ಬೆಂಗಳೂರು: ಏಳು ವರ್ಷಗಳ ಹಿಂದೆ ವಕ್ಫ್ ಮಂಡಳಿಗೆ ಸಂಬಂಧಿಸಿದ ಆಸ್ತಿ ಕಬಳಿಸಿರುವ ಕುರಿತು ಅನ್ವರ್ ಮಾಣಿಪ್ಪಾಡಿ ನೀಡಿದ ವರದಿಯನ್ನು ಜಾರಿಗೊಳಿಸಲು ಇದೀಗ ಸರಕಾರ ಮುಂದಾಗಿದೆ. ವರದಿ ಅನುಷ್ಠಾನಗೊಳಿಸುವ ಕುರಿತಂತೆ ಬಿಜೆಪಿ ಶಾಸಕರ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ವರದಿಯನ್ನು ಸದನದಲ್ಲಿ ಮಂಡಿಸಲು ನಿರ್ಧರಿಸಿದೆ.
ರಾಜ್ಯದಲ್ಲಿ ವಕ್ಫ್ ಮಂಡಳಿಗೆ ಸಂಬಂಧಿಸಿದ ಆಸ್ತಿಯನ್ನು ಅಕ್ರಮವಾಗಿ ಪ್ರಭಾವಿಗಳು ಕಬಳಿಕೆ ಮಾಡಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ 2012ರಲ್ಲಿ ಅಂದಿನ ಬಿಜೆಪಿ ಸರಕಾರ ಆಗಿನ ಅಲ್ಪಸಂಖ್ಯಾಕ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ, ವಕ್ಫ್ ಆಸ್ತಿ ಕಬಳಿಕೆ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚಿಸಿತ್ತು.
54 ಸಾವಿರ ಎಕರೆಗಳಷ್ಟು ವಕ್ಫ್ ಆಸ್ತಿ ಇದ್ದು, ಅದರಲ್ಲಿ ಸುಮಾರು 29 ಸಾವಿರ ಎಕರೆ ಆಸ್ತಿಯನ್ನು ಅಕ್ರಮವಾಗಿ ಕಬಳಿಸಲಾಗಿದ್ದು, ಸರಕಾರಿ ಬೆಲೆಯಲ್ಲಿಯೇ ಸುಮಾರು 2 ಲಕ್ಷ 30 ಸಾವಿರ ಕೋ. ರೂ. ಮೌಲ್ಯದ ಆಸ್ತಿಯನ್ನು ಕಬಳಿಕೆ ಮಾಡಲಾಗಿದೆ ಎಂದು ಸುಮಾರು 7 ಸಾವಿರ ಪುಟಗಳ ವರದಿಯಲ್ಲಿ ಬೆಟ್ಟು ಮಾಡಲಾಗಿತ್ತು. ಕಾಂಗ್ರೆಸ್‌ನ ಹಿರಿಯ ಮುಖಂಡರು, ಅಲ್ಪಸಂಖ್ಯಾಕ ಮುಖಂಡರು, ಮಾಜಿ ಸಚಿವರು ಮತ್ತು ವಕ್ಫ್ ಮಂಡಳಿಯ ನಿರ್ದೇಶಕರು ಹಾಗೂ ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಸತ್ಯಕ್ಕೆ ಯಾವಾಗಲೂ ಸಾವಿಲ್ಲ ಎನ್ನುವುದಕ್ಕೆ ನನ್ನ ಈ ವರದಿ ಸಾಕ್ಷಿ. ಪ್ರಸ್ತುತ ಸರಕಾರ ಈ ವರದಿಯನ್ನು ಜಾರಿಗೊಳಿಸಲು ಮುಂದಾಗುವ ಮೂಲಕ ಸತ್ಯಕ್ಕೆ ಜಯವಾಗುತ್ತಿದೆ. ಇದರಿಂದ ಅಲ್ಪಸಂಖ್ಯಾಕ ಮುಸಲ್ಮಾನರಿಗೆ ಯಾರು ಒಳ್ಳೆಯದನ್ನು ಮಾಡುತ್ತಾರೆ. ಯಾರು ಕೆಡುಕು ಮಾಡುತ್ತಾರೆ ಎನ್ನುವುದು ಅರಿವಾಗಲಿದೆ.
-ಅನ್ವರ್ ಮಾಣಿಪ್ಪಾಡಿ, ಅಲ್ಪಸಂಖ್ಯಾಕ ಆಯೋಗದ ಮಾಜಿ ಅಧ್ಯಕ್ಷ.