ಲಕ್ನೋ:ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಸವಾಲೊಡ್ಡಲು ಸಮಾಜವಾದಿ ಪಕ್ಷ ಸಿದ್ಧತೆ ನಡೆಸುತ್ತಿರುವ ನಡುವೆಯೇ ಶನಿವಾರ(ಡಿಸೆಂಬರ್ 18) ಬೆಳಗ್ಗೆ ಅಖಿಲೇಶ್ ಯಾದವ್ ನಿಕಟವರ್ತಿಗಳು ಹಾಗೂ ಸಮಾಜವಾದಿ ಪಕ್ಷದ ಮುಖಂಡ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ದಾಳಿ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ರೋಹಿತ್ ಶರ್ಮಾ ಗಾಯಾಳು: ಟೆಸ್ಟ್ ಉಪನಾಯಕ ಸ್ಥಾನಕ್ಕೆ ಕೆ.ಎಲ್.ರಾಹುಲ್ ನೇಮಕ
“ ಚುನಾವಣೆ ಸಮೀಪಿಸುತ್ತಿರುವಾಗ ಆದಾಯ ತೆರಿಗೆ ಇಲಾಖೆಯವರೂ ಬರುತ್ತಾರೆ, ಜಾರಿ ನಿರ್ದೇಶನಾಲಯ, ಸಿಬಿಐ ಕೂಡಾ ದಾಳಿ ನಡೆಸುತ್ತದೆ. ನಾವು ಕೂಡಾ ಇದಕ್ಕಾಗಿ ಕಾಯುತ್ತಿದ್ದೇವೆ. ಆದರೆ ಸೈಕಲ್ (ಸಮಾಜವಾದಿ ಪಕ್ಷದ ಚಿಹ್ನೆ) ನಿಲ್ಲುವುದಿಲ್ಲ. ನಾವು ನಮ್ಮ ಸಿದ್ಧತೆಯನ್ನು ಮುಂದುವರಿಸುತ್ತೇವೆ. ಈ ಮೊದಲೇ ರಾಜೀವ್ ರೈ ಅವರ ನಿವಾಸ, ಕಚೇರಿ ಮೇಲೆ ದಾಳಿ ನಡೆಸಿಲ್ಲ? ಈಗ ಯಾಕೆ, ಚುನಾವಣೆ ಹತ್ತಿರ ಬಂದಿರುವುದೇ ಕಾರಣ ಎಂದು ಅಖಿಲೇಶ್ ಆರೋಪಿಸಿದ್ದಾರೆ.
ಭಾರತೀಯ ಜನತಾ ಪಕ್ಷ ಕೂಡಾ ಕಾಂಗ್ರೆಸ್ ಹಾದಿಯನ್ನೇ ಹಿಡಿದಿದೆ. ಈ ಹಿಂದೆ ಕಾಂಗ್ರೆಸ್ ಕೂಡಾ ಯಾರನ್ನಾದರೂ ಹೆದರಿಸಲು, ಒತ್ತಡ ಹೇರಲು ಈ ತಂತ್ರ ಅನುಸರಿಸುತ್ತಿತ್ತು. ಈಗ ಬಿಜೆಪಿ ಕೂಡಾ ಕಾಂಗ್ರೆಸ್ ನ ತಂತ್ರವನ್ನೇ ಅನುಸರಿಸುತ್ತಿದೆ. ಈ ದಾಳಿಗಳನ್ನು ಚುನಾವಣೆಗಿಂತ ಮೊದಲು ಯಾಕೆ ನಡೆಸುತ್ತಿಲ್ಲ? ಆದಾಯ ತೆರಿಗೆ ಇಲಾಖೆ ಕೂಡಾ ಚುನಾವಣಾ ಆಯೋಗದ ಜತೆ ಕೈಜೋಡಿಸಿರುವಂತೆ ಕಂಡುಬರುತ್ತಿದೆ ಎಂದು ಅಖಿಲೇಶ್ ದೂರಿದರು.
ಇಂದು ಬೆಳಗ್ಗೆ ಸಮಾಜವಾದಿ ಪಕ್ಷದ ಮುಖಂಡ, ಪಕ್ಷದ ವಕ್ತಾರ ರಾಜೀವ್ ರೈ, ಅಖಿಲೇಶ್ ಯಾದವ್ ಖಾಸಗಿ ಕಾರ್ಯದರ್ಶಿ ಜೈನೇಂದ್ರ ಯಾದವ್ ಹಾಗೂ ಪಕ್ಷದ ಮುಖಂಡ ಮನೋಜ್ ಯಾದವ್ ಮನೆ, ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ಪೂರ್ವ ಉತ್ತರಪ್ರದೇಶದ ಮೌ ಜಿಲ್ಲೆಯಲ್ಲಿರುವ ರಾಜೀವ್ ರೈ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಕರ್ನಾಟಕದಲ್ಲಿಯೂ ರೈ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.