ಅಜೆಕಾರು: ಹಿರ್ಗಾನ ಗ್ರಾ.ಪಂ. ವ್ಯಾಪ್ತಿಯ ನೆಲ್ಲಿಕಟ್ಟೆ -ಮಂಗಿಲಾರು ನಡುವೆ ಸಂಪರ್ಕ ಕಲ್ಪಿಸುವ ಮಂಗಿಲಾರು ಸೇತುವೆಯು ಮಳೆಗಾಲದಲ್ಲಿ ಕೊಚ್ಚಿ ಹೋಗುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ. ಸೇತುವೆಯು ಸಂಪೂರ್ಣ ಶಿಥಿಲಗೊಂಡು ತಳಪಾಯ ಸಂಪೂರ್ಣ ಬಿರುಕುಬಿಟ್ಟಿದೆ.
ಮಂಗಿಲಾರು ಭಾಗದಲ್ಲಿ ಸುಮಾರು 500ರಷ್ಟು ಮನೆಗಳಿದ್ದು ಪ್ರತಿನಿತ್ಯ ನೂರಾರು ವಾಹನಗಳು ಈ ಸೇತುವೆ ಮೂಲಕವೆ ಸಂಚರಿಸುತ್ತವೆ. ಅಲ್ಲದೆ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಹಾಡಿ ಗರಡಿ ಮತ್ತು ವಾಸುದೇವ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಇದಾಗಿದ್ದು ಸೇತುವೆ ಕೊಚ್ಚಿ ಹೋದಲ್ಲಿ ಧಾರ್ಮಿಕ ಕೇಂದ್ರಗಳ ಸಂಪರ್ಕ ಕಡಿದು ಹೋಗುತ್ತದೆ.
ಮಳೆಗಾಲದಲ್ಲಿ ಹೆಚ್ಚಿನ ಅವಧಿಯಲ್ಲಿ ಈ ಸೇತುವೆಯು ಮಳೆ ನೀರಿನಲ್ಲಿ ಮುಳುಗುತ್ತಿದ್ದು ವಿಶಾಲ ಸೇತುವೆ ನಿರ್ಮಿಸುವಂತೆ ಸ್ಥಳೀಯರು ಹಲವು ದಶಕಗಳಿಂದ ಮನವಿ ಮಾಡಿದರೂ ನಿಷ್ಪ್ರಯೋಜಕವಾಗಿದೆ.
Advertisement
ಸುಮಾರು 70 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ಸೇತುವೆಯ ಆಧಾರಸ್ತಂಭಗಳನ್ನು ಕಲ್ಲಿನಿಂದ ನಿರ್ಮಿಸ ಲಾಗಿದ್ದು ಇದು ಶಿಥಿಲಗೊಂಡು ಬಹುತೇಕ ಕಲ್ಲುಗಳು ಈಗಾಗಲೇ ನೀರು ಪಾಲಾಗಿವೆ. ಮಳೆಗಾಲದಲ್ಲಿ ಸುರಿಯುವ ಭಾರೀ ಮಳೆಗೆ ಪ್ರವಾಹ ಬಂದಲ್ಲಿ ಕುಸಿತದ ಹಂತದಲ್ಲಿರುವ ಸ್ತಂಭಗಳು ಕೊಚ್ಚಿಹೋಗಿ ಸಂಪರ್ಕ ಕಡಿತ ಉಂಟಾಗಲಿದೆ.
ಗ್ರಾಮ ಸಭೆಯಲ್ಲಿ ನಿರ್ಣಯ
ಸ್ಥಳೀಯರ ಅತೀ ಅಗತ್ಯದ ಸೇತುವೆ ಇದಾಗಿದ್ದು ಈಗಾಗಲೇ ಹಲವು ಬಾರಿ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೆ ಶಾಸಕರಿಗೂ ಮನವಿ ಮಾಡಲಾಗಿದೆ. ದಶಕಗಳಿಂದ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ.
-ಸತೀಶ್ ಕುಲಾಲ್ ನೆಲ್ಲಿಕಟ್ಟೆ, ಸ್ಥಳೀಯರು
ಮನವಿಗೆ ಸ್ಪಂದಿಸಿಲ್ಲ
ಮಂಗಿಲಾರು ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು ಯಾವುದೇ ಹಂತದಲ್ಲಿ ಕುಸಿತಗೊಳ್ಳುವ ಹಂತದಲ್ಲಿದೆ. ವಿಶಾಲ ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬೇಕಾಗಿರುವುದರಿಂದ ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಈಗಾಗಲೇ ಹಲವು ಭಾರಿ ಮನವಿ ಮಾಡಲಾಗಿದೆ. ಮೊದಲ ಪ್ರಾಶಸ್ತ್ಯ ಕಾಮಗಾರಿ ನಡೆಸುವ ಅಗತ್ಯವಿದೆ.
-ಸಂತೋಷ್ ಕುಮಾರ್ , ಅಧ್ಯಕ್ಷರು, ಗ್ರಾ.ಪಂ.ಹಿರ್ಗಾನ