Advertisement

ದೊರೆಯದ ಅನುಮತಿ: ಯಕ್ಷಾಭಿಮಾನಿಗಳ ಆಕ್ರೋಶ

08:42 PM Nov 18, 2021 | Team Udayavani |

ಕುಂದಾಪುರ: ಯಕ್ಷಕಾಶಿ ಕುಂದಾಪುರದ ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವ ತಾಲೂಕು ಆಡಳಿತದ ವಿರುದ್ಧ ಯಕ್ಷಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಖಂಡನೆ:

“ಸುದಿನ” ನ. 18ರಂದು ಈ ಕುರಿತು ವರದಿ ಮಾಡಿದ್ದು, ಕೊರೊನಾ ಕಾರಣಗಳನ್ನು ಮುಂದೊಡ್ಡಿ ಅನುಮತಿ ನೀಡಲಾಗುತ್ತಿಲ್ಲ ಎಂದು ವಿವರಿಸಿತ್ತು. ಲಕ್ಷಾಂತರ ಜನ ಸೇರುವ ಕಾರ್ಯಕ್ರಮಗಳಿಗೆ ಇಲ್ಲದ ಕೊರೊನಾ ನಿಯಮಗಳು ಯಕ್ಷಗಾನದಂತಹ ಕಾರ್ಯಕ್ರಮಕ್ಕೆ ಏಕೆ ಅಡ್ಡಿಯಾಗುತ್ತಿವೆ, ಅನುಮತಿ ವಿಚಾರದಲ್ಲಿ ಯಕ್ಷಗಾನ ಅಕಾಡೆಮಿ ಯಾಕೆ ಮಾತನಾಡುತ್ತಿಲ್ಲ, ರಾಜಕೀಯ ನಾಯಕರು ಯಾಕೆ ಈ ಕುರಿತು ಗಮನ ಹರಿಸಲಿ, ರಾಜಕೀಯ ಕಾರ್ಯಕ್ರಮಗಳಿಗೆ ಮಾತ್ರ ಹೇಗೆ ಅಧಿಕಾರಿಗಳು ನಿಯಮ ಮೀರಿ ಮೌನವಾಗುತ್ತಾರೆ ಎಂದು ಜಾಲತಾಣದ ಮೂಲಕ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ತಾಲೂಕು ಆಡಳಿತದ ಕ್ರಮಕ್ಕೆ ಸರ್ವತ್ರ ಖಂಡನೆ ವ್ಯಕ್ತವಾಗಿದೆ.

ಉಲ್ಲಂಘನೆ:

ಅಸಲಿಗೆ ನೆಹರೂ ಮೈದಾನ ನಗರದಲ್ಲಿ ಇದ್ದರೂ ಪುರಸಭೆ ಅಧೀನದಲ್ಲಿ ಇಲ್ಲ. ಅದಿನ್ನೂ ಕಂದಾಯ ಇಲಾಖೆ ವಶದಲ್ಲಿದೆ. ಅಲ್ಲಿನ ಸ್ವತ್ಛತೆ ಸೇರಿದಂತೆ ಎಲ್ಲ ಉಸಾಬರಿಯ ಹೊಣೆಯೂ ಪುರಸಭೆಯ ಹೆಗಲಿಗೆ. ಆದ್ದರಿಂದ ಪುರಸಭೆ ಅನುಮತಿ ನೀಡಲಾಗದು.  ಸರಕಾರದ ಆದೇಶದಂತೆ ಮೈದಾನದ ಜಾಗವನ್ನು ಅಥವಾ ನಗರದಲ್ಲಿ ಪೌರಾಡಳಿತ ಸಂಸ್ಥೆಗೆ ಸೇರಿದ ಜಾಗವನ್ನು ಕಂದಾಯ ಇಲಾಖೆ ಬೇಕಾಬಿಟ್ಟಿ ಹಂಚುವಂತಿಲ್ಲ. ಪುರಸಭೆಗೆ ನೀಡಬೇಕಾದ 2.6 ಎಕರೆ ಮೈದಾನದ ಜಾಗದಲ್ಲಿ ವಾಣಿಜ್ಯ ತೆರಿಗೆ ಇಲಾಖೆ, ಟೆಲಿಫೋನ್‌ ಇಲಾಖೆ, ಶಾಲೆ, ಕಾಲೇಜು, ಹಾಸ್ಟೆಲ್‌, ಯುವಜನ ಸೇವಾ ಇಲಾಖೆ ಹೀಗೆ ಬೇರೆ ಬೇರೆಯವರಿಗೆ ಕಂದಾಯ ಇಲಾಖೆ ವಿತರಿಸಿದೆ. ಪುರಸಭೆಗೆ ನೀಡಬೇಕಾದ ಜಾಗವನ್ನು ಪುರಸಭೆಯ ಅನುಮತಿಯೇ ಇಲ್ಲದೇ ಹಂಚಿದ್ದು ಈಗ ಉಳಿಕೆ ಜಾಗ ಎಷ್ಟು ಎನ್ನುವುದು ಕೂಡ ಸದ್ಯದ ಗೊಂದಲ. ಈ ಮೂಲಕ ಸರಕಾರದ ಆದೇಶ ಉಲ್ಲಂ ಸಿದ ಕಂದಾಯ ಇಲಾಖೆ ತಪ್ಪನ್ನು ಸರಿಪಡಿಸಿಕೊಳ್ಳುವ ಬದಲು ಎಸಿ ಆದೇಶ ಉಲ್ಲಂ ಸಿ ಮೈದಾನ ಹಸ್ತಾಂತರಿಸದೆ ಮೊಂಡು ಹಠದಲ್ಲಿದೆ.

Advertisement

ಪತ್ರ ವ್ಯವಹಾರ:

ಪುರಸಭೆ ಈ ಕುರಿತು ಅನೇಕ ಪತ್ರ ವ್ಯವಹಾರಗಳನ್ನು ನಡೆಸಿ ಕೊನೆಗೂ ದಾಖಲಾತಿ ತಿದ್ದಿಸುವಲ್ಲಿ ಯಶಸ್ವಿಯಾಯಿತು. 2017ರ ಎ.7ರಂದು ಸಹಾಯಕ ಕಮಿಷನರ್‌ ಅವರು ಕಾಲಂ ನಂ.9ರ ತಿದ್ದುಪಡಿಗೆ ಆದೇಶ ಮಾಡಿದರು. ಅದಾದ ಬಳಿಕ ತಾಲೂಕು ಕಚೇರಿಯಲ್ಲಿ ಈ ಪ್ರಕ್ರಿಯೆ ಮುಂದು ವರಿಯಬೇಕು. ಆದರೆ ಇಷ್ಟು ವರ್ಷಗಳಾದರೂ ಈ ಕುರಿತಾದ ಪ್ರಕ್ರಿಯೆ ನಡೆಯಲೇ ಇಲ್ಲ.

200 ಆರ್‌ಟಿಸಿ:

ಪುರಸಭೆ ಆರಂಭವಾಗಿ 49 ವರ್ಷಗಳಾಗಿ ಸುವರ್ಣ ಮಹೋತ್ಸವ ಹೊಸ್ತಿಲಲ್ಲಿ ಇದ್ದರೂ ಪುರಸಭೆಗೆ ಸಂಬಂಧಿಸಿದ 200 ಜಾಗಗಳ ಆರ್‌ಟಿಸಿಗಳಲ್ಲಿ ಇನ್ನೂ ಪಂಚಾಯತ್‌ ಬೋರ್ಡ್‌ ಪ್ರಸಿಡೆಂಟ್‌ ಎಂದೇ ದಾಖಲಾಗಿದೆ. ಇದರಲ್ಲಿ ನೆಹರೂ ಮೈದಾನವೂ ಒಂದು. ಈ ಬಗ್ಗೆ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ನಾಲ್ಕು ವರ್ಷಗಳ ಹಿಂದೆಯೇ ಆದೇಶ ನೀಡಿದ್ದರೂ ಇಲ್ಲಿನ ತಾಲೂಕು ಕಚೇರಿಯಲ್ಲಿ  ಅನುಷ್ಠಾನವಾಗಿಲ್ಲ. ಅಂದ ಹಾಗೆ ಎರಡೂ ಕಚೇರಿಗಳಿರುವುದು ಮಿನಿವಿಧಾನಸೌಧ ಎಂದು ಕರೆಯಲ್ಪಡುತ್ತಿದ್ದ  ತಾಲೂಕು ಆಡಳಿತ ಸೌಧ ಕಟ್ಟಡದಲ್ಲೇ.

ಗಜೆಟ್‌ ಅಧಿಸೂಚನೆ:

“ಸುದಿನ’ಕ್ಕೆ ಲಭಿಸಿದ ಮಾಹಿತಿಯಂತೆ 1985ರಲ್ಲಿ ಮೇ 7ರಂದು ಸರಕಾರದ ಗಜೆಟ್‌ ಪ್ರಕಟನೆಯಲ್ಲಿ ಸಾರ್ವಜನಿಕ ಉದ್ಯಾನವನ, ಆಟದ ಮೈದಾನ, ಬಯಲು ಸ್ಥಳಗಳ ಸಂರಕ್ಷಣೆ ಮತ್ತು ನಿಯಂತ್ರಣವನ್ನು ಉಪಬಂಧಿಸುವ ಅಧಿನಿಯಮವನ್ನು ಜಾರಿಗೆ ತಂದುದನ್ನು ಪ್ರಕಟಿಸಲಾಯಿತು. ಅದರಂತೆ ಅದೇ ವರ್ಷ ಜು. 24ರಂದು ಗಜೆಟ್‌ ನೋಟಿಫಿಕೇಶನ್‌ನಲ್ಲಿ ಬೆಂಗಳೂರು, ಬೆಳಗಾವಿ, ಗುಲ್ಬರ್ಗ, ಹುಬ್ಬಳ್ಳಿ, ಮಂಗಳೂರು, ಮೈಸೂರು ಜಿಲ್ಲೆಗಳ ಪುರಸಭೆ ವ್ಯಾಪ್ತಿಯ ಉದ್ಯಾನವನ, ಆಟದ ಮೈದಾನ ಹಸ್ತಾಂತರಿಸುವ ವಿಷಯವಿತ್ತು. 58ನೇ ಕಾಲಂನಲ್ಲಿ ಕುಂದಾಪುರ ನೆಹರೂ ಮೈದಾನವನ್ನು ಪುರಸಭೆಗೆ ಹಸ್ತಾಂತರಿಸಬೇಕು ಎಂದು ಪ್ರಕಟಿಸಲಾಗಿತ್ತು. 6 ಸೆಂಟ್ಸ್‌ ಜಾಗದಲ್ಲಿ ರಂಗಮಂದಿರ ನಿರ್ಮಾಣವಾಗಿದ್ದು ಆ ಜಾಗ ಮಾತ್ರ ಪುರಸಭೆ ಹೆಸರಿನಲ್ಲಿದೆ. ಉಳಿಕೆ ಜಾಗ ಹಸ್ತಾಂತರವಾಗಿಲ್ಲ.

ನೆಹರೂ ಮೈದಾನ ಇನ್ನೂ ಪುರಸಭೆಗೆ ಹಸ್ತಾಂತರವಾಗಿಲ್ಲ. ಆದ್ದರಿಂದ ಕಾರ್ಯಕ್ರಮಕ್ಕೆ ಪುರಸಭೆ ಅನುಮತಿ ನೀಡುವಂತಿಲ್ಲ. ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ಕೋರಿ ಪುರಸಭೆಗೆ ಯಾವುದೇ ಅರ್ಜಿ ಬಂದಿಲ್ಲ. -ಗೋಪಾಲಕೃಷ್ಣ ಶೆಟ್ಟಿ  ಮುಖ್ಯಾಧಿಕಾರಿ, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next