Advertisement

ಸೈನಿಕರಿಗೆ ಸಲಾಂ; ಜಯ-ವಿಜಯರಂತೆ ದೇಶ ಕಾಯುತ್ತಿದ್ದಾರೆ!

01:00 AM Feb 20, 2019 | Harsha Rao |

ಜಯ-ವಿಜಯರು ವೈಕುಂಠವನ್ನು ಕಾಯುವ ಬಾಗಿಲ ಭಟರು ಎನ್ನುವುದು ಭಾರತೀಯರ ನಂಬಿಕೆ. ಅದು ಪುರಾಣವಾದರೆ ಮಂಗಳೂರಿನ ಈ ಅವಳಿ ಸಹೋದರರು ಸೇನೆಯಲ್ಲಿದ್ದು  ದೇಶವನ್ನು  ಕಾಯುತ್ತಿರುವುದು ವಾಸ್ತವ!

Advertisement

ಮಂಗಳೂರು: ಅವರಿಬ್ಬರು ಅವಳಿ ಸಹೋದರರು. ಆದರೆ ಅವರ ಭವಿಷ್ಯದ ಕನಸು ಎರಡಾಗಿರಲಿಲ್ಲ. ಪರಿಣಾಮವಾಗಿ ಇಬ್ಬರೂ ಈಗ ದೇಶಸೇವಕ ಯೋಧರು! 

ಇವರು ಪಡೀಲು ವೀರನಗರದ ಜಯಚಂದ್ರ ಮತ್ತು ಮೇಜರ್‌ ವಿಜಯಚಂದ್ರ. ದೇಶಕ್ಕಾಗಿ ದುಡಿದ ಮಹಾನ್‌ ವ್ಯಕ್ತಿಗಳ ಬಗ್ಗೆ ತಿಳಿದು ಅವರಂತೆ ಆಗಬೇಕು ಎಂಬ ನಿರ್ಧಾರ ಬಾಲ್ಯದ ದಿನಗಳಲ್ಲೇ ಒಡಮೂಡಿತ್ತು. ಅದನ್ನು ಸಾಕಾರಗೊಳಿಸುವ ಹಾದಿಯಲ್ಲಿ ಇಬ್ಬರೂ ಪಟ್ಟ ಪರಿಶ್ರಮದಿಂದಾಗಿ ಅವಳಿ ಸಹೋದರರು ದೇಶ ಸೇವೆಯಲ್ಲಿದ್ದಾರೆ.

ಜಯಚಂದ್ರ ಗಡಿ ಭದ್ರತಾ ಪಡೆಯಲ್ಲಿ ಅಸಿಸ್ಟೆಂಟ್‌ ಕಮಾಂ ಡೆಂಟ್‌ ಆಗಿದ್ದಾರೆ. ವಿಜಯಚಂದ್ರ ಯುಎವಿ ಪೈಲಟ್‌ ಆಗಿದ್ದಾರೆ. 

ನಿವೃತ್ತ ಸಿಬಿಐ ಅಧಿಕಾರಿಯ ಪುತ್ರರು
ಭಾರತ ಸರಕಾರದ ನಿವೃತ್ತ ಕ್ಯಾಬಿನೆಟ್‌ ಸೆಕ್ರೆಟರಿಯೇಟ್‌ ಚಂದ್ರಹಾಸ್‌ ಮತ್ತು ಗೃಹಿಣಿ ಲೀಲಾವತಿ ದಂಪತಿಯ ಮೂವರು ಮಕ್ಕಳಲ್ಲಿ ಜಯ-ವಿಜಯ ಸಹೋದರರು ದೇಶ ಸೇವೆಯಲ್ಲಿದ್ದರೆ, ಸಹೋದರಿ ಜಯಶ್ರೀ ಕೂಳೂರು ಸರಕಾರಿ ಪ.ಪೂ. ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ. ಈರ್ವರು ಸಹೋದರರು ಪಣಂಬೂರು ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಾಥಮಿಕ, ಪದುವಾ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಶಿಕ್ಷಣ ಪಡೆದಿದ್ದಾರೆ. 

Advertisement

ಕನಸು ಬಲಿತದ್ದು ಕಾಲೇಜಿನಲ್ಲಿ
ಕಾಲೇಜು ಹಂತದಲ್ಲಿಯೇ ಎನ್‌ಸಿಸಿ ಯಲ್ಲಿದ್ದ ಈ ಸಹೋದರರಿಗೆ ದೇಶಸೇವೆಗೇ ಹೋಗಬೇಕೆಂಬ ಛಲ ಇತ್ತು. ಸ್ವಾತಂತ್ರÂ ಹೋರಾಟಗಾರರು, ರಾಷ್ಟ್ರ ರಕ್ಷಣೆಯ ಕುರಿತು ಮನೆಯಲ್ಲಿ ತಂದೆ ಹೇಳುತ್ತಿದ್ದ ಕತೆಗಳು ಮಕ್ಕಳಿಬ್ಬರಲ್ಲಿ ರಾಷ್ಟ್ರಸೇವೆ ಕನಸು ಕಟ್ಟಲು ಪೂರಕವಾಯಿತು. ಆ ಕನಸು ಬಲಿತದ್ದು ಕಾಲೇಜಿನಲ್ಲಿ. ಪದವಿ ಮುಗಿದ 
ತತ್‌ಕ್ಷಣವೇ ಅದಕ್ಕಾಗಿ ತಯಾರಿ ಮಾಡಿಕೊಂಡು ಪ್ರಯತ್ನದಲ್ಲಿ ಸಫಲರಾದರು. 

ಸಹೋದರರ ಸೇವೆ
ಜಯಚಂದ್ರ ಅವರು 2012ರಲ್ಲಿ ಅಸಿಸ್ಟೆಂಟ್‌ ಕಮಾಂಡೆಂಟ್‌ ಆಗಿ ಗಡಿ ಭದ್ರತಾ ಪಡೆಗೆ ನಿಯೋಜನೆಗೊಂಡರು. ಬಾಂಗ್ಲಾಗಡಿಯ ಕಿಶನ್‌ಗಂಜ್‌, ಗುಜರಾತ್‌ನ ದಂತೇವಾಡದಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಕಾಶ್ಮೀರದಲ್ಲಿದ್ದಾರೆ. ಗೃಹಿಣಿಯಾಗಿರುವ ಪತ್ನಿ ರಕ್ಷಾ ಅವರ ನಿರಂತರ ಪ್ರೋತ್ಸಾಹ ಅವರ ಸೇವಾಬಲ. 

ಮೇ| ವಿಜಯ ಚಂದ್ರ ಅವರು 2009ರಲ್ಲಿ ಸೇನಾ ತರಬೇತಿಗೆ ತೆರಳಿ 2010ರಲ್ಲಿ ಕರ್ತವ್ಯಕ್ಕೆ ನಿಯೋಜನೆ ಗೊಂಡರು. ಮೊದಲು ಉತ್ತರ ಸಿಕ್ಕಿಂನ ಇಂಡೋ-ಚೀನ ಗಡಿಯ ಹೈ ಅಲ್ಟಿಟ್ಯೂಡ್‌ ಏರಿಯಾ ಆಗಿರುವ ಬಾಗ್ರಾಕೋಟೆಯಲ್ಲಿ, ಬಳಿಕ ಹಿಮಾಚಲ ಪ್ರದೇಶದ ಪಾಲಾಂಪುರ್‌ (2012-14), ಲೇಹ್‌ ಲಢಾಕ್‌ನ ಹೈ ಅಲ್ಟಿಟ್ಯೂಡ್‌ ಏರಿಯಾದಲ್ಲಿ (2014-16) ಕರ್ತವ್ಯ ನಿರ್ವಹಿಸಿದ್ದಾರೆ. ಎರಡೂವರೆ ವರ್ಷಗಳಿಂದ ಜಮ್ಮು ಕಾಶ್ಮೀರದಲ್ಲಿ ಯುಎವಿ ಪೈಲಟ್‌ (ಡ್ರೋನ್‌ ಪೈಲಟ್‌) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಶತ್ರುಗಳ ಮೇಲೆ ಕಣ್ಗಾವಲು ಇರಿಸುವ ಡ್ರೋನ್‌ಗಳನ್ನು ಹಾರಾಡಿಸುವ ಕಾಯಕ ಅವರದು. ಪತ್ನಿ ಸ್ಮಿತಾ ಇವರ ದೇಶಸೇವೆಯ ಬೆನ್ನೆಲುಬು.

ಊರಿಗೆ ಬಂದರೆ ಹಬ್ಬದ ಸಂಭ್ರಮ
ಗಂಡು ಮಕ್ಕಳಿಬ್ಬರೂ ದೇಶಕ್ಕಾಗಿ ದುಡಿಯುವ ಬಗ್ಗೆ ನನಗೆ ಅತೀವ ಹೆಮ್ಮೆ ಇದೆ. ವರ್ಷಕ್ಕೊಂದೆರಡು ಬಾರಿ ಊರಿಗೆ ಬರುತ್ತಾರೆ. ಆಗೆಲ್ಲ ಮನೆಯಲ್ಲಿ ಹಬ್ಬದ ಸಂಭ್ರಮ. 
-ಲೀಲಾವತಿ, ಜಯ-ವಿಜಯರ ತಾಯಿ

ನನಗೂ ಸಹೋದರ ವಿಜಯನಿಗೂ ಚಿಕ್ಕಂದಿನಿಂದಲೇ ದೇಶಕ್ಕಾಗಿ ದುಡಿಯಬೇಕೆಂಬ ಆಸಕ್ತಿ ಇತ್ತು. ಅದೀಗ ನನಸಾಗಿದೆ. ಬಿಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸುತ್ತಿರುವುದರ ಬಗ್ಗೆ ಹೆಮ್ಮೆ ಇದೆ.
-ಜಯಚಂದ್ರ

ಕನಸು ನನಸಾದ ಖುಷಿ
ದೇಶಸೇವೆಯ ಕನಸು ಬಾಲ್ಯಕಾಲದಿಂದಲೂ ಇತ್ತು. ಅದಕ್ಕೆ ನೀರೆರೆದು ಪೋಷಿಸಿದ್ದು ಹೆತ್ತವರು. ಈಗ ಯುಎವಿ ಪೈಲಟ್‌ (ಡ್ರೋನ್‌ ಪೈಲಟ್‌) ಆಗುವ ಮೂಲಕ ಕನಸು ನನಸಾಗಿಸಿದ ಖುಷಿ ಇದೆ. ನನ್ನ ವೃತ್ತಿ ಆಯ್ಕೆಯಲ್ಲಿ ಪತ್ನಿಯ ನಿರಂತರ ಪ್ರೋತ್ಸಾಹವಿದೆ. ಪುತ್ರ ವಶಿಷ್‌u ಕೂಡ ದೇಶಸೇವೆಯಲ್ಲಿ ತೊಡಗಿಸಿಕೊಳ್ಳುವನೆಂಬ ಭರವಸೆ ಇದೆ.
-ಮೇಜರ್‌ ವಿಜಯಚಂದ್ರ

- ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next