Advertisement

ಕರಾವಳಿ ಕಡಲಲ್ಲಿ “ವೇಲ್‌ಶಾರ್ಕ್‌’ಗಳ ಸಂರಕ್ಷಣೆಗೆ ಪಣ: ಅಳಿವಿನಂಚಿನ ವೇಲ್‌ಶಾರ್ಕ್‌ ಬಗ್ಗೆ ಜನಜಾಗೃತಿ

12:41 AM Dec 22, 2022 | Team Udayavani |

ಮಂಗಳೂರು: ಸಮುದ್ರದಲ್ಲಿ ಕಂಡುಬರುವ ಬೃಹತ್‌ ಗಾತ್ರದ ಮತ್ತು ಅಳಿವಿ ನಂಚಿನಲ್ಲಿರುವ ವೇಲ್‌ಶಾರ್ಕ್‌ ಮೀನುಗಳ ಸಂತತಿಯನ್ನು ಉಳಿಸುವ ನಿಟ್ಟಿನಲ್ಲಿ ಗುಜರಾತ್‌ನಲ್ಲಿ ನಡೆಸಲಾದ ವಿಶೇಷ ಅಭಿಯಾನ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣದ ರಾಜ್ಯಗಳಿಗೂ ಅಭಿಯಾನ ವಿಸ್ತರಣೆಯಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜತೆ ಕೇರಳ ಹಾಗೂ ಲಕ್ಷದ್ವೀಪದಲ್ಲೂ ಜಾಗೃತಿ ಮೂಡಿಸುವ ಕೆಲಸಗಳು ನಡೆಯುತ್ತಿವೆ.

Advertisement

ಕೇಂದ್ರ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ವೇಲ್‌ ಶಾರ್ಕ್‌ ಸಂರಕ್ಷಣೆಯ ಭಾಗ ವಾಗಿ 2001ರಲ್ಲಿ ಅವು ಗಳನ್ನು ಭಾರತೀಯ ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಶೆಡ್ನೂಲ್‌ 1ರಲ್ಲಿ ಸೇರ್ಪಡೆಗೊಳಿಸಿತು.

ಗುಜರಾತ್‌ನಲ್ಲಿ ಆರಂಭ
ಗುಜರಾತ್‌ನದಲ್ಲಿ 2000ನೇ ಇಸವಿಯಲ್ಲಿ ಅಲ್ಲಿನ ಸರಕಾರ ಮತ್ತು ವೈಲ್ಡ್‌ ಲೈಫ್‌ ಟ್ರಸ್ಟ್‌ ಆಫ್‌ ಇಂಡಿಯಾ (ಡಬ್ಲ್ಯೂಟಿಐ) ವತಿಯಿಂದ ವೇಲ್‌ಶಾರ್ಕ್‌ ಸಂರಕ್ಷಣೆ ಅಭಿಯಾನ ಆರಂಭವಾಯಿತು. ಕಾರಣ ವೇಲ್‌ಶಾರ್ಕ್‌ಗಳಿಗೆ ಗುಜರಾತ್‌ ಕರಾವಳಿ ನೆಚ್ಚಿನ ತಾಣ. ಅಲ್ಲಿನ ಪೂರಕ ಹವಾಗುಣದಿಂದಾಗಿ ಸಂತಾನೋತ್ಪತ್ತಿಗೆ ಗುಜರಾತ್‌ ತೀರವನ್ನೇ ಅವಲಂಬಿ ಸಿವೆ. ಅಲ್ಲಿನ ಮೀನುಗಾರರಲ್ಲಿ ನಿರಂತರ ಜಾಗೃತಿ ಮೂಡಿಸಿದ ಪರಿಣಾಮ ಸದ್ಯ ಉದ್ದೇಶ ಪೂರ್ವಕ ಶಾರ್ಕ್‌ ಹತ್ಯೆಯ ಪ್ರಮಾಣ ಶೂನ್ಯಕ್ಕೆ ತಲುಪಿದೆ.

ಗುಜರಾತ್‌ ಯಶಸ್ಸಿನ ಬಳಿಕ ದಕ್ಷಿಣ ರಾಜ್ಯಗಳಲ್ಲಿ ಇದೇ ರೀತಿಯ ಅಭಿಯಾನ ನಡೆಸಲು ಡಬ್ಲ್ಯೂಟಿಐ ಮುಂದಾಗಿದೆ. ಇಲ್ಲಿನ ಮೀನುಗಾರ ಸಮುದಾಯಗಳಿಗೆ ವೇಲ್‌ ಶಾರ್ಕ್‌ಗಳ ಕುರಿ ತಂತೆ, ಅವುಗಳ ಸಂತತಿ ನಾಶವಾಗುತ್ತಿರುವ ಬಗ್ಗೆ, ಬಲೆಗೆ ಬಿದ್ದರೆ ಏನು ಮಾಡಬೇಕು ಎಂಬ ಬಗ್ಗೆ ಬೀದಿನಾಟಕ, ಗೋಡೆ ಚಿತ್ರಗಳ ಮೂಲಕ ವಿವರಿಸಲಾಗುತ್ತಿದೆ.

ಗುಜರಾತ್‌ನಲ್ಲಿ 2005ರಿಂದ 2022ರ ಅವಧಿಯಲ್ಲಿ ಮೀನುಗಾರರು ತಮ್ಮ ಬಲೆಗೆ ಬಿದ್ದ ವೇಲ್‌ಶಾರ್ಕ್‌ಗಳನ್ನು 856 ಬಾರಿ ವಾಪಸ್‌ ಸಮುದ್ರಕ್ಕೆ ಬಿಟ್ಟಿದ್ದಾರೆ. ಬಲೆಗೆ ಬಿದ್ದರೆ ಸಂಪೂರ್ಣವಾಗಿ ಬಲೆ ಹಾಳಾಗಿ ಸಾವಿರಾರು ರೂಪಾಯಿ ನಷ್ಟವಾಗುತ್ತದೆ. ಈ ವಿಚಾರದಲ್ಲಿ ಅಲ್ಲಿನ ಸರಕಾರವೂ ಮೀನುಗಾರರ ನೆರವಿಗೆ ಬಂದು, ಹೊಸ ಬಲೆ ಖರೀದಿಗೆ ಅನುದಾನ ನೀಡುತ್ತಿದೆ. ಆದರೆ ಶಾರ್ಕ್‌ ಬಲೆಗೆ ಬಿದ್ದಿದೆ ಎನ್ನುವುದಕ್ಕೆ ದಾಖಲೆಯಾಗಿ ವೀಡಿಯೋ ಚಿತ್ರೀಕರಣ ಅಥವಾ ಫೋಟೋಗಳನ್ನು ಒದಗಿಸಬೇಕು ಎನ್ನುವುದು ಷರತ್ತು.

Advertisement

ಗುಜರಾತ್‌ನಲ್ಲಿ ಜಾಗೃತಿ ಮೂಡಿಸಿದ ಬಳಿಕ ವೇಲ್‌ಶಾರ್ಕ್‌ಗಳನ್ನು ಹಿಡಿಯುವವರ ಸಂಖ್ಯೆ ಕಡಿಮೆಯಾಗಿದೆ. ಇತರ ರಾಜ್ಯಗಳಲ್ಲೂ ಅದೇ ರೀತಿ ಬದಲಾಗಬೇಕು ಎನ್ನುವುದು ನಮ್ಮ ಉದ್ದೇಶ. ಆದ್ದರಿಂದ ಕರ್ನಾಟಕ, ಕೇರಳ, ಲಕ್ಷದ್ವೀಪದಲ್ಲಿ ಅಭಿಯಾನ ಆರಂಭಿಸಲಾಗಿದೆ. ಅಭಿಯಾನದ ಅನಂತರ ಇತ್ತೀಚೆಗೆ ತಿರುವನಂತಪುರದಲ್ಲಿ ಬಲೆಗೆ ಬಿದ್ದ ವೇಲ್‌ಶಾರ್ಕನ್ನು ಮೀನುಗಾರರು ಸಮುದ್ರ ಬಿಟ್ಟಿರುವುದು ಉತ್ತಮ ಬೆಳವಣಿಗೆ.
– ಚರಣ್‌ ಕುಮಾರ್‌, ಯೋಜನೆಯ ಕರ್ನಾಟಕ ಉಸ್ತುವಾರಿ

ಅಳಿವು ಯಾಕಾಯಿತು?
ಅನಿಯಂತ್ರಿತ ಮೀನುಗಾರಿಕೆ, ಮೀನುಗಾರರ ಬಲೆಗೆ ಸಿಲುಕಿ ಸಾಯುವುದು, ಎಣ್ಣೆ, ಕೋಳಿಗಳಿಗೆ ಆಹಾರ ತಯಾರಿಸಲು ಬೇಟೆಯಾಡುವುದು, ಹಡಗುಗಳಿಗೆ ಸಿಲುಕಿಕೊಳ್ಳುವುದು, ಸಮುದ್ರ ಮಾಲಿನ್ಯ ಮೊದಲಾದ ಕಾರಣಗಳಿಂದಾಗಿ ಇಂದು ವೇಲ್‌ ಶಾರ್ಕ್‌ ಸಂತತಿ ವಿನಾಶದ ಅಂಚಿಗೆ ತಲುಪಿದೆ.

8 ಶಾರ್ಕ್‌ಗಳ ಟ್ರ್ಯಾಕಿಂಗ್
ವೇಲ್‌ಶಾರ್ಕ್‌ ಸಂರಕ್ಷಣೆಯ ಭಾಗವಾಗಿ ಡಬ್ಲಿುಟಿಐ ಅರಬ್ಬಿ ಸಮುದ್ರದಲ್ಲಿ 8 ಶಾರ್ಕ್‌ಗಳಿಗೆ ಟ್ರ್ಯಾಕಿಂಗ್ ಅಳವಡಿಸಿ ಅವುಗಳನ್ನು ಅಧ್ಯಯನ ಮಾಡಿದೆ. ಇದರಿಂದ ಅವುಗಳು ಮಾಲ್ಡಿವ್ಸ್‌ ಕಡೆಯಿಂದ ಲಕ್ಷ ದ್ವೀಪ, ಕೇರಳ, ಕರ್ನಾಟಕ, ಮಹಾರಾಷ್ಟ್ರ ಕರಾವಳಿಗಳ ಮೂಲಕ ಗುಜರಾತ್‌ಗೆ ಹೋಗುವುದು ಪತ್ತೆಯಾಗಿದೆ. ಅಕ್ಟೋಬರ್‌-ನವೆಂಬರ್‌ ವೇಳೆ ಗುಜರಾತ್‌ಗೆ ತೀರಕ್ಕೆ ಹೋಗಿ ಫೆಬ್ರವರಿ ವರೆಗೆ ಅಲ್ಲಿದ್ದು, ಸಂತಾನೋತ್ಪತ್ತಿ ಪ್ರಕ್ರಿಯೆ ಮುಗಿಸಿ ಮತ್ತೆ ಹಿಂದಿರುಗುತ್ತವೆ.

– ಭರತ್ ಶೆಟ್ಟಿಗಾರ್

Advertisement

Udayavani is now on Telegram. Click here to join our channel and stay updated with the latest news.

Next