Advertisement

ಜಾಹೀರಾತು ಜಗತ್ತಿನಲ್ಲಿ ಕಾಲು ಜಾರುವ ಮುನ್ನ ಎಚ್ಚರ

10:42 PM Dec 11, 2020 | Karthik A |

“ಬನ್ನಿ ಬನ್ನಿ ಈ ಪ್ರೊಡಕ್ಟ್ ಅನ್ನು ಖರೀದಿಸಿ ಇದರಿಂದ ನಿಮ್ಮ ಬುದ್ಧಿಶಕ್ತಿ ಒಂದೇ ವಾರದಲ್ಲಿ ನಾಲ್ಕು ಪಟ್ಟು ಬೆಳೆಯುತ್ತದೆ ನೀವೇ ಈ ಜಗತ್ತಿನ ಬುದ್ಧಿವಂತ ವ್ಯಕ್ತಿಗಳಾಗುವಿರಿ’ ಎಂದೇ ಪ್ರಾರಂಭವಾಗುವ ಜಾಹೀರಾತುಗಳು ನಮ್ಮಲ್ಲಿ ಎಲ್ಲಿಲ್ಲದ ಆಸಕ್ತಿಯನ್ನು ಮೂಡಿಸುತ್ತವೆ.

Advertisement

ನಾವು ಇಂದು ಎಲ್ಲಿ ಹೋದರೂ ಈ ಜಾಹೀರಾತುಗಳು ನಮ್ಮ ನೆರಳಿನಂತೆ ನಾವು ಹೋದಲ್ಲಿ ಬಂದಲ್ಲಿ ಎಲ್ಲ ಕಡೆ ಕಾಣಿಸುತ್ತವೆ. ನಾವು ಬಳಸುವ ಸೂಜಿ, ದಾರದಿಂದ ಹಿಡಿದು ಆಕಾಶದಲ್ಲಿರುವ ವಿಮಾನದವರೆಗೆ ಜಾಹೀರಾತುಗಳು ಸಾಮಾನ್ಯ. ಹಾಗಾದರೆ ಈ ಜಾಹೀರಾತು ಎಂದರೇನು? ಅದನ್ನು ಯಾವ ಕಾರಣಕ್ಕಾಗಿ ಬಳಸಲಾಗುತ್ತದೆ? ಎಂದು ತಿಳಿದುಕೊಳ್ಳುವುದು ಪ್ರತೀ ಬಳಕೆದಾರನ ಕರ್ತವ್ಯ.

ಜಾಹೀರಾತುಗಳು ಇರುವುದು ವಸ್ತುಗಳನ್ನು ಜನರು ಹೆಚ್ಚೆಚ್ಚು ಪ್ರಮಾಣದಲ್ಲಿ ಖರೀದಿಸಲಿ ಎಂದು. ಒಂದು ವಸ್ತು ಕಾರ್ಖಾನೆಯಲ್ಲಿ ಉತ್ಪಾದನೆಯಾದಾಗ ಅದನ್ನು ಜನರಿಗೆ ಮನತಟ್ಟುವಂತೆ ಮುಟ್ಟಿಸುವ ಕಾರ್ಯವನ್ನು ಈ ಜಾಹೀರಾತು ಕಂಪೆನಿಗಳು ಮಾಡುತ್ತವೆ. ಅದು ಅಂತರ್ಜಾಲದ ಮೂಲಕ ಇರಬಹುದು ಇಲ್ಲವೇ ಕರಪತ್ರಗಳ ಮೂಲಕ ಇರಬಹುದು. ಜನರ ಆಕರ್ಷಣೆ ಅವರ ಮೊದಲ ಗುರಿ. ಅದರಲ್ಲಿ ಲಾಭಗಳಿಸುವುದು ಅವರ ಎರಡನೆ ಗುರಿಯಾಗಿರುತ್ತದೆ. ಅದಕ್ಕಾಗಿಯೇ ಅವರು ತಮ್ಮ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಗ್ರಾಹಕರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸುತ್ತಾರೆ. ಹೀಗೆ ವಸ್ತುವಿನ ಮಾರಾಟಕ್ಕೆ ಮತ್ತು ಲಾಭಕ್ಕೆ ಈ ಜಾಹೀರಾತು ಅತ್ಯವಶ್ಯಕ ಎನಿಸಿಕೊಂಡಿವೆ.

ಆದರೆ ಕೆಲವೊಂದು ಜಾಹೀರಾತುಗಳು ಎಷ್ಟೊಂದು ಆಕರ್ಷಕವಾಗಿರುತ್ತದೆಯೆಂದರೆ ಜನರು ಅದರ ಮೋಡಿಗೆ ಆಕಸ್ಮಿಕವಾಗಿ ಸಿಲುಕಿ ಹೋಗುತ್ತಾರೆ. ಜಾಹೀರಾತು ಕಂಪೆನಿಗಳ ಗುರಿ ವಸ್ತುಗಳ ಮಾರಾಟ ಮತ್ತು ಲಾಭ ಅಷ್ಟೇ. ಅದಕ್ಕಾಗಿ ಅವರು ದೇವರುಗಳ ಹೆಸರಿನಿಂದ ಹಿಡಿದು ಜನರು ಇಷ್ಟ ಪಡುವ ಸಿನೆಮಾ ನಾಯಕ-ನಾಯಕಿಯರನ್ನು ಜಾಹೀರಾತಿಗಾಗಿ ಬಳಸಿಕೊಳ್ಳುತ್ತಾರೆ. ಅದನ್ನು ನೋಡಿದ ನಾವು ನಮ್ಮ ನಾಯಕ-ನಾಯಕಿಯರು ಬಳಸುವಂಥ ವಸ್ತುಗಳನ್ನೇ ಖರೀದಿಸಲು ಮುಂದಾಗುತ್ತೇವೆ. ಅವರು ತೋರಿಸುವ ದೃಶ್ಯವನ್ನು ನೋಡಿ ನಮಗೆ ನಾವೇ ಪಂಗನಾಮ ಎಳೆದುಕೊಳ್ಳುತ್ತವೆ. ಜಾಹೀರಾತು ಬಂದಾಗ ಅದನ್ನು ನೋಡಿ ಅಲ್ಲಿರುವಂಥ ವಸ್ತುಗಳನ್ನು ಮನೆಗೆ ತಂದು ಬಳಸಿದಾಗಲೆ ಗೊತ್ತಾಗುವುದು ಅದರ ನೈಜ ಸ್ವರೂಪ. ಈ ಜಾಹೀರಾತು ಜಗತ್ತು ಒಂದು ದೂರದ ಬೆಟ್ಟವಿದ್ದಂತೆ ಅದರ ಹತ್ತಿರಕ್ಕೆ ಹೋದಾಗಲೇ ಅದನ್ನು ಹತ್ತಿದಾಗಲೆ ನಮಗೆ ಕಲ್ಲು, ಮುಳ್ಳು, ಮಣ್ಣು ಇವುಗಳ ಪರಿಚಯವಾಗುವುದು.

ಹಾಗಾಗಿ ನಾವು ಯಾವುದೇ ವಸ್ತುವನ್ನು ಖರೀದಿಸುವಾಗ ಜಾಹೀರಾತುಗಳಿಗೆ ಅಥವಾ ಅಲ್ಲಿ ಬರುವ ನೆಚ್ಚಿನ ವ್ಯಕ್ತಿಗಳಿಗೆ ಮರುಳಾಗದೆ ನಮ್ಮ ಜಾಣ್ಮೆಯಿಂದ ವಸ್ತುಗಳನ್ನು ಖರೀದಿಸಬೇಕು. ವಸ್ತುಗಳಿಗೆ ಬರುವ ಜಾಹೀರಾತುಗಳಲ್ಲಿ ಎಷ್ಟು ಸತ್ಯವಿದೆ ಎಷ್ಟು ಮಿಥ್ಯವಿದೆ ಎಂದು ಯೋಚಿಸಿ ಮುಂದುವರಿಯಬೇಕು. ಬೇರೆಯವರು ನಮ್ಮ ತಲೆಗೆ ಟೋಪಿ ಹಾಕುವ ಮೊದಲು ನಾವು ಅದರ ಬಗ್ಗೆ ಅರಿಯಬೇಕು. ಯಾವುದೇ ವಸ್ತುವಿನ ಬಗ್ಗೆ ಜಾಹೀರಾತುಗಳು ಬಂದಾಗ ಅದನ್ನು ವೀಕ್ಷಿಸಿ ಪರಿಶೀಲಿಸಿ ಅನಂತರ ಮುಂದುವರಿಯುವುದು ಒಳ್ಳೆಯದು.

Advertisement


ಮಧುರಾ ಭಟ್‌, ಎಸ್‌ಡಿಎಂ ಕಾಲೇಜು, ಉಜಿರೆ 

Advertisement

Udayavani is now on Telegram. Click here to join our channel and stay updated with the latest news.

Next