Advertisement
ಶಿರಸಿಯಲ್ಲಿ ಹೋಳಿ ವಿಶೇಷ ಬೇಡರ ವೇಷ ಬೇಡರ ವೇಷ ಹಾಕಿಕೊಳ್ಳುವವರು ಹೋಳಿ ದಿವಸದ ಕೆಲವು ಮಾಸಗಳ ಹಿಂದೆಯೇ ಕುಣಿತದ ತಾಲೀಮು ನಡೆಸುತ್ತಿರುತ್ತಾರೆ. ಕುಣಿತದ ದಿನ ಬೇಡರ ವೇಷಕ್ಕೆ ಬೇಕಾದ ಅಲಂಕಾರಿಕ ವಸ್ತುಗಳಾದ ನವಿಲುಗರಿ, ಬಣ್ಣ, ಗೆಜ್ಜೆ, ಮೀಸೆ, ಹತ್ತಿ, ಕೆಂಪುಬಟ್ಟೆ, ಕತ್ತಿ, ಡಾಲು, ಕೈಗೆ ಲಿಂಬೆಹಣ್ಣು ಕಟ್ಟಿಕೊಂಡು ಕುಣಿಯಲು ಸಿದ್ಧರಾಗಿರುತ್ತಾರೆ. ಶಿರಸಿಯಲ್ಲಿ ಬೆಳಗ್ಗೆ ಹುಲಿ ವೇಷ ಇದ್ದರೆ ರಾತ್ರಿ ಬೇಡರ ವೇಷ ಇಲ್ಲಿನ ವಿಶೇಷತೆಯಾಗಿದೆ. ನಗರದ ಬೀದಿ ಬೀದಿಗಳಲ್ಲಿ ಢಣ್ ಢಣಕು ಢಣ್ ಢಣಕು ಶಬ್ದದ ಜೊತೆಗೆ ಪ್ರೇಕ್ಷಕರ ನಡುವೆ ಕತ್ತಿ ಬೀಸುತ್ತ ನವಿಲುಗರಿ ಹೊತ್ತುಕೊಂಡು ಬೇಡನು ಬರುತ್ತಾನೆ. ಬೇಡನು ಇಲ್ಲಿ ಜನರ ಮೈ ನವಿರೇಳಿಸುವೆಂತೆ ಕುಣಿಯುತ್ತಿರುವಾಗ ಆತನ ಹಿಂದೆ ಇಬ್ಬರು ವೇಷವನ್ನು ಹಿಡಿದುಕೊಂಡು ನಿಯಂತ್ರಣ ಮಾಡುತ್ತಾರೆ. ಬೇಡನು ವೇಷಧಾರಿಯಾಗಿ ಕುಣಿಯುವುದನ್ನು ನಗರದ ಜನ ನಿದ್ದೆ ಬಿಟ್ಟು ರಾತ್ರಿಯಿಡೀ ನೋಡಿ ಕಣ್ತುಂಬಿಕೊಳ್ಳುತ್ತಾರೆ.
ಶಿರಸಿಯ ಇಂತಹ ವಿಶಿಷ್ಟವಾದ ಆಚರಣೆಗೆ ಸುಮಾರು 300 ವರ್ಷಗಳ ಇತಿಹಾಸವಿದೆ. ವಿಜಯನಗರದ ಅರಸರ ಅವಸಾನದ ನಂತರ ಆರಂಭವಾದದ್ದು ಸೋಂದಾರಾಜರ ಆಳ್ವಿಕೆ. ಮುಸ್ಲಿಂ ದಂಡುಕೋರರ ಭೀತಿಯಿದ್ದಿದ್ದರಿಂದ ಈ ಭಾಗದ ರಕ್ಷಣೆಗಾಗಿ ಸೋಂದಾ ಅರಸರು ಬೇಡರ ಜನಾಂಗಕ್ಕೆ ಸೇರಿದ ಮಲ್ಲೇಶಿ ಎಂಬ ಯುವ ವೀರನನ್ನು ನೇಮಿಸುತ್ತಾರೆ. ಅಪ್ರತಿಮ ಸಾಹಸಿಗನಾಗಿದ್ದ ಮಲ್ಲೇಷಿಗೆ ಕ್ರಮೇಣ ಅಧಿಕಾರದ ಮದವೇರುತ್ತದೆ. ಸ್ತ್ರೀಲೋಲನೂ ಆಗಿದ್ದ ಆತನ ಹಿಂಸೆಯನ್ನು ಜನರು ತಾಳದಾಗುತ್ತಾರೆ. ರಾತ್ರಿವೇಳೆ ತಮಟೆ ತಾಳಕ್ಕೆ ನರ್ತಿಸುತ್ತ ಗಸ್ತು ತಿರುಗುವ ಈತನ ಕಣ್ಣು ದಾಸಪ್ಪ ಶೆಟ್ಟಿ ಎಂಬಾತನ ಮಗಳು ರುದ್ರಾಂಬಿಕಾಳ ಮೇಲೆ ಬೀಳುತ್ತದೆ. ಸಮಾಜ ಕಲ್ಯಾಣಕ್ಕಾಗಿ ಆಕೆ ತನ್ನ ಜೀವವನ್ನು ಪಣಕ್ಕಿಡಲು ಒಪ್ಪಿ ಮಲ್ಲೇಶಿಯನ್ನು ವರಿಸುತ್ತಾಳೆ. ಹೋಳಿ ಹುಣ್ಣಿಮೆಯ ದಿನದಂದು ರಾತ್ರಿಯ ವೇಳೆ ಎಂದಿನಂತೆ ಕುಣಿಯುತ್ತಿದ್ದ ಗಂಡನ ಮುಖದ ಮೇಲೆ ಆಮ್ಲವನ್ನು ಎರಚುತ್ತಾಳೆ. ಇದರಿಂದ ಮಲ್ಲೇಶಿಯ ಕಣ್ಣು ಕಾಣಿಸದಾಗುತ್ತದೆ. ಆದರೂ ಆತ ಆಕೆಯನ್ನು ಅಟ್ಟಿಸಿಕೊಂಡು ಬರುತ್ತಾನೆ. ಈ ವೇಳೆ 12 ಜನ ಸ್ಥಳೀಯರು ಆತನನ್ನು ಹಿಡಿದು ಕಟ್ಟಿಹಾಕಿ ಜೀವಂತವಾಗಿ ಸುಡುತ್ತಾರೆ. ಈ ಕ್ಷಣವೇ ರುದ್ರಾಂಬಿಕಾ ಪತಿಯ ಚಿತೆಗೆ ಹಾರಿ ಪ್ರಾಣ ಬಿಡುತ್ತಾಳೆ. ಆಕೆಯ ತ್ಯಾಗದ ಸಂಕೇತವಾಗಿ ಬೇಡರ ವೇಷವನ್ನು ಹೋಳಿ ದಿನದಂದು ಶಿರಸಿಯಲ್ಲಿ ಆಚರಿಸಲಾಗುತ್ತದೆ. ಕೊನೆಯ ದಿನ ಅಂದರೆ ಹುಣ್ಣಿಮೆಯ ಹಿಂದಿನ ದಿನ ರಾತ್ರಿ ಸರಿಸುಮಾರು 50ಕ್ಕೂ ಹೆಚ್ಚು ಬೇಡರ ವೇಷದ ತಂಡಗಳು ರಸ್ತೆಯನ್ನಾಕ್ರಮಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ತಬ್ಧಚಿತ್ರಗಳೂ, ಛದ್ಮವೇಷಧಾರಿಗಳೂ, ಡೀಜೆ, ಸಂಗೀತ ಇವುಗಳೆಲ್ಲವೂ ಸೇರ್ಪಡೆಯಾಗಿವೆ.ಶಿರಸಿಯ ಜನರು ಹೋಳಿ ದಿನದಂದು ಹರಕೆಯನ್ನು ಹೊತ್ತುಕೊಂಡು ಈಡೇರಿದಾಗ ಹಗಲು ಹುಲಿವೇಷ ಹಾಕುತ್ತಾರೆ. ಇದು ತಲತಲಾಂತರದಿಂದ ನಡೆದು ಬಂದ ಸಂಪ್ರದಾಯವಾಗಿದೆ. – ಅಶ್ವಿತ
ಎಂಸಿಜೆ, ಮಂಗಳೂರು ವಿ. ವಿ.