ಈಗ ರಜೆಗೆಂದು ಊರಿಗೆ ಹೋದವಳು ನನ್ನನ್ನು ಮರೆತೆಯಾ? ನೀನು ಆಡಿದ ಮಾತುಗಳನ್ನೆ ಮರೆತೆಯಾ? ನಿಜವಾಗಿಯೂ ನನ್ನನ್ನು ಪ್ರೀತಿಸಿದ್ದೆಯಾ? ಅಪ್ಪ -ಅಮ್ಮನ ಕಟ್ಟಳೆಯಲ್ಲಿರುವ ಕಾರಣದಿಂದ ಫೋನ್ ಮಾಡದೆ, ಮೆಸೇಜ್ ಕಳಿಸದೆ ಉಳಿದಿದ್ದೀಯ? ಅಥವಾ ನನ್ನನ್ನು ಮರೆತೇ ಬಿಟ್ಟೆಯಾ?
ಪಾಚು,
ನಿನಗೆ ನೆನಪಿದೆಯಾ, ನಾವಿಬ್ಬರೂ ಕೂಡಿ ಓಡಾಡಿದ ಜಾಗ, ತಿಂದ ತಿನಿಸು, ಆಡಿದ ಮಾತು, ಒಬ್ಬರಿಗೊಬ್ಬರು ಕಾದು ನಿಂತ ಘಳಿಗೆ ಎಲ್ಲವೂ ಕನಸೇನೋ ಎನಿಸ ಹತ್ತಿದೆ. ನನಗಾಗಿ ನೀನು, ನಿನಗಾಗಿ ನಾನು ಆ ಬ್ರಹ್ಮ ಬರೆದಾಯಿತು ಎಂದು ಹಾಡನ್ನು ಗುನುಗುತ್ತಲೇ ನಿನ್ನನ್ನು ಕಾತರದಿಂದ ಕಾಣಲು ಬರುತ್ತಿದ್ದೆ. ನಿನಗಾದರೂ ಅಷ್ಟೇ, ಕಣ್ಣಲ್ಲಿ ಕಾತರ, ಮನದಲ್ಲಿ ತವಕ ಇರುತ್ತಿತ್ತಾದರೂ ಏನೊಂದೂ ಇರದಂತೆ ತೋರಿಸಿ ಕೊಳ್ಳಲು ಎಚ್ಚರ ವಹಿಸುತಿದ್ದೆ. ಅದೊಂದು ದಿನ ಪಾರ್ಕ್‌ನಲ್ಲಿ ಜೊತೆಗೂಡಿ ಹೊರಟಾಗ ಮೆಲ್ಲನೆ ನೀನು ನನ್ನ ಕೈ ಹಿಡಿದುಕೊಂಡೆ. ನನಗೆ ಅದು ಅನಿರೀಕ್ಷಿತವಾಗಿತ್ತು. ಕೈ ಬಿಡಿಸಿಕೊಳ್ಳಲು ನೋಡಿದೆ. ನಿನ್ನ ಬಲವಂತದ ಹಿಡಿತದ ಮುಂದೆ ನಾನು ಸುಮ್ಮನಾಗಬೇಕಾಯಿತು. “ಯಾಕೆ, ಕೈ ಹಿಡೀಬಾರದಿತ್ತಾ?’ ನಿನ್ನ ಪ್ರಶ್ನೆಗೆ ಯಾರಾದ್ರೂ ನೋಡಿದ್ರೆ… ಎಂದು ಭಯದಿಂದಲೇ ಹೇಳಿದ್ದೆ. ಆ ಮಾತು ಕೇಳಿ-ಗಂಡಸಾಗಿ ಹುಟ್ಟಿ ಹೆದರಿಕೋತಿಯಲ್ಲೋ ಎಂದು ಹೇಳಿದವಳೇ ಪಕಪಕನೇ ನಕ್ಕಿದ್ದೆ. ಆ ನಗುವನ್ನು, ನನಗೇಕೋ ಇನ್ನೂ ಮರೆಯಲು ಸಾಧ್ಯವಾಗಿಲ್ಲ.
ಸಿನಿಮಾಕ್ಕೆಂದು ಹೋದಾಗ ಇಬ್ಬರೂ ಮೈಗೆ ಮೈ ಅಂಟಿಸಿಕೊಂಡು ಕೂತಾಗಲೂ ಅಷ್ಟೇ. ಹಿಂದು ಮುಂದು ಎನೂ ನೋಡದೇ ನೀನೊಬ್ಬಳೇ ಜೋರಾಗಿ ಮಾತನಾಡುತಿದ್ದೆ. ನಿನ್ನೊಂದಿಗೆ ಅನೇಕ ಬಾರಿ ಒಂಟಿಯಾಗಿ ಸಿಕ್ಕಿದ್ದೇನೆ. ಎಂದೂ ಸಭ್ಯತೆಯ ಗೆರೆಯನ್ನು ಮೀರಲಿಲ್ಲ. ಐ ಲವ್ ಯೂ ಕಣೋ ಎಂದು ಹೃದಯ ತುಂಬಿ ಹೇಳಿದಾಗ ನನಗೊಂದು ಧನ್ಯತಾಭಾವ.
ಆದರೆ, ಈಗ ರಜೆಗೆಂದು ಊರಿಗೆ ಹೋದವಳು ನನ್ನನ್ನು ಮರೆತೆಯಾ? ನೀನು ಆಡಿದ ಮಾತುಗಳನ್ನೆ ಮರೆತೆಯಾ? ನಿಜವಾಗಿಯೂ ನನ್ನನ್ನು ಪ್ರೀತಿಸಿದ್ದೆಯಾ? ಅಪ್ಪ -ಅಮ್ಮನ ಕಟ್ಟಳೆಯಲ್ಲಿರುವ ಕಾರಣದಿಂದ ಫೋನ್ ಮಾಡದೆ, ಮೆಸೇಜ್ ಕಳಿಸದೆ ಉಳಿದಿದ್ದೀಯ? ಅಥವಾ ನನ್ನನ್ನು ಮರೆತೇ ಬಿಟ್ಟೆಯಾ? ಅಂತಹದ್ದೊಂದು ಸಂಶಯ ಮೂಡಿ ಬೇಡವೆಂದರೂ ಮನಸು ಅಳತೊಡಗಿದೆ. ನಿನ್ನ ಫೋನ್ ಯಾವಾಗಲೂ ಸ್ವಿಚ್ ಆಫ್. ಅಪರೂಪಕ್ಕೆ ಚಾಲೂ ಇದ್ದರೂ ಕರೆ ಸ್ವೀಕಾರ ಮಾಡುತ್ತಿಲ್ಲ. ನಿನ್ನ ಒಂದು ಕರೆಗಾಗಿ, ಪ್ರೀತಿಯ ಮಾತಿಗಾಗಿ, ಮಧುರ ಧ್ವನಿಗಾಗಿ ಕಾತರದಿಂದ ಕಾಯುತಿದ್ದೇನೆ.
ದಯವಿಟ್ಟು ಕರೆ ಸ್ವೀಕರಿಸಿ, ಮನದ ಭಾರ ಇಳಿಸಲಾರೆಯಾ? ಪ್ಲೀಸ್!
ಭೋಜರಾಜ ಸೊಪ್ಪಿಮಠ