Advertisement
ಅಂದು ನಾವಿಬ್ಬರೂ ಭೇಟಿಯಾಗುತ್ತೇವೆಂಬ ಸಣ್ಣ ನಿರೀಕ್ಷೆಯೂ ಇರಲಿಲ್ಲ. ಎಲ್ಲಿಗೋ ಹೊರಟಿದ್ದ ನಾನು, ನನ್ನ ದಾರಿಯನ್ನು ನಿನ್ನೆಡೆಗೆ ತಿರುಗಿಸಲು, ನಿನ್ನ ಸಣ್ಣ ಆಹ್ವಾನವಷ್ಟೇ ಸಾಕಾಗಿತ್ತು. ಅದು ಹೇಳಿ ಕೇಳಿ ಮಳೆಗಾಲ. ಮಳೆಯ ಬಿರುಸಿಗೆ, ರಸ್ತೆಯಲ್ಲಿದ್ದ ವಾಹನಗಳು ಏದುಸಿರು ಬಿಡುತ್ತಾ ಇಷ್ಟಿಷ್ಟೇ ಮುಂದಕ್ಕೆ ಸಾಗುತ್ತಿದ್ದವು. ಆ ಟ್ರಾಫಿಕ್ ಜಾಮಿನ ಸಿಕ್ಕಿನಿಂದ ಬಿಡಿಸಿಕೊಂಡು ತಲುಪುವಷ್ಟರಲ್ಲಿ ಉಸ್ಸಪ್ಪಾ ಎಂದೆನಿಸಿದರೂ, ನಿನ್ನನ್ನು ನೋಡುತ್ತಿದ್ದಂತೆ ಆ ಆಯಾಸವೆಲ್ಲಾ ಮಂಗಮಾಯ.
Related Articles
Advertisement
ಅದೇ ಮೊದಲ ಬಾರಿಗೆ ನಾವು ಮೈಗೆ ಮೈ ಸೋಕುವಷ್ಟು ಹತ್ತಿರ ನಿಂತು ಅಷ್ಟು ದೂರ ಕ್ರಮಿಸಿದ್ದು ಮತ್ತು ಹತ್ತಿರವಿದ್ದಿದ್ದಕ್ಕೇ ಇರಬೇಕು ಆ ದಾರಿಯ ದೂರ ಅರಿವಿಗೇ ಬಂದಿರಲಿಲ್ಲ.
ಎಷ್ಟು ದೂರ ಆದರೂ ಸರಿ, ನಡೆಯುತ್ತೇವೆ ಎಂಬ ಆ ಕ್ಷಣದ ಹುಮ್ಮಸ್ಸಿನಲ್ಲಿ ಹೆಜ್ಜೆ ಹಾಕಿ ದಾರಿ ತಪ್ಪಿ, ತುಸು ಪೀಕಲಾಟಕ್ಕೆ ಒಳಗಾದದ್ದು ಇಂದಿಗೂ ಒಂದು ಪಾಠವೇ. ಕೊನೆಗೆ ನಮ್ಮ ನಮ್ಮ ಹಾದಿ ಹಿಡಿದು ಹೊರಡುವಾಗ ಮಳೆ ನಿಂತಿತ್ತು, ಅರಳಿದ ಕೊಡೆ ಮುದುಡಿತ್ತು,
ಅದರೊಂದಿಗೆ ಮನಸ್ಸೂ ಕೂಡಾ!
ಈಗಲೂ ಅಷ್ಟೇ; ನಿನ್ನ ಭೇಟಿಗೆಂದು ಹೊರಡುವ ಮುನ್ನ, ದೇವರೇ ಪ್ಲೀಸ್ ಮಳೆ ಬರಲಿ, ಜೊತೆಗೆ ಅವಳು ಕೊಡೆ ಮರೆತು ಬರಲಿ ಎಂದು ಪ್ರಾರ್ಥಿಸುತ್ತೇನೆ. ಹಾಗಾದರೂ, ಸಣ್ಣಗೆ ಸುರಿಯುವ ಮಳೆಯಲ್ಲಿ , ಒಂಟಿ ಕೊಡೆಯ ಕೆಳಗೆ ಒಟ್ಟೊಟ್ಟಿಗೆ ನಿಲ್ಲುವ ಅನುಭೂತಿಯನ್ನು ಮತ್ತೂಮ್ಮೆ ದಕ್ಕಿಸಿಕೊಳ್ಳುವ ಹಿತವಾದ ಹಪಾಹಪಿಯದು.
– ಸಂದೇಶ್ ಎಚ್ ನಾಯ್ಕ…, ಹಕ್ಲಾಡಿ, ಕುಂದಾಪುರ