Advertisement

ಸಮಸ್ಯೆಗಳೆದುರು ಉಸ್ತುವಾರಿಗಳು ಸುಸ್ತು!

05:16 PM Jan 28, 2018 | Team Udayavani |

ರಾಯಚೂರು: ಜಿಲ್ಲೆಗೆ ಮತ್ತೂಮ್ಮೆ ಉಸ್ತುವಾರಿ ಸಚಿವರ ಬದಲಾವಣೆಯಾಗಿದೆ. ಈ ಮುಂಚೆ ಕಾರ್ಯ ನಿರ್ವಹಿಸಿದ ಮೂವರು ಸಚಿವರು ಜಿಲ್ಲೆಯ ಸಮಸ್ಯೆಗಳೆದುರು ಸುಸ್ತು ಹೊಡೆದವರೆ. ಆದರೆ, ಕೊನೆ ಗಳಿಗೆಯಲ್ಲಿ ಆಗಮಿಸುತ್ತಿರುವ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಎದುರು ಅದೇ ಸಮಸ್ಯೆಗಳಿದ್ದರೂ ಜಿಲ್ಲೆಯ ಜನರಿಗೆ ಮಾತ್ರ ಬದಲಾವಣೆ ನಿರೀಕ್ಷೆಗಳಂತೂ ಉಳಿದಿಲ್ಲ.

Advertisement

ಸಚಿವ ಸ್ಥಾನ ಹಂಚಿಕೆಯಲ್ಲಿ ಜಿಲ್ಲೆಗೆ ಅನ್ಯಾಯವಾಗಿದೆ ಎಂಬ ಕೂಗು ಮೊದಲಿನಿಂದಲೂ ಇದೆ. ನಾಲ್ವರು ಶಾಸಕರನ್ನು ಗೆಲ್ಲಿಸಿದ್ದರೂ ಸಚಿವ ಸ್ಥಾನ ನೀಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದಾರಿತನ ತೋರಲಿಲ್ಲ. ಆದರೆ, ಉಸ್ತುವಾರಿ ಸಚಿವರನ್ನು ಮಾತ್ರ ಸಾಕೆನ್ನಿಸುವಷ್ಟು ನೀಡುತ್ತಿದ್ದಾರೆ.

ಆರಂಭದಲ್ಲಿ ವೈದ್ಯಕೀಯ ಸಚಿವ ಶರಣಪ್ರಕಾಶ ಪಾಟೀಲ್‌ರನ್ನು ನಿಯೋಜಿಸಲಾಗಿತ್ತು. ಅದಾದ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಉಮಾಶ್ರೀ ಆಗಮಿಸಿದರು. ಕೆಲವೇ ತಿಂಗಳಲ್ಲಿ ಪುನಃ ಶರಣಪ್ರಕಾಶ ಪಾಟೀಲ್‌ರನ್ನು ನಿಯೋಜಿಸಲಾಯಿತು. ಕಳೆದ 19 ತಿಂಗಳ ಹಿಂದೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್‌
ಸೇಠ್ಠ…ರಿಗೆ ಉಸ್ತುವಾರಿ ನೀಡಲಾಯಿತು. ಇನ್ನೇನು ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ಅವರ ಹೆಗಲಿಗೆ ಉಸ್ತುವಾರಿ ಹೊಣೆ ಬಿದ್ದಿದೆ.

ಪ್ರಮುಖ ಖಾತೆಗಳ ಸಚಿವರೇ ಉಸ್ತುವಾರಿ ಹೊತ್ತರೂ ಜಿಲ್ಲೆಯ ಸಮಸ್ಯೆಗಳು ಇತ್ಯರ್ಥಗೊಂಡಿಲ್ಲ ಎನ್ನುವುದು ವಾಸ್ತವ. ವೈದ್ಯಕೀಯ ಶಿಕ್ಷಣ ಸಚಿವರೇ ಉಸ್ತುವಾರಿಯಾದರೂ ಓಪೆಕ್‌ ಆಸ್ಪತ್ರೆ ಜನರಿಗೆ ಹತ್ತಿರವಾಗಲಿಲ್ಲ. ರಿಮ್ಸ್‌ನಲ್ಲಿ ವೈದ್ಯರ ಕೊರತೆಯಾಗಲಿ, ಸೌಲಭ್ಯಗಳ ಸಮಸ್ಯೆಗಳ ನಿವಾರಣೆಯಾಗಲಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಬಂದರೂ ಜಿಲ್ಲೆಯಲ್ಲಿ ಅಪೌಷ್ಟಿಕ ಸಮಸ್ಯೆಯಿಂದ ಬಳಲುವ ತಾಯಂದಿರ, ಮಕ್ಕಳ ಸಂಖ್ಯೆ ಕಡಿಮೆಯಾಗಲಿಲ್ಲ. ವಿಪರ್ಯಾಸವೆಂದರೆ ಈಚೆಗೆ ಆರಂಭವಾದ ಮಾತೃಪೂರ್ಣ ಯೋಜನೆಗೆ ತಟ್ಟೆಗಳ ಕೊರತೆ ಇದೆ ಎಂದರೆ ವಾಸ್ತವ ಏನೆಂಬುದು ಅರ್ಥವಾಗಬಹುದು.

ಶಿಕ್ಷಣ ಸಚಿವರು ಜಿಲ್ಲೆಗೆ ಬಂದ ಮೇಲಂತೂ ನಿರೀಕ್ಷೆಗಳ ಗರಿಗೆದರಿದ್ದವು. ಅಳಿವಿನಂಚಿನಲ್ಲಿರುವ ಶಾಲಾ ಕೊಠಡಿಗಳ ದುರಸ್ತಿ, ಶಿಕ್ಷಕರ ಕೊರತೆ, ಗಡಿ ಭಾಗದ ಶಾಲೆಗಳ ಸಬಲೀಕರಣದಂಥ ಸಮಸ್ಯೆಗಳಿಗೆ ಮುಕ್ತಿ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಯಾವೊಂದು ಸಮಸ್ಯೆ ಬಗೆಹರಿಯಲಿಲ್ಲ. ಈಗ ಸಾರಿಗೆ ಸಚಿವರು ಉಸ್ತುವಾರಿ ಹೊತ್ತಿದ್ದು, ಜಿಲ್ಲೆಯ ಸಾರಿಗೆ ಸಮಸ್ಯೆಯಾದರೂ ಅಲ್ಪಮಟ್ಟಿಗೆ ನಿವಾರಣೆಯಾದೀತೆ ಎಂಬ ಕುತೂಹಲ ಮೂಡಿದೆ.

Advertisement

ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗಾದರೂ ಮುಕ್ತಿ ಸಿಕ್ಕೀತೆ ಎಂದರೆ ಅಲ್ಲೂ ಮೂಗಿಗೆ ತುಪ್ಪ ಸವರುವ ಕೆಲಸವೇ ನಡೆದಿದೆ. ಸ್ವಾತಂತ್ರ್ಯ ದಿನೋತ್ಸವ, ಗಣರಾಜ್ಯೋತ್ಸವ, ರಾಜ್ಯೋತ್ಸವ ಇಲ್ಲವೇ ಹೈ-ಕ ವಿಮೋಚನೆ ದಿನಗಳಿಗೆ ಬಂದು ಧ್ವಜಾರೋಹಣ ನೆರವೇರಿಸಲು ಉಸ್ತುವಾರಿ ಸಚಿವರು ಸೀಮಿತ ಎನ್ನುವಂತಾಗಿದೆ. ಜಿಲ್ಲಾ ಪಂಚಾಯತಿ ಪ್ರಗತಿ
ಪರಿಶೀಲನೆ ಸಭೆಗಳು ನೆಪಮಾತ್ರಕ್ಕೆ, ಮನ ಬಂದಾಗ ನಡೆಸಿದ್ದೂ ಇದೆ. ಸರ್ಕಾರ ಅ ಧಿಕಾರಕ್ಕೆ ಬಂದಾಗ ಶುರುವಾದ ಹಲವು ಕಾಮಗಾರಿಗಳು ಇಂದಿಗೂ ಚಾಲ್ತಿಯಲ್ಲಿವೆ. ಪ್ರತಿ ಸಾರಿ ಬಂದಾಗ ಶೀಘ್ರದಲ್ಲೇ ಮುಗಿಸಲಾಗುವುದು ಎಂಬ ಹುಸಿ ಭರವಸೆ ಒಂದೇ ಸಿಗುತ್ತಿತ್ತು.

ಒಟ್ಟಾರೆ ಜಿಲ್ಲೆಗೆ ಉಸ್ತುವಾರಿ ಸಚಿವರು ಪದೇಪದೆ ಬದಲಾಗಿರುವುದು ಎಷ್ಟು ಸತ್ಯವೋ ಸ್ಥಿತಿಗತಿ ಮಾತ್ರ ಬದಲಾಗದಿರುವುದು ಅಷ್ಟೇ ಸತ್ಯ. ಸಾರಿಗೆ ಸಚಿವರಾದರೂ ಕಾಟಾಚಾರಕ್ಕೆ ಹಾಜರ್‌ ಹಾಕುವ ಬದಲು ಇರುವ ಅಲ್ಪಾವ ಧಿಯಲ್ಲಿ ಜಿಲ್ಲೆಗೆ ಏನಾದರೂ ಕೊಡುಗೆ ನೀಡಲಿ ಎಂಬುದಷ್ಟೇ ಜಿಲ್ಲೆಯ ಜನರ ಒತ್ತಾಸೆ. 

ಈ ರೀತಿ ಉಸ್ತುವಾರಿ ಸಚಿವರನ್ನು ಪದೇಪದೆ ಬದಲಿಸುವುದ ರಿಂದ ಜಿಲ್ಲೆಯ ಅಭಿವೃದ್ಧಿ ವೇಗಕ್ಕೆ ಕಡಿವಾಣ ಬೀಳಲಿದೆ. ಬೇರೆ ಜಿಲ್ಲೆಯ ಸಚಿವರು ಇಲ್ಲಿಗೆ ಬಂದು ಸಮಸ್ಯೆಗಳನ್ನು ಅರ್ಥೈಸಿಕೊಳ್ಳುವಲ್ಲಿಯೇ ಕಾಲಹರಣವಾಗಲಿದೆ. ಕಳೆದ ಸರ್ಕಾರ ಐವರು ಉಸ್ತುವಾರಿ ಸಚಿವರನ್ನು ನಿಯೋಜಿಸಿದರೆ, ಈ ಸರ್ಕಾರ ನಾಲ್ವರನ್ನು ನಿಯೋಜಿಸಿದೆ. ಅದರ ಬದಲಿಗೆ
ಸ್ಥಳೀಯ ನಾಯಕರಿಗೆ ಸಚಿವ ಸ್ಥಾನ ನೀಡಿದ್ದರೆ ಕನಿಷ್ಠ ಪಕ್ಷ ಜಿಲ್ಲೆಯ ಸಮಸ್ಯೆಗಳಿಗೆ ಅಂತ್ಯ ಹಾಡಬಹುದಿತ್ತು. ಉಸ್ತುವಾರಿ ನಿಯೋಜನೆಯಲ್ಲೂ ರಾಜಕೀಯ ಲೆಕ್ಕಾಚಾರ ಮಾಡುವುದು ಜಿಲ್ಲೆಯ ಪ್ರಗತಿಗೆ ಪೂರಕವಲ್ಲ.
 ರಝಾಕ್‌ ಉಸ್ತಾದ್‌, ಹೈ-ಕ ಹೋರಾಟ ಸಮಿತಿ ಮುಖಂಡ

ಚುನಾವಣೆ ದೃಷ್ಟಿಕೋನ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಅವರಿಗೆ ಉಸ್ತುವಾರಿ ವಹಿಸಿರುವುದರ ಹಿಂದೆ ರಾಜಕೀಯ
ಉದ್ದೇಶವಿದೆ ಎಂಬ ಆರೋಪಗಳು ಇವೆ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತ, ಎಸ್ಸಿ, ಎಸ್ಟಿಯಂತೆ ಕುರುಬ ಮತಗಳು ಮುಖ್ಯವಾಗಿದ್ದು, ಅವುಗಳನ್ನು ಸೆಳೆಯಲು ರೇವಣ್ಣರನ್ನು ನಿಯೋಜಿಸಲಾಗಿದೆ ಎನ್ನಲಾಗುತ್ತಿದೆ. ಚುನಾವಣೆ ಮುನ್ನೆಲೆಯಲ್ಲಿ ಇಂಥ ಬೆಳವಣಿಗೆ ನಡೆದಿರುವುದು ಇಂಥ ಆರೋಪಗಳನ್ನು ಪುಷ್ಟಿಕರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next