ಸಂಜೆ 6 ಗಂಟೆಗೆ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ ಎಂದು ಜಿಪಂ ಸಿಇಒ ಬಿ.ಫೌಬಿಯಾ ತರುನ್ನುಮ್‌ ತಿಳಿಸಿದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಡ್ಡಾಯ ಹಾಗೂ ನೈತಿಕ ಮತದಾನ ಮಾಡುವ ದಿಸೆಯಲ್ಲಿ ಮತದಾರರಿಗೆ ನ.23 ರಿಂದ ಡಿ.3ರ ವರೆಗೂ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕ್ಷೇತ್ರದ ಮತದಾರರು ಆಸೆ, ಆಮಿಷಗಳಿಗೆ ಒಳಗಾಗದೇ ಮುಕ್ತ ಹಾಗೂ ನಿರ್ಭೀತಿಯಿಂದ ಮತ ಚಲಾಯಿಸಬೇಕು.
-ಬಿ.ಫೌಜಿಯಾ ತರುನ್ನುಮ್‌, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next