ತುಂಬಾ ದಿನಗಳಾಯ್ತಲ್ಲ ನಿನಗೆ ಪತ್ರ ಬರೆದು? ಮತ್ತೇನು ವಿಶೇಷ ಅಂತ ಕೇಳಬೇಡ. ಇನ್ನೇನಿರುತ್ತೆ ನನ್ನಂಥವನಿಗೆ, ನಿನ್ನ ಧ್ಯಾನವೊಂದನ್ನು ಬಿಟ್ಟರೆ. ಹೊರಗೆ ಧೋ ಎಂದು ಸುರಿಯುತ್ತಿರೋ ಮಳೆ, ಮನಸ್ಸಿನೊಳಗೆ ನಿನ್ನ ನೆನಪುಗಳ ಜಡಿ ಮಳೆ. ಹೊರಗೆ ಸುರಿವ ಮಳೆ, ಇಳೆಯ ಕೊಳೆಯನ್ನೆಲ್ಲ ತೊಳೆದು ನವ ವಧುವಿನಂತೆ ಕಂಗೊಳಿಸುವಂತೆ ಮಾಡುತ್ತಿದ್ದರೆ, ನಿನ್ನ ಮಧುರ ನೆನಪುಗಳು ಮನದಲ್ಲಿ ಬೆಚ್ಚನೆಯ ಭಾವ ತಂದಿಟ್ಟು ಹೊಸ ಪ್ರೇಮ ಕಾವ್ಯ ಬರೆಯುವಂತೆ ಮಾಡುತ್ತಿವೆ.
ಎಲ್ಲವನ್ನೂ ಬಿಟ್ಟು ಸನ್ಯಾಸಿಯಾಗಬೇಕು ಅಂತಿದ್ದ, ನೂರು ಜನರ ಮಧ್ಯೆ ಇದ್ದರೂ ಒಬ್ಬಂಟಿಯಾಗಲು ಬಯಸುತ್ತಿದ್ದ ನಾನು, “ನೀನೇ ಸರ್ವಸ್ವ’ ಅನ್ನುವಂತಾಯ್ತು ನೋಡು. ಅದೇನು ಮೋಡಿ ಇದೆಯೋ ಆ ನಿನ್ನ ಕಂಗಳಲ್ಲಿ. ಹುಣ್ಣಿಮೆ ಚಂದ್ರನ ಬೆಳಕಿಗೆ ಸಮುದ್ರದ ಅಲೆಗಳು ಭೋರ್ಗರೆಯುವಂತೆ, ನಿನ್ನ ಹೆಸರು ಕೇಳಿದರೆ ಸಾಕು; ಮನಸ್ಸಿನ ಸುಪ್ತ ಭಾವನೆಗಳೆಲ್ಲ ಹುಚ್ಚೆದ್ದು ಕುಣಿಯುತ್ತಿದ್ದವು. ಬಿರುಗಾಳಿಯಂತೆ ಒಬ್ಬಂಟಿ ಅಲೆಯುತ್ತಿದ್ದವನನ್ನು, ಎಲ್ಲರೂ ಇಷ್ಟ ಪಡುವ ತಂಗಾಳಿಯಾಗಿಸಿದೆಯಲ್ಲ! ಎಲ್ಲಿತ್ತೇ ನಿನ್ನಲ್ಲಿ ಆ ಮಾಯಾ ಶಕ್ತಿ?
ಆಮೇಲೆ, ಇದ್ದಕ್ಕಿದ್ದಂತೆ ನನ್ನನ್ನು ಒಬ್ಬಂಟಿ ಮಾಡಿ ಹೋದೆಯೆಲ್ಲಾ, ಅವತ್ತಿನಿಂದ ನಾನು ನನ್ನೊಡನೆಯೇ ಮಾತು ಬಿಟ್ಟಿದ್ದೇನೆ. ನನ್ನನ್ನು ಪ್ರೀತಿಸುವೆಯಾ ಅಂತ ಹುಚ್ಚು ಪ್ರಶ್ನೆ ಕೇಳಿ, ಇದ್ದ ಸ್ನೇಹವನ್ನೂ ಕಳೆದುಕೊಂಡ ದುರ್ದೈವಿ ನಾನು. ಆದರೂ, ಹಿಡಿಯಷ್ಟು ಹೃದಯದಲ್ಲಿ ಸಾಗರದಷ್ಟು ಪ್ರೀತಿ ತುಂಬಿ ನಿನಗಾಗಿ ಕಾಯುತ್ತಿದ್ದೇನೆ, ಕಾಯುತ್ತಲೇ ಇರುತ್ತೇನೆ…
ಮರಳಿ ಬರುವೆಯಾ?
– ಪುರುಷೋತ್ತಮ್ ವೆಂಕಿ