ದೊಡ್ಡಬಳ್ಳಾಪುರ : ಗೆಲ್ ಸಂಸ್ಥೆ ದಕ್ಷಿಣ ವಲಯ ಹಾಗೂ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಚಿವಾಲಯ ಹಾಗೂ ಸಹಯೋಗದಲ್ಲಿ ಆರೋಗ್ಯ,ಪರಿಸರ ಮತ್ತು ಇಂಧನ ಉಳಿತಾಯಕ್ಕಾಗಿ ವಾಕಥಾನ್ ಕಾರ್ಯಕ್ರಮ ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ ಬೆಳಿಗ್ಗೆ ನಡೆಯಿತು.
ಭಗತ್‌ಸಿಂಗ್ ಕ್ರೀಡಾಂಗಣದಿಂದ ಆರಂಭವಾದ ವಾಕಥಾನ್‌ನಲ್ಲಿ ವಿವಿಧ ಸ್ವಯಂಸೇವಾ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ಸಾರ್ವಜನಿಕರು ಹಾಗೂ ಗೆಲ್ ಸಂಸ್ಥೆ ಸಿಬ್ಬಂದಿ ಭಾಗವಹಿಸಿ 4 ಕಿಲೋ ಮೀಟರ್ ಕ್ರಮಿಸಿ, ಪರಿಸರ ಹಾಗೂ ಇಂಧನ ಉಳಿತಾಯದ ಬಗ್ಗೆ ಜಾಗೃತಿ ಮೂಡಿಸಿದರು.
ನಂತರ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಡಿವೈಎಸ್‌ಪಿ ಟಿ. ರಂಗಪ್ಪ , ಇಂಧನದ ಅತಿಯಾದ ಬಳಕೆಯಿಂದ ಮುಂದಿನ ಪೀಳಿಗೆಗೆ ಇಂಧನ ಸಿಗದೇ ಹೋಗುವಂತೆ ಪರಿಸ್ಥಿತಿ ಉಂಟಾಗಲಿದೆ. ಇಂಧನದ ಮಿತಿಮೀರಿದ ಬಳಕೆಯಿಂದಾಗಿ ಇಂದು ಪರಿಸರ ಹಾಳಗುತ್ತಿದ್ದು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಗೆಲ್ ಸಂಸ್ಥೆ ದಕ್ಷಿಣ ವಲಯ ಕಾರ್ಯಕಾರಿ ನಿರ್ದೇಶಕ ಮುರುಗೇಷನ್ ಮಾತನಾಡಿ, ಸರ್ಕಾರ ಇಂದು ಇಂಧನ ಆಮದಿಗಾಗಿಯೇ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಇದನ್ನು ತಡೆಯುವ ಸಲುವಾಗಿ ಜನರಲ್ಲಿ ಜಾಗೃತಿ ಮೂಡಿಸಲು ದೇಶದ ಹಲವಡೆಗಳಲ್ಲಿ ಎಲ್ಲಾ ತೈಲ ಕಂಪನಿಗಳು ಸೈಕಲ್ ಜಾಥಾ, ಮ್ಯಾರಥಾನ್ ನಡೆಸಲಾಗುತ್ತಿದೆ.ಆರೋಗ್ಯ,ಪರಿಸರ ಮತ್ತು ಇಂಧನ ಉಳಿತಾಯಕ್ಕಾಗಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವಾಕಥಾನ್ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಚಿವಾಲಯ, ವಿವಿಧ ಪೆಟ್ರೋಲಿಯಂ ಕಂಪನಿಗಳು ಸಹಕಾರ ನೀಡಿವೆ ಎಂದರು.
ಗೆಲ್ ಸಂಸ್ಥೆಯ ಮಹಾಪ್ರಬಂಧಕ ವಿ.ಶ್ರೀನಿವಾಸಲು ಉಪಮಹಾಪ್ರಬಂಧಕ ಜೋಶ್ ಥಾಮಸ್, ರಾಜ ಗೋಪಾಲನ್, ನಿರೂಪಕಿ ಸವಿ ಪ್ರಕಾಶ್ ಇದ್ದರು.