Advertisement

ಎಲ್ಲರೂ ಧರ್ಮ ಮಾರ್ಗದಲ್ಲಿ ನಡೆಯಿರಿ

03:56 PM Aug 26, 2019 | Suhan S |

ತುಮಕೂರು: ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ನಡೆಯಬೇಕು. ಅನ್ಯಾಯ, ಅಧರ್ಮದ ಮಾರ್ಗದಲ್ಲಿ ನಡೆದರೆ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ. ಅಧರ್ಮದ ಮಾಗದಲ್ಲಿ ನಡೆದವರ ಸ್ಥಿತಿ ಏನಾಗಿದೆ ಎಂಬುದು ಇತಿಹಾಸವನ್ನು ಅವಲೋಕಿಸಿದರೆ ತಿಳಿಯುತ್ತದೆ ಎಂದು ಹೊಳಕಲ್ ಮಠದ ರಮಾನಂದ ಶ್ರೀಗಳು ನುಡಿದರು.

Advertisement

ನಗರದ ಗಾಜಿನ ಮನೆಯಲ್ಲಿ ಶ್ರೀ ಕೃಷ್ಣ ಕಲಾಸಂಘದಿಂದ ಏರ್ಪಡಿಸಿದ್ದ 2ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಕುರುಕ್ಷೇತ್ರ ನಾಟಕ ಉದ್ಘಾಟಿಸಿ ಮಾತನಾಡಿದರು.

ಧರ್ಮಕ್ಕೆ ಧಕ್ಕೆಯಾದರೆ ಶ್ರೀಕೃಷ್ಣನ ಆಗಮನ: ಧರ್ಮ ಮುಳುಗಿ ಅಧರ್ಮ ಮೇಲುಗೈ ಪಡೆದಾಗ ಶ್ರೀಕೃಷ್ಣ ಅವತರಿಸುತ್ತಾನೆ. ಶ್ರೀ ಕೃಷ್ಣ ಎಂದಿಗೂ ಅಧರ್ಮ ಮಾರ್ಗದಲ್ಲಿ ನಡೆಯುವವರನ್ನು ಪ್ರೋತ್ಸಾಹಿಸಲಿಲ್ಲ. ಅವರಿಗೆ ತಕ್ಕ ಶಿಕ್ಷೆ ವಿಧಿಸಿದ. ಧರ್ಮ ತುಳಿದು ಅನ್ಯಾಯ ಮಾರ್ಗದಲ್ಲಿ ನಡೆಯುವವರಿಗೆ ತಕ್ಕಶಾಸ್ತಿ ಮಾಡುತ್ತೇನೆ ಎಂದು ಶ್ರೀಕೃಷ್ಣ ಹೇಳಿದ್ದ. ಇದು ಈ ಹಿಂದೆ ಆಗಿ ಹೋಗಿರುವ ಸಂದರ್ಭಗಳನ್ನು ನೋಡಿದಾಗ ಜ್ಞಾಪಕಕ್ಕೆ ಬರುತ್ತದೆ. ಹೀಗಾಗಿ ಯಾರೂ ಸಹ ಅನ್ಯಾಯ, ಅಕ್ರಮಗಳಿಗೆ ಪ್ರೋತ್ಸಾಹಿಸಬಾರದು. ಎಲ್ಲರೂ ನ್ಯಾಯ ಮಾರ್ಗದಲ್ಲಿಯೇ ನಡೆಯುವಂತಾಗಬೇಕು ಎಂದರು.

ಕೃಷ್ಣನಿಮದ ಆಯುಧವಿಲ್ಲದೆ ಯುದ್ಧ: ಜಗತ್ತಿನಲ್ಲಿ ಯಾರಾದರೂ ಆಯುಧ ಇಲ್ಲದೆ ಯುದ್ಧ ಮಾಡಿರುವ ದೈವಿ ಪುರುಷನಿದ್ದರೆ ಅದು ಶ್ರೀಕೃಷ್ಣ ಮಾತ್ರ. ಆಯುಧಗಳನ್ನು ಬಳಸದೆ ಆತ ಯುದ್ಧದಲ್ಲಿ ಹಲವರಿಗೆ ಪಾಠ ಕಲಿಸಿದ. ಯುದ್ಧದಿಂದ ಏನೆಲ್ಲಾ ಅನಾಹುತ ಸಂಭವಿಸುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಎಚ್ಚರಿಸುತ್ತಾ ಬಂದಿದ್ದ. ಆದರೂ ಶ್ರೀಕೃಷ್ಣನ ಮಾತಿಗೆ ಬೆಲೆ ಕೊಡದೆ ದುರಹಂಕಾರಿಗಳಾಗಿ ಕೆಲವರು ಮೆರೆದ ಕಾರಣ ಅದಕ್ಕೆ ತಕ್ಕ ಪ್ರಾಯಶ್ಚಿತ ಅನುಭವಿಸಬೇಕಾಯಿತು ಎಂದ‌ು ಹೇಳಿದರು.

ಕಾಲ ಬದಲಾದಂತೆ ಮನುಷ್ಯರ ನಂಬಿಕೆಗಳೂ ಬದಲಾಗುತ್ತಿವೆ. ಕುವೆಂಪು ಅವರ ರಾಮಾಯಣ ದರ್ಶನಂ ಕೃತಿ ಓದಿದಾಗ ತ್ರೇತಾಯುಗ, ದ್ವಾಪರ ಯುಗದ ಆಡಳಿತವನ್ನು ಯಾರು ನಡೆಸುತ್ತಿದ್ದರು? ಕಲಿಯುಗದಲ್ಲಿ ಶೂದ್ರರ ಪಾತ್ರವೇನು ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ಅವಕಾಶ ಮತ್ತು ಧ್ವನಿ ಇಲ್ಲದವರು ಕಲಿಯುಗದಲ್ಲಿ ಸ್ಥಾನ ಪಡೆದುಕೊಳ್ಳುತ್ತಿರುವುದು ಬದಲಾದ ಸನ್ನಿವೇಶಕ್ಕೆ ಸಾಕ್ಷಿ ಎಂದು ನುಡಿದರು.

Advertisement

ಸಂಕುಚಿತ ಮನೋಭಾವ ಬಿಡಬೇಕಿದೆ: ಸಾಹಿತಿ ಎನ್‌.ನಾಗಪ್ಪ ಮಾತನಾಡಿ, ಶ್ರೀಕೃಷ್ಣ ಎಂದಿಗೂ ಯುದ್ಧವನ್ನು ಪ್ರೋತ್ಸಾಹಿಸಿಲ್ಲ. ಬದಲಿಗೆ ಮನುಕುಲದ ಒಳಿತಿಗೆ ಶ್ರಮಿಸಿದವನು. ಆದರೆ ಸ್ವಾರ್ಥ ಸಾಧನೆಯ ಕೆಲವರಿಂದಾಗಿ ಇಡೀ ಮನುಕುಲವೇ ನಾಶವಾಗುವಂತಹ ಸ್ಥಿತಿ ತಲುಪಿದ್ದನ್ನು ಪುರಾಣಗಳಲ್ಲಿ ನೋಡಿದ್ದೇವೆ. ಇಂದೂ ಸಹ ಇಂತಹ ಸ್ವಾರ್ಥ ಸಾಧನೆಯ ಮನುಷ್ಯರು ಇದ್ದಾರೆ. ಸಂಕುಚಿತ ಮನೋಭಾವನೆ ಬಿಟ್ಟು ದೊಡ್ಡವರಾಗಿ ಎಲ್ಲರೂ ಬೆಳೆಯಬೇಕಾಗಿದೆ. ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ ಎಂದರು.

ಉನ್ನತ ಶಿಕ್ಷಣದತ್ತ ಹೆಚ್ಚು ಗಮನ ಹರಿಸಲಿ: ಗುಬ್ಬಿ ತಾಲೂಕು ಯಾದವ ಮುಖಂಡ ಜಿ.ಎನ್‌.ಬೆಟ್ಟಸ್ವಾಮಿ ಮಾತನಾಡಿ, ಗೊಲ್ಲ ಜನಾಂಗ ಇಂದಿಗೂ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಮಕ್ಕಳು ಉನ್ನತ ಶಿಕ್ಷಣ ಮಾಡುವವರು ತುಂಬಾ ವಿರಳವಾಗಿದ್ದಾರೆ. ಉನ್ನತ ಶಿಕ್ಷಣದತ್ತ ಹೆಚ್ಚು ಗಮನ ಹರಿಸಬೇಕು. ಶ್ರೀಕೃಷ್ಣ ಜನ್ಮಾಷ್ಟಮಿಯಂತಹ ಆಚರಣೆಗಳ ಮೂಲಕ ಎಲ್ಲರೂ ಒಂದು ಗೂಡಬೇಕು. ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದ‌ು ತಿಳಿಸಿದರು.

ನಿವೃತ್ತ ಐಎಫ್ಎಸ್‌ ಅಧಿಕಾರಿ ಬಿ.ಚಿಕ್ಕಪ್ಪಯ್ಯ ಮಾತನಾಡಿ, ಶ್ರೀಕೃಷ್ಣ ದುಷ್ಟರ ಪಾಲಿಗೆ ಹೇಗೆ ಸಿಂಹ ಸ್ವಪ್ನವಾಗಿದ್ದನು ತನ್ನ ತಂತ್ರಗಾರಿಕೆಯಿಂದಲೇ ದುರುಳರನ್ನು ಹೇಗೆ ಸಂಹರಿಸಿದ ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ಶ್ರೀಕೃಷ್ಣನ ಆದರ್ಶಗಳು ಸರ್ವವ್ಯಾಪಿ ಎಂದರು.ಶ್ರೀ ಚಿಕ್ಕಣ್ಣಸ್ವಾಮಿ ಸುಕ್ಷೇತ್ರದ ಧರ್ಮದರ್ಶಿ ಡಾ.ಪಾಪಣ್ಣ, ಜಿಪಂ ಸದಸ್ಯೆ ಯಶೋ ಧಮ್ಮ ಶಿವಣ್ಣ, ಮಹಾನಗರ ಪಾಲಿಕೆ ಸದಸ್ಯೆ ಚಂದ್ರ ಕಲಾ ಪುಟ್ಟರಾಜು, ನಿವೃತ್ತ ಪ್ರಾಂಶುಪಾಲ ಬಿ. ಜನಾರ್ಧನ್‌, ಶಿರಾ ತಾಲೂಕು ಯಾದವ ಸಮಾಜದ ಅಧ್ಯಕ್ಷ ಜಿ.ಶ್ರೀನಿವಾಸ ಬಾಬು, ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಶ್ರೀನಿವಾಸ್‌, ವಕೀಲ ಸಾ.ಚಿ. ರಾಜಕುಮಾರ್‌, ಶ್ರೀ ಚಿಕ್ಕಣ್ಣಸ್ವಾಮಿ ಕ್ಷೇತ್ರದ ಶಿವ ಕುಮಾರಸ್ವಾಮಿ, ಉಪನ್ಯಾಸಕ ನರಸಪ್ಪ, ಪ್ರಾಂಶುಪಾಲ ಬಿ.ಚಂದ್ರಯ್ಯ, ತುಮಕೂರು ವಿವಿ ಉಪನ್ಯಾಸಕ ಬೆಳವಾಡಿ ಶಿವಣ್ಣ, ವಿಕ್ಟೋರಿಯಾ ಆಸ್ಪತ್ರೆಯ ಡಾ. ಡಿ.ಎಂ ಜ್ಞಾನೇಂದ್ರ, ಅಂತಾರಾಷ್ಟ್ರೀಯ ಯೋಗಪಟು ದೇವಿಕಾ, ಶ್ರೀಕೃಷ್ಣ ಕಲಾಸಂಘದ ಅಧ್ಯಕ್ಷ ಚಿಕ್ಕಪ್ಪಯ್ಯ ಸೇರಿದಂತೆ ವಿವಿಧ ಮುಖಂಡರುಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next