ಅಲ್ ರಯ್ಯಾನ್: ಬಿ ಗುಂಪಿನ ಮಹತ್ವದ ಪಂದ್ಯದಲ್ಲಿ ವೇಲ್ಸ್ ವಿರುದ್ಧ ಇರಾನ್ 2-0 ಗೋಲುಗಳಿಂದ ಜಯ ಸಾಧಿಸಿದೆ. ಇದು ವೇಲ್ಸ್ ಎದುರಿಸಿದ ಮೊದಲ ಸೋಲು. ಇದಕ್ಕೂ ಹಿಂದಿನ ಪಂದ್ಯದಲ್ಲಿ ಅದು ಡ್ರಾ ಸಾಧಿಸಿತ್ತು.
ಕೂಟದಿಂದ ಹೊರಬೀಳುವ ಅಪಾಯದಲ್ಲಿರುವ ವೇಲ್ಸ್‌ಗೆ ಇನ್ನು ಒಂದು ಪಂದ್ಯ ಮಾತ್ರ ಬಾಕಿಯಿದೆ. ಬಲಿಷ್ಠ ಇಂಗ್ಲೆಂಡ್ ವಿರುದ್ಧದ ಆ ಪಂದ್ಯದಲ್ಲಿ ವೇಲ್ಸ್ ಗೆಲ್ಲಲೇಬೇಕಿದೆ. ಗೆದ್ದರೂ ಅದು ಅಗ್ರ 2 ತಂಡಗಳಲ್ಲಿ ಒಂದಾಗುವುದು ಬಹಳ ಕಷ್ಟವೇ ಇದೆ. ಇನ್ನು ಇರಾನ್ ಗೆಲುವು ಸಾಧಿಸಿರುವುದರಿಂದ ಅಗ್ರ 2 ತಂಡಗಳಲ್ಲಿ ಒಂದಾಗಿ ಪ್ರೀಕ್ವಾರ್ಟರ್ ಫೈನಲ್‌ಗೇರುವ ಅವಕಾಶವೊಂದು ಅದರೆದುರಿಗಿದೆ.
ಇಡೀ ಪಂದ್ಯದ ಹಣೆಬರೆಹ ನಿರ್ಧಾರವಾಗಿದ್ದೇ ನಿಗದಿತ 90 ನಿಮಿಷಗಳ ಅನಂತರ! ಅರ್ಥಾತ್ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಯಾವುದೇ ಗೋಲುಗಳಿಸದೇ ಡ್ರಾ ಸಾಧಿಸಿದ್ದವು. ನಿಗದಿತ ಅವಧಿ ಮುಗಿದ ಮೇಲೆ ಹೆಚ್ಚುವರಿಯಾಗಿ ನೀಡಲ್ಪಟ್ಟ 11 ನಿಮಿಷಗಳಲ್ಲಿ ಇರಾನ್ ಚಮತ್ಕಾರ ಮಾಡಿತು. ರೊಜ್ಬೆಹ್ ಚೆಶ್ಮಿ 90+8ನೇ ನಿಮಿಷದಲ್ಲಿ ದಿಢೀರನೆ ಚೆಂಡನ್ನು ಗೋಲುಪೆಟ್ಟಿಗೆಯೊಳಕ್ಕೆ ಸೇರಿಸಿಯೇಬಿಟ್ಟರು. ಅದು ಇರಾನ್ ಗೆಲ್ಲುವ ಸಾಧ್ಯತೆಯನ್ನು ಖಚಿತಪಡಿಸಿತ್ತು.
ವೇಲ್ಸ್ ಈ ಆಘಾತದಿಂದಲೇ ಇನ್ನೂ ಸುಧಾರಿಸಿಕೊಳ್ಳುತ್ತಿದ್ದಾಗ ಅದಕ್ಕೆ ಇನ್ನೊಂದು ಆಘಾತ ಎದುರಾಯಿತು. ಇದಂತೂ ತೀರಾ ಅನಿರೀಕ್ಷಿತ. ಪಂದ್ಯ ಸರಿಯಾಗಿ 90+11ನೇ ನಿಮಿಷದಲ್ಲಿ ಮುಗಿಯಿತು. ಆ ಹಂತದಲ್ಲಿ ನುಗ್ಗಿಬಂದ ರಾಮಿನ್ ರೆಝಾಯಿನ್, ವೇಲ್ಸ್ ಟೆರೆಮಿ ಬಳಿಯಿಂದ ಚೆಂಡನ್ನು ಕಸಿದುಕೊಂಡು ಟಕ್ಕನೆ ಹೊಡೆತ ಬಾರಿಸಿದರು. ಮತ್ತೊಂದು ಗೋಲು. ವೇಲ್ಸ್ ಬಳಿ ಯಾವುದೇ ಉತ್ತರವೇ ಇರಲಿಲ್ಲ.
ಪಂದ್ಯದ ದ್ವಿತೀಯಾರ್ಧದಲ್ಲಿ ವೇಲ್ಸ್ ಪ್ರಮುಖ ಆಟಗಾರ ಮೂರ್ ಗೋಲು ಬಾರಿಸಲು ಬಹಳ ಯತ್ನಿಸಿದರು. ಆದರೆ ವೇಲ್ಸ್‌ನ ಇತರರು ಸೂಕ್ತವಾಗಿ ಸ್ಪಂದಿಸಲಿಲ್ಲ. ಮೂರ್‌ರನ್ನೇ ಇರಾನ್ ಆಟಗಾರರು ಸಹಜವಾಗಿ ಗುರಿಯಾಗಿಸಿಕೊಂಡಿದ್ದರು. ಈ ಹಂತದಲ್ಲಿ ಗ್ಯಾರೆತ್ ಬೇಲ್ ಕೂಡ ವಿಫಲರಾದರು. ಮೊದಲ ಪಂದ್ಯದಲ್ಲಿ ಅಮೆರಿಕ ವಿರುದ್ಧ ವೇಲ್ಸ್‌ಗೆ ಸೋಲು ತಪ್ಪಿಸಿದ್ದೇ ಬೇಲ್ ಎನ್ನುವುದನ್ನು ಮರೆಯಬಾರದು.
ಮೊದಲರ್ಧದಲ್ಲಿ ಯಾವುದೇ ತಂಡಗಳು ಗೋಲು ಬಾರಿಸಲು ಬಲವಾದ ಯತ್ನ ಮಾಡಿದಂತೆ ಕಂಡುಬರಲಿಲ್ಲ. ಇಲ್ಲಿ ಇರಾನ್ ತಂತ್ರವೊಂದು ಕೆಲಸ ಮಾಡಿತು. ಆ ತಂಡ ಅಜ್ಮೌನ್ ಎಂಬ ಆಟಗಾರನನ್ನು ಕಣಕ್ಕಿಳಿಸಿತ್ತು. ಅಜ್ಮೌನ್ ಅವಕಾಶವನ್ನು ಪೂರ್ಣ ಬಳಸಿಕೊಂಡು ಎದುರಾಳಿಯನ್ನು ಕಕ್ಕಾಬಿಕ್ಕಿ ಮಾಡಿದರು. ಕೆಲವೊಮ್ಮೆ ಗೋಲು ಬಾರಿಸಿಯೇ ಬಿಟ್ಟರು ಎಂಬ ಸನ್ನಿವೇಶ ಸೃಷ್ಟಿಸಿದ್ದರು. ಬಹಳ ಬಾರಿ ಎದುರಾಳಿಯಿಂದ ಚೆಂಡನ್ನು ಕಸಿದುಕೊಂಡು, ಗೋಲಿನ ಅಪಾಯ ತಪ್ಪಿಸಿದರು.